Site icon Vistara News

ಕಾಂತರಾಜು ಆಯೋಗದ ವರದಿ ಮಂಡಿಸದೆ ಹಿಂದುಳಿದವರಿಗೆ ಅನ್ಯಾಯ: ಮುಖ್ಯಮಂತ್ರಿ ಚಂದ್ರು

Mukhyamantri Chandru with jayaprakash hegde

ಬೆಂಗಳೂರು: ಎಚ್. ಕಾಂತರಾಜು ಆಯೋಗದ ವರದಿ ರಾಜ್ಯದ ಪ್ರತಿಯೊಂದು ಜಾತಿ, ಉಪಜಾತಿಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ಜನರಿಗೆ ತಿಳಿಸುತ್ತದೆ ಎಂಬ ನಂಬಿಕೆಯನ್ನು ಮೂಡಿಸಿತ್ತು. ಆದರೆ, ಈ ವರದಿ ಇನ್ನೂ ಮಂಡನೆಯಾಗದಿರುವುದು ರಾಜ್ಯದ ಬೊಕ್ಕಸಕ್ಕೆ ಆದ ನಷ್ಟ ಮಾತ್ರವಲ್ಲದೇ, ಹಿಂದುಳಿದ ಜಾತಿಯ ಜನರಿಗೆ ಅನ್ಯಾಯವು ಕೂಡ ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ನಗರದಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಅವರು, ಸರ್ಕಾರವು ಹಿಂದುಳಿದ ವರ್ಗಗಳೆಂದು ಪರಿಗಣಿತವಾದ ಜಾತಿಗಳು ಮತ್ತು ಸಮುದಾಯಗಳ ಉನ್ನತಿಗಾಗಿ ಅನೇಕ ಆಯೋಗಗಳನ್ನು ರಚಿಸಿದೆ. ಈ ಹಿಂದೆ ಎಚ್. ಕಾಂತರಾಜು ಅವರ ನೇತೃತ್ವದಲ್ಲಿ ರಚಿಸಿದ ಆಯೋಗವು 2015ರಲ್ಲಿ ನಡೆಸಿದ ಸಮೀಕ್ಷೆಯ ವರದಿ ಗೆದ್ದಲು ಹಿಡಿಯುತ್ತಿದ್ದರೂ ಇನ್ನೂ ಜಾರಿಯಾಗದಿರುವುದು ವಿಪರ್ಯಾಸ ಎಂದು ಹೇಳಿದರು.

ಇದನ್ನೂ ಓದಿ | Gruha Jyothi Scheme : 1.43 ಕೋಟಿ ಜನರಿಗೆ ಮಾತ್ರ ಈ ಬಾರಿ ಫ್ರೀ ವಿದ್ಯುತ್;‌ ಉಳಿದವರಿಗಿಲ್ಲ!

ಶೈಕ್ಷಣಿಕ ಸವಲತ್ತುಗಳು ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸ್ಥಿತಿಗೆ ಹೋಲಿಕೆ ಮಾಡುವಂತಿರಬೇಕು ಎಂದು ಕೆ.ಸಿ.ವಸಂತ್‌ಕುಮಾರ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತಿಳಿಸಿದೆ. ಜತೆಗೆ ಇಂದಿರಾ ಸಹಾನಿ ಪ್ರಕರಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಲು ಕೈಗೊಳ್ಳುವ ಸಮೀಕ್ಷೆಗೆ ಇಡೀ ರಾಜ್ಯದ ಜನಸಂಖ್ಯೆಯನ್ನು ಒಳಪಡಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಈ ನಿಟ್ಟಿನಲ್ಲಿ ಸರ್ವೊಚ್ಚ ನ್ಯಾಯಾಲಯದ ನಿಯಮ ಪಾಲನೆಯಾಗದಿರುವುದನ್ನು ಆಯೋಗದ ಗಮನಕ್ಕೆ ತಂದಿದ್ದೇವೆ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು.

2015ರಲ್ಲಿದ್ದ ಕಾಂಗ್ರೆಸ್ಸ್ ಸರ್ಕಾರ, 2018ರಲ್ಲಿ ರಚನೆಯಾದ ಮೈತ್ರಿ ಸರ್ಕಾರ ಹಾಗೂ ನಂತರದ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ರಾಜಕೀಯ ಹಿತಾಸಕ್ತಿಯಿಂದ ವರದಿ ಮಂಡನೆಯಾಗಿಲ್ಲ. ಇದು ಶ್ರಮಿಕರ, ಹಿಂದುಳಿದ ವರ್ಗದವರ ವಿರುದ್ಧದ ದೋರಣೆಯಾಗಿದೆ. ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿಗಳು ಸಾರ್ವಜನಿಕ ಸಭೆಯಲ್ಲಿ ವರದಿ ಮಂಡನೆ ಮತ್ತು ಅನುಷ್ಠಾನವನ್ನು ಶೀಘ್ರವೇ ಮಾಡುವುದಾಗಿ ಪ್ರಸ್ತಾಪಿಸಿದ್ದಾರೆ. ಆದ ಕಾರಣ, ಈ ವಿಚಾರದಲ್ಲಿ ಯಾವುದೇ ರೀತಿಯ ಕಾರಣಗಳನ್ನು ನೀಡದೇ ರಾಜ್ಯದ ಜಿ.ಪಂ, ತಾ.ಪಂ, ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನವೇ ವರದಿ ಮಂಡಿಸುವ ಎಲ್ಲಾ ಪ್ರಕ್ರಿಯೆಗಳು ಮುಗಿಯುವಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ | Karnataka Politics : ದೆಹಲಿ ಸಭೆಗೂ ಮುನ್ನ ರಿಪೋರ್ಟ್ ಕಾರ್ಡ್ ಕೊಟ್ಟ ಪ್ರಿಯಾಂಕ್ ಖರ್ಗೆ!

ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ. ನಾಗಣ್ಣ ಇನ್ನಿತರ ಮುಖಂಡರು ಇದ್ದರು.

Exit mobile version