ಬೆಂಗಳೂರು: ಪ್ರಧಾನಿ ಮೋದಿ ಸೋಮವಾರ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಸಕಲ ಸಿದ್ಧತೆಗಳನ್ನು ಮಾಡಲಾಗಿದ್ದು, ಅವರು ಸಂಚರಿಸುವ ರಸ್ತೆಗಳಲ್ಲಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.
ಈ ನಡುವೆ ಕೆಲವು ಫ್ಲೆಕ್ಸ್‌ಗಳಲ್ಲಿ ಕೇವಲ ಹಿಂದಿ ಭಾಷೆ ಬಳಸಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣ ಗೌಡ ಬಣ) ಕಾರ್ಯಕರ್ತರು ಭಾನುವಾರ ಸಂಜೆ ಪ್ರತಿಭಟನೆ ನಡೆಸಿದರಲ್ಲದೆ, ಇಂತಹ ಫ್ಲೆಕ್ಸ್‌ಗಳಿಗೆ ಮಸಿ ಬಳಿದರು.
ಇವರನ್ನು ತಡೆಯಲು ಪೊಲೀಸರು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ನಂತರ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಖ್ಯವಾಗಿ ಮೈಸೂರು ರಸ್ತೆಯಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್ ಗಳಿಗೆ ಮಸಿ ಬಳಿಯಲಾಗಿದೆ.
ರಾಜ್ಯದಲ್ಲಿ ಹಿಂದಿ ಹೇರಿಕೆಯನ್ನು ಒಪ್ಪಿಕೊಳ್ಳುವ ಮಾತೇ ಇಲ್ಲ. ಪ್ರಧಾನಿ ಭೇಟಿ ವೇಳೆ ಹಿಂದಿಗೆ ಆಧ್ಯತೆ ನೀಡದರೆ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಕಾರ್ಯಕರ್ತರು ಎಚ್ಚರಿಸಿದ್ದಾರೆ.
ಸಚಿವ ಮುನಿರತ್ನ ನಾಯ್ಡು ಮತ್ತು ಅವರ ಬೆಂಬಲಿಗರು ಈ ಹಿಂದಿಯ ಫ್ಲೆಕ್ಸ್ ಅಳವಡಿಸಿದ್ದರು ಎನ್ನಲಾಗಿದೆ.
ಈ ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕಾರ್ತಿಕ್, ಪದ್ಮನಾಭನಗರ ಕ್ಷೇತ್ರದ ಅಧ್ಯಕ್ಷ ನಿತೀಶ್ ಮನು ಗೌಡ ಮತ್ತಿತರರು ವಹಿಸಿದ್ದರು. ರಕ್ಷಣಾ ವೇದಿಕೆಯ ಪರವಾಗಿ ಘೋಷಣೆ ಕೂಗುತ್ತಾ ಬಂದು ಫ್ಲೆಕ್ಸ್‌ಗಳಿಗೆ ಮಸಿ ಬಳಿದರು.
ಇದನ್ನೂ ಓದಿ | Chess Olympiad | ಟಾರ್ಚ್ ರಿಲೇ ಉದ್ಘಾಟಿಸಿದ ಪ್ರಧಾನಿ ಮೋದಿ