ಬೆಂಗಳೂರು: ಹೃದಯಾಘಾತದಿಂದ ನಿಧನರಾದ ಕೆ.ಆರ್. ಪುರಂ ಪೊಲೀಸ್ ಇನ್ಸ್‌ಪೆಕ್ಟರ್ ನಂದೀಶ್ ಅವರ ಸಾವಿನ ಪ್ರಕರಣ ಈಗ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಮೆಟ್ಟಿಲು ಹತ್ತಿದೆ.
ಕರ್ತವ್ಯಲೋಪದಡಿ ಅಮಾನತುಗೊಂಡಿದ್ದ ಇನ್ಸ್‌ಪೆಕ್ಟರ್ ನಂದೀಶ್ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಹೀಗಾಗಿ ಅಮಾನತು ಮಾಡಿದ ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಅವರೇ ಪರೋಕ್ಷ ಕಾರಣ ಎಂದು ಆರೋಪಿಸಿ ಜಾನ್ ಪಾಲ್ ಎಂಬವರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ರಾಜಕೀಯ ಒತ್ತಡ ಹಿನ್ನೆಲೆಯಲ್ಲಿ ಇನ್ ಸ್ಪೆಕ್ಟರ್ ನಂದೀಶ್ ಅವರನ್ನು ಪೊಲೀಸ್ ಕಮೀಷನರ್ ಸಸ್ಪೆಂಡ್ ಮಾಡಿರುವುದು ಸರಿಯಲ್ಲ. ಹೀಗಾಗಿ ತನಿಖೆ ನಡೆಸಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಜಾನ್ ಪಾಲ್ ಎಂಬುವರು ಆಯೋಗಕ್ಕೆ ದೂರು ನೀಡಿದ್ದಾರೆ.
ನಂದೀಶ್ ಅವರು ತಮ್ಮ ವ್ಯಾಪ್ತಿಯಲ್ಲಿ ಅವಧಿ ಮೀರಿ ಪಬ್ ತೆರೆಯಲು ಸಹಕರಿಸಿದ್ದರೆಂಬ ಆರೋಪವಿತ್ತು. ಯಾವ ಕಾರಣಕ್ಕೂ ಅವಧಿ ಮೀರಿ ಅನುಮತಿ ನೀಡಬಾರದು ಎಂದು ಹಿಂದೆಯೇ ಕಮೀಷನರ್ ಎಲ್ಲ ಪೊಲೀಸರಿಗೆ ಸೂಚನೆ ನೀಡಿದ್ದರು. ಇದನ್ನು ಮೀರಿ ಅವಕಾಶ ನೀಡಿದ್ದಕ್ಕೆ ಪ್ರತಿಯಾಗಿ ನಗರ ಪೊಲೀಸ್ ಆಯುಕ್ತರು ಕರ್ತವ್ಯ ಲೋಪದಡಿ ನಂದೀಶ್ ಅವರನ್ನು ಸಸ್ಪೆಂಡ್ ಮಾಡಿದ್ದರು.
ಈ ಘಟನೆಯಿಂದ ಮನನೊಂದು ಖಿನ್ನತೆಗೊಳಗಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಸಾವಿಗೆ ಪರೋಕ್ಷ ವಾಗಿ ಕಮೀಷನರ್ ಕಾರಣ ಆಗಿದ್ದಾರೆ ಎನ್ನುವುದು ದೂರಿನ ಸಾರಾಂಶ.
ಪಬ್‌ಗಳು ಅವಧಿ ಮೀರಿ ಕಾರ್ಯಾಚರಿಸುವುದು ಹೊಸದೇನಲ್ಲ. ಇಂದಿಗೂ ಎಂಜಿ ರೋಡ್ ಹಾಗೂ ಬಿಗ್ರೇಡ್ ರೋಡ್ ನಲ್ಲಿ ನೂರಾರು ಕ್ಲಬ್ ಗಳು ಕಾರ್ಯನಿರ್ವಹಿಸುತ್ತಿವೆ. ಅಂತಹ ಕ್ಲಬ್-ಪಬ್‌ಗಳನ್ನು ಬಿಟ್ಟು ನಿರ್ದಿಷ್ಟ ಪಬ್ ವೊಂದು ಅವಧಿ ಮೀರಿ ಓಪನ್ ಮಾಡಿರುವ ಕುರಿತಂತೆ ಇನ್ ಸ್ಪೆಕ್ಟರ್ ಅವರನ್ನ ಅಮಾನತು ಮಾಡಿರುವುದು ಸರಿಯಲ್ಲ. ರಾಜಕೀಯ ವ್ಯಕ್ತಿಯೊಬ್ಬರನ್ನು ಖುಷಿಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಪಾದಿಸಿ ಕಮೀಷನರ್ ವಿರುದ್ಧ ಆಯೋಗಕ್ಕೆ ಜಾನ್ ಪಾಲ್ ದೂರು ನೀಡಿದ್ದಾರೆ.