ಬೆಂಗಳೂರು: ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟಿದ್ದ ಅಮಾನತುಗೊಳಗಾಗಿದ್ದ ಇನ್ಸ್‌ಪೆಕ್ಟರ್ ನಂದೀಶ್ ಸಾವಿನ ಕುರಿತಂತೆ ಸಚಿವ ಎಂಟಿಬಿ ನಾಗರಾಜ್ ಅವರು ಪ್ರಸ್ತಾಪಿಸಿರುವ ೭೦-೮೦ ಲಕ್ಷ ಲಂಚದ ವಿಚಾರವಾಗಿ ಸೂಕ್ತ ತನಿಖೆ ನಡೆಸಬೇಕು. ನೇಮಕಾತಿ ಕುರಿತ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ಎಂಟಿಬಿ ನಾಗರಾಜ್ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ಒತ್ತಾಯಿಸಿ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ ಅಧ್ಯಕ್ಷ ರಾಘವೇಂದ್ರ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಪಬ್‌ವೊಂದನ್ನು ಅವಧಿ ಮೀರಿ ನಡೆಸಲು ಅವಕಾಶ ಮಾಡಿಕೊಟ್ಟಿದ್ದ ಆರೋಪದ ಮೇಲೆ ಅಮಾನತುಗೊಂಡಿದ್ದ ಇನ್ಸ್‌ಪೆಕ್ಟರ್ ನಂದೀಶ್ ಹೃದಯಘಾತದಿಂದ ಈಚೆಗೆ ಮೃತಪಟ್ಟಿದ್ದರು. ಈ ಬಗ್ಗೆ ನಂದೀಶ್ ಪರ-ವಿರೋಧವಾಗಿ ಸಾಕಷ್ಟು ಹೇಳಿಕೆಗಳು ಬಂದಿದ್ದವು. ಸಾವಿನ ಸಂದರ್ಭದಲ್ಲಿ ಸಚಿವ ಎಂಟಿಬಿ ಅವರು, ಪೊಲೀಸ್ ಆಯುಕ್ತರ ಮೇಲೆಯೇ ಹರಿಹಾಯ್ದು, “ಪಬ್‌ವೊಂದು ಅವಧಿ ಮೀರಿ ನಡೆಸಿದೆ ಎಂಬ ಸಣ್ಣ ಕಾರಣಕ್ಕೆ ಅಮಾನತು ಮಾಡಿದ್ದು ಸರಿಯಲ್ಲ” ಎಂದು ಹೇಳಿಕೆ ನೀಡಿದ್ದರು. ಆದರೆ, ಅದಾಗಿ ಕೆಲವು ದಿನಗಳ ಬಳಿಕ ೭೦-೮೦ ಲಕ್ಷ ಕೊಟ್ಟು ಕೆಲಸಕ್ಕೆ ಸೇರಿದ್ದರೆ ಮತ್ತಿನ್ನೇನು ಆಗುತ್ತದೆ? ಅಂಥವರು ಅಮಾನತು ಆಗುತ್ತಾರೆ ಎಂದು ಕಿಡಿಕಾರಿದ್ದರು. ಈ ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಅಲ್ಲದೆ, ಎಂಟಿಬಿ ನಾಗರಾಜ್ ಅವರು ಸ್ವತಃ ಸಚಿವರಾಗಿರುವುದರಿಂದ ಸರ್ಕಾರದ ಭಾಗವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನೀಡಿರುವ ಹೇಳಿಕೆಗೆ ಮೌಲ್ಯ ಹೆಚ್ಚಾಗಿದೆ. ಅಲ್ಲದೆ, ಪೊಲೀಸರು ತಾವು ಹುದ್ದೆಗೆ ಸೇರುವ ವೇಳೆ ಇರುವ ಆತ್ಮಸ್ಥೈರ್ಯವು ಸೇವೆಗೆ ಸೇರಿದ ಬಳಿಕ ಇರುವುದಿಲ್ಲ. ಪೊಲೀಸರು ಭ್ರಷ್ಟರಾಗಲು ನಮ್ಮ ಸರ್ಕಾರಗಳೇ ಕಾರಣ. ಅಲ್ಲದೆ, ೭೦-೮೦ ಲಕ್ಷ ರೂಪಾಯಿ ಕೊಟ್ಟು ನೇಮಕಾತಿ ಆಗುವ ವಿಚಾರವಾಗಿ ಪೊಲೀಸ್ ಇಲಾಖೆ ಮಾತ್ರವಲ್ಲದೆ, ಇತರೆ ಇಲಾಖೆಗಳಲ್ಲಿ ನಡೆಯುವ ತಹಸೀಲ್ದಾರ್, ಉಪ ವಿಭಾಗಾಧಿಕಾರಿಗಳು, ಸಬ್ ರಿಜಿಸ್ಟ್ರಾರ್‌ಗಳಂತಹ ಹುದ್ದೆಗಳಿಗೂ ಲಂಚ ಸ್ವೀಕರಿಸಲಾಗುತ್ತಿದೆಯೇ ಎಂಬ ವಿಚಾರವಾಗಿಯೂ ತನಿಖೆ ನಡೆಸಬೇಕು. ಹೀಗಾಗಿ ಸಚಿವರಿಬ್ಬರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ | ನಂದೀಶ್ ಸಾವು| 70-80 ಲಕ್ಷ ಹೇಳಿಕೆಗೆ ಸಚಿವ ಎಂಟಿಬಿ ಮೊದಲ ಪ್ರತಿಕ್ರಿಯೆ, ಏನು ಹೇಳಿದರು?