Site icon Vistara News

Bangalore-Mysore Expressway: ಅತಿ ವೇಗದ ವಾಹನಗಳ ಮೇಲೆ ಕಣ್ಣಿಡಲು ಎಐ ಕ್ಯಾಮೆರಾಗಳ ಅಳವಡಿಕೆ

Installation of AI cameras

ಮೈಸೂರು: ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಈಗಾಗಲೇ ವಾಹನಗಳಿಗೆ ವೇಗ ಮಿತಿ ಜಾರಿಗೊಳಿಸಲಾಗಿದೆ. ಇದೀಗ ಅತಿ ವೇಗವಾಗಿ ಸಂಚರಿಸುವ ವಾಹನಗಳು ಹಾಗೂ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಸವಾರರ ಮೇಲೆ ಕಣ್ಣಿಡಲು ಹೆದ್ದಾರಿಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕ್ಯಾಮೆರಾಗಳನ್ನು ಸಂಚಾರ ಪೊಲೀಸ್‌ ವಿಭಾಗ ಅಳವಡಿಸಿದೆ.

ಎಕ್ಸ್‌ಪ್ರೆಸ್‌ ವೇನಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಈಗಾಗಲೇ ವಾಹನಗಳಿಗೆ ವೇಗ ಮಿತಿ ಜಾರಿಗೊಳಿಸಲಾಗಿದೆ. ಪ್ರತಿ ಗಂಟೆಗೆ ಗರಿಷ್ಠ 100 ಕಿ‌.ಮೀ ವೇಗ ಮಿತಿ ನಿಗದಿಪಡಿಸಲಾಗಿದೆ. ಏಕಮುಖ ಮಾರ್ಗದಲ್ಲಿ ಎಡಭಾಗದ ಪಥಕ್ಕೆ 60 ಕಿ.ಮೀ, ಮಧ್ಯದ ಪಥಕ್ಕೆ 80 ಕಿ.ಮೀ ಹಾಗೂ ಬಲಭಾಗದ ಪಥಕ್ಕೆ ಕಿ‌.ಮೀ ವೇಗ ಮಿತಿ ಇದೆ. ಅತಿ ವೇಗಕ್ಕೆ ಕಡಿವಾಣ ಹಾಕಲು ಈಗಾಗಲೇ ಪೊಲೀಸರು ದಂಡಾಸ್ತ್ರ ಪ್ರಯೋಗಿಸುತ್ತಿದ್ದಾರೆ. ಇದರಿಂದ ಅಪಘಾತಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಅವರು, ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಪರಿಶೀಲನೆ ನಡೆಸಲಾಗಿದೆ. ಅತಿ ವೇಗವಾಗಿ ಸಂಚರಿಸುವ ವಾಹನಗಳನ್ನು ಗುರುತಿಸಲು ಪ್ರಾಯೋಗಿವಾಗಿ ಎಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನು ಮೈಸೂರು ನಗರದಲ್ಲಿ ಶೀಘ್ರದಲ್ಲೇ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಪರಿಚಯಿಸಲಾಗುತ್ತದೆ. ಈ ಬಗ್ಗೆ ನಾಗರಿಕರು ಸಲಹೆಗಳನ್ನು ನೀಡಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Dating App: ಡೇಟಿಂಗ್‌ ಆ್ಯಪ್‌ ಯುವಕರ ಭೇಟಿಗೂ ಮುನ್ನ ಎಚ್ಚರ; ಹೋಟೆಲ್‌ಗೆ ಕರೆಸಿ ಯುವತಿಯನ್ನು ರೇಪ್‌ ಮಾಡಿದ ದುಷ್ಟ

ಹೆದ್ದಾರಿಯಲ್ಲಿ ಸುಮಾರು 25 ಅಪಘಾತ ವಲಯಗಳು

ಬೆಂಗಳೂರು- ಮೈಸೂರು ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಹೆದ್ದಾರಿಯಲ್ಲಿ ಸುಮಾರು 25 ಅಪಘಾತ ವಲಯಗಳು ಇವೆ. ಎಲ್ಲ ಕಡೆ ನಾನು ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಸಿಸಿ ಕ್ಯಾಮೆರಾಗಳ ಅಳವಡಿಕೆ ಸೇರಿ ಹಲವು ಕಾಮಗಾರಿ ಬಾಕಿ ಇದೆ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರನ್ನು ಕೇಳಿ ಕಾಮಗಾರಿ ಮಾಡಿಲ್ಲ. ಸಮಸ್ಯೆ ಆದಾಗ ಸರಿ ಮಾಡಿ ಅಂತ ನಮ್ಮನ್ನು ಕರೆಯುತ್ತಾರೆ. ಎಕ್ಸ್‌ಪ್ರೆಸ್‌ ವೇನಲ್ಲಿ ಹಲವಾರು ಸಮಸ್ಯೆಗಳಿವೆ, ಅನೇಕ ಕಾಮಗಾರಿಗಳು ಬಾಕಿ ಉಳಿದಿವೆ. ಈಗಾಗಲೇ ಹೆದ್ದಾರಿ ಉದ್ಘಾಟನೆ ಆಗಿದೆ, ಬಾಕಿ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ತಂದು ಕೆಲಸ ಮಾಡಿಸುವುದು ಎನ್‌ಎಚ್‌ಎಐ ಅಧಿಕಾರಿಗಳ ಕೆಲಸವಾಗಿದೆ. ಸರ್ಕಾರದ ನಿಯಮಗಳ ಪ್ರಕಾರ ಪ್ರಸ್ತಾವನೆ, ಟೆಂಡರ್ ಮಾಡಿ ಕೆಲಸ ಮಾಡಿಸಬೇಕಿದೆ ಎಂದು ಹೇಳಿದ್ದಾರೆ.

ದ್ವಿಚಕ್ರ, ತ್ರಿಚಕ್ರ ವಾಹನ ನಿರ್ಬಂಧಕ್ಕೆ ಸಮರ್ಥನೆ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ನಿರ್ಬಂಧ ವಿಧಿಸಿರುವುದನ್ನು ಎಡಿಜಿಪಿ ಅಲೋಕ್ ಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಎಕ್ಸ್‌ಪ್ರೆಸ್‌ ವೇನಲ್ಲಿ ನಡೆದ ಅಪಘಾತಗಳಲ್ಲಿ ಮೃತಪಟ್ಟ ಬಹುತೇಕರು ಬೈಕ್ ಸವಾರರು. 150 ಸಿಸಿ ವಾಹನಗಳಲ್ಲಿ ಹೆಚ್ಚು ವೇಗದಲ್ಲಿ ಹೋಗಲು ಸಾಧ್ಯವಿಲ್ಲ. ಆಟೋ ರಿಕ್ಷಾದಂತಹ ವಾಹನಗಳ ವೇಗ ಇನ್ನೂ ಕಡಿಮೆ ಇರುತ್ತದೆ. ಎತ್ತಿನಗಾಡಿ, ಕುದುರೆಗಾಡಿಯಂತಹ ಮೋಟಾರ್ ರಹಿತ ವಾಹನಗಳನ್ನು ಬಿಡಲು ಸಾಧ್ಯವೇ ಇಲ್ಲ. ಈ ಸಂಬಂಧ ಜುಲೈ 12ರಂದು ನೋಟಿಫಿಕೇಷನ್ ಕೂಡ ಆಗಿದೆ. ಆಗಸ್ಟ್ 1ರಿಂದ ನಿಯಮ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ಹೆದ್ದಾರಿಯಲ್ಲಿ ಗ್ರಿಲ್, ವಿದ್ಯುತ್ ಕಂಬಗಳ ಕಳ್ಳತನ ವಿಚಾರಕ್ಕೆ ಸ್ಪಂದಿಸಿ, ಎನ್‌ಎಚ್‌ಎಐ ಅಧಿಕಾರಿಗಳು ಒಂದೇ ಒಂದು ದೂರು ಕೊಟ್ಟಿಲ್ಲ. ತಡೆಗೋಡೆ ಗ್ರಿಲ್ ಕಳ್ಳತನದಿಂದ ಜಾನುವಾರು, ಪಾದಚಾರಿಗಳು ರಸ್ತೆಗೆ ಬರುತ್ತಿದ್ದಾರೆ. ಇದರಿಂದಾಗಿ ಅಪಘಾತ ಆಗುತ್ತಿವೆ ಎಂದು ಹೇಳುತ್ತಾರೆ. ಆದರೆ, ಪೊಲೀಸರಿಗೆ ದೂರು ಕೊಟ್ಟಿಲ್ಲ. ದರೋಡೆ ಪ್ರಕರಣಗಳ ವಿಚಾರವನ್ನೂ ನಮ್ಮ ಗಮನಕ್ಕೆ ತಂದಿಲ್ಲ. ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾಗಳಿಂದ ಪೊಲೀಸರಿಗೆ ಅನುಕೂಲ

ಹಿಂದೆಲ್ಲ ಪೊಲೀಸರನ್ನು ಮೂರನೇ ಕಣ್ಣು ಎನ್ನುತ್ತಿದ್ದರು. ಈಗ ಪೊಲೀಸರಿಗೆ ಸಾವಿರ ಕಣ್ಣುಗಳಿವೆ.
ಹುಡುಗರು ವ್ಹೀಲಿಂಗ್ ಮಾಡಿ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾರೆ. ಪೊಲೀಸರು ಸೋಷಿಯಲ್ ಮೀಡಿಯಾ ನೋಡಿ ಕೇಸ್ ಹಾಕುತ್ತಾರೆ. ಒಂದು ರೀತಿಯಲ್ಲಿ ಸೋಷಿಯಲ್ ಮೀಡಿಯಾಗಳ ಕ್ರೇಜ್‌ನಿಂದ ಪೊಲೀಸರಿಗೆ ಅನುಕೂಲ ಆಗಿದೆ ಎಂದು ಅಲೋಕ್‌ ಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ | Lok Sabha Election 2024 : ಬಿಜೆಪಿಯಿಂದ ಹೊರಗೆ ಕಾಲಿಟ್ಟರೇ ಸುಮಲತಾ?

ಬಹುತೇಕರು ಟ್ರಾಫಿಕ್ಸ್ ರೂಲ್ಸ್ ಬಗ್ಗೆ ಉದ್ದುದ್ದ ಪೋಸ್ಟ್ ಹಾಕುತ್ತಾರೆ, ಟ್ವೀಟ್ ಮಾಡುತ್ತಾರೆ. ಅಂತಹವರೇ ಹೆಚ್ಚಾಗಿ ರೂಲ್ಸ್ ಬ್ರೇಕ್ ಮಾಡುತ್ತಾರೆ. ಮೊದಲೆಲ್ಲ ನಿಯಮ ಉಲ್ಲಂಘಿಸುವವರು ಪೊಲೀಸರ ವಾಹ‌ನ ನೋಡಿಕೊಳ್ಳುತ್ತಿದ್ದರು. ಈಗ ಕಾರುಗಳಲ್ಲೇ ಬೋರ್ಡ್ ಕ್ಯಾಮೆರಾಗಳು ಇರುತ್ತವೆ. ಜ‌ನ ಕೂಡ ರೂಲ್ಸ್ ಉಲ್ಲಂಘಿಸುವವರನ್ನು ವಿಡಿಯೋ ಮಾಡಿ ಪೊಲೀಸರಿಗೆ ಕಳುಹಿಸುತ್ತಿದ್ದಾರೆ. ಅವುಗಳ ಆಧಾರದ ಮೇಲೆಯೂ ಕೇಸ್ ಹಾಕುತ್ತಿದ್ದೇವೆ. ಪೊಲೀಸರ ಕಣ್ತಪ್ಪಿಸುವುದು ಸವಾರರ ಸಾಧನೆ ಆಗಬಾರದು. ದಂಡ ಹಾಕುವುದಕ್ಕಿಂತ ಜೀವ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ.

Exit mobile version