Site icon Vistara News

Congress Guarantee : ಹೂ ಈಸ್‌ ಯುವರ್‌ ಯಜಮಾನಿ? ಸಿದ್ದರಾಮಯ್ಯ ಸುದ್ದಿಗೋಷ್ಠಿಯ ತಮಾಷೆ ಪ್ರಸಂಗಗಳು ಇಲ್ಲಿವೆ!

Siddaramaiah

ಬೆಂಗಳೂರು: ಅಧಿಕಾರಕ್ಕೆ ಬಂದರೆ ಘೋಷಣೆ ಮಾಡಿರುವ 5 ಗ್ಯಾರಂಟಿಯನ್ನು (Congress Guarantee) ಜಾರಿಗೆ ತರುವುದಾಗಿ ಕಾಂಗ್ರೆಸ್‌ ಮುಖಂಡರು ಮಾತು ಕೊಟ್ಟಿದ್ದರು. ಈಗ ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಐದೂ ಗ್ಯಾರಂಟಿಯನ್ನು ಜಾರಿಗೆ ತರುವ ಮಾತನಾಡಿದ್ದಾರೆ. ಈ ವೇಳೆ ಅವರು ತಮ್ಮ ಎಂದಿನ ಶೈಲಿಯಲ್ಲಿ, ತಮ್ಮದೇ ಧಾಟಿಯಲ್ಲಿ ಉತ್ತರಿಸುವ ಮೂಲಕ ಅಲ್ಲಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು. ಅಲ್ಲದೆ, ಕೆಲವೊಂದು ಪ್ರಶ್ನೆಗಳಿಗೆ ಕಿರಿಕಿರಿಗೊಳಪಟ್ಟು, ತಾಳ್ಮೆ ಕಳೆದುಕೊಂಡು ಮಾತನಾಡಿದರು. “ಹೂ ಈಸ್‌ ಯುವರ್‌ ಯಜಮಾನಿ”, ನನ್‌ ಹೆಂಡ್ತಿಗೂ ಬಸ್‌ ಪ್ರಯಾಣ ಫ್ರೀ ಎಂದು ಖುಷಿಯಿಂದಲೇ ಮಾತನಾಡಿದರು. ಅವರ ಕೆಲವೊಂದು ಹೇಳಿಕೆಗಳ ಝಲಕ್‌ ಇಲ್ಲಿದೆ.

ಗೃಹಲಕ್ಷ್ಮಿ ಘೋಷಣೆ ವೇಳೆ ಸಿದ್ದರಾಮಯ್ಯ ಗರಂ

ಗೃಹ ಲಕ್ಷ್ಮಿ ಯೋಜನೆಯಲ್ಲಿ ಆಗಸ್ಟ್‌ 15ರಂದು ಮನೆಯ ಯಜಮಾನಿಗೆ 2 ಸಾವಿರ ರೂಪಾಯಿಯನ್ನು ಅವರ ಖಾತೆಗೆ ಹಾಕುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡುತ್ತಿದ್ದಂತೆ, ಮಾಧ್ಯಮದವರು ಪ್ರಶ್ನೆ ಕೇಳಲು ಮುಂದಾದರು. ಆಗ ಸಿಟ್ಟಾದ ಸಿದ್ದರಾಮಯ್ಯ, ಆಮೇಲೆ ಕೇಳಿ ಎಂದು ಹೇಳಿದರು. ಆದರೂ ಪ್ರಶ್ನೆ ಕೇಳಿದ್ದಕ್ಕೆ, “ಏ ಅವ್ರಿಗೆ ಹೇಳ್ರೀ..” ಎಂದು ಗರಂ ಆದರು. ಯಜಮಾನಿ ಆದವರು, ಬೋತ್‌ ಎಪಿಎಲ್‌ ಆ್ಯಂಡ್ ಬಿಪಿಎಲ್‌ ಎಂದು ಒತ್ತಿ ಹೇಳಿದರು. ನೀವ್‌ ಪತ್ರಿಕೆಯಲ್ಲಿ ಏನೇನೋ ಬರೆದ ಹಾಗಲ್ಲ.. ಅತ್ತೇನೋ ಸೋಸೇನೋ..? ಅದೆಲ್ಲಾ ಇಲ್ಲ.. ಯಜಮಾನಿ ಆದವರಿಗೆ ಕೊಡುತ್ತೇವೆ. ಯಜಮಾನಿಯನ್ನು ಕುಟುಂಬದವರೇ ನಿರ್ಧಾರ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ: ChatGPT : ಚಾಟ್‌ಜಿಪಿಟಿ, ಎಐ ಪರಿಣಾಮ 70% ಭಾರತೀಯ ಕಾರ್ಮಿಕರಿಗೆ ನಿರುದ್ಯೋಗ ಭೀತಿ, ಮೈಕ್ರೊಸಾಫ್ಟ್‌ ಸಮೀಕ್ಷೆ ಹೇಳಿದ್ದೇನು?

ತಾಳ್ಮೆ ಕಳೆದುಕೊಂಡ ಸಿದ್ದರಾಮಯ್ಯ; ಇಲ್ಲಿದೆ ವಿಡಿಯೊ

ಈಗ ಕುಟುಂಬದಲ್ಲಿ ಎಷ್ಟೇ ಜನರು ಇರಲಿ, ನಾವು “ಹೂ ಈಸ್‌ ಯುವರ್‌ ಯಜಮಾನಿ” ಎಂದು ಕೇಳುತ್ತೇವೆ. ಆಗ ಅವರು ಯಾರು ಎಂದು ಹೇಳುತ್ತಾರೋ ನಾವು ಅವರಿಗೆ 2 ಸಾವಿರ ರೂಪಾಯಿಯನ್ನು ಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನನ್‌ ಹೆಂಡ್ತಿಗೂ ಫ್ರೀ ಅಂದ್ರು ಸಿದ್ದರಾಮಯ್ಯ!

ಸರ್ಕಾರಿ ನೌಕರಿ ಮಾಡುತ್ತಿರುವ ಮಹಿಳೆಯರಿಗೂ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಸಿಗಲಿದೆಯೇ ಎಂಬ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸುತ್ತಾ, ಎಲ್ಲರಿಗೂ, ಎಲ್ಲರಿಗೂ ರೀ… ನನ್‌ ಹೆಂಡ್ತಿಗೂ ಕೂಡಾ ಫ್ರೀ… ಚೀಫ್‌ ಸೆಕ್ರೇಟರಿಗೂ ಸಿಗುತ್ತದೆ ಎಂದು ಹೇಳಿದರು. ಈ ಹೇಳಿಕೆಗೆ ಅವರ ಪಕ್ಕದಲ್ಲೇ ಇದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ನಗುತ್ತಾ ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ಸಿದ್ದರಾಮಯ್ಯ ಹೆಂಡ್ತಿಗೂ ಬಸ್‌ ಪ್ರಯಾಣ ಫ್ರೀ, ಮತ್ತೇನಂದ್ರು?; ಈ ವಿಡಿಯೊ ನೋಡಿ

ಇದು ರಾಜ್ಯಕ್ಕೆ ಮಾತ್ರವೇ ಸೀಮಿತ

ಶಕ್ತಿ ಯೋಜನೆಯಡಿ ಮಹಿಳೆಯರು ಎಲ್ಲಿಂದ ಎಲ್ಲಿಯವರೆಗೆ ಬೇಕಾದರೂ ಪ್ರಯಾಣ ಮಾಡಬಹುದು. ಆದರೆ, ಅದು ರಾಜ್ಯಕ್ಕೆ ಮಾತ್ರ. ಬೆಂಗಳೂರಿನಿಂದ ಬೀದರ್‌ಗಾದರೂ ಹೋಗಲಿ, ಬೆಳಗಾವಿಗಾದರೂ ಹೋಗಬಹುದು, ಕಾರವಾರಕ್ಕಾದರೂ ಹೋಗಬಹುದು, ಮಂಗಳೂರಿಗಾದರೂ ಹೋಗಬಹುದು, ರಾಯಚೂರಿಗಾದರೂ ಹೋಗಬಹುದು, ಬಿಯಾಂಡ್‌ ದ ಸ್ಟೇಟ್‌… ಕೋಲಾರಕ್ಕಾದರೂ ಹೋಗಬಹುದು ಎಂದು ಹೇಳುತ್ತಾ ಅಲ್ಲೇ ಇದ್ದ ಸಚಿವ ಮುನಿಯಪ್ಪ ಅವರ ಕಾಲನ್ನೂ ಎಳೆದರು. ಏಕೆಂದರೆ, ಕೋಲಾರದ ಸುದ್ದಿಯನ್ನು ಹೇಳದೇ ಇದ್ದರೆ ಮುನಿಯಪ್ಪ ಅವರು ಸುಮ್ಮನಾಗಲ್ಲ ಎಂದು ನಗೆ ಚಟಾಕಿ ಹಾರಿಸಿದರು.

ರಾಜಹಂಸ ಇರ್ಲಿ ಬಿಡ್ರೀ…

ಎಸಿ, ನಾನ್‌ ಎಸಿ ಮತ್ತೆ ಸ್ಲೀಪರ್‌ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಆಗ ತಕ್ಷಣ ಅಧಿಕಾರಿಗಳ ಕಡೆಗೆ ತಿರುಗಿ ರಾಜಹಂಸ ಬಸ್‌ಗೆ ಇದೆಯೇನ್ರೀ..? ಎಂದು ಕೇಳಿದರು. ಅದಕ್ಕೆ ಅಧಿಕಾರಿಗಳು ಅದಕ್ಕೂ ಉಚಿತ ಪ್ರಯಾಣ ಇಲ್ಲ ಎಂದು ಉತ್ತರಿಸಿದರು. ಅದಕ್ಕೆ ಸಿದ್ದರಾಮಯ್ಯ, ಅದಕ್ಕೆ ಫ್ರೀ ಇರ್ಲಿ ಬಿಡ್ರೀ.. ಎಂದು ಆನ್‌ ದ ಸ್ಪಾಟ್‌ ಆರ್ಡರ್‌ ಮಾಡಿದರು. ಆದರೆ, ಅಧಿಕಾರಿಗಳ ಸಹಿತ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರೂ ಬೇಡ, ಬೇಡ, ಅದು ಸಾಧ್ಯವಿಲ್ಲ ಎಂಬಂತೆ ತಲೆಯಾಡಿಸಿದರು. ಕೊನೆಗೆ ಸಿದ್ದರಾಮಯ್ಯ ಸುಮ್ಮನಾದರು. ಹೀಗಾಗಿ ಈ ವಿಷಯದಲ್ಲಿ ಸಿದ್ದರಾಮಯ್ಯ ರಾಜಹಂಸಕ್ಕೂ ಉಚಿತ ಪ್ರಯಾಣವನ್ನು ವಿಸ್ತರಿಸಲು ಮುಂದಾದರೂ ಅಧಿಕಾರಿಗಳು, ಕೆಲವು ಸಚಿವರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.

ಪತ್ರಕರ್ತೆಯರನ್ನೂ ಎಳೆದು ತಂದ ಸಿದ್ದರಾಮಯ್ಯ

ಇದಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಪತ್ರಕರ್ತೆಯರತ್ತ ತಿರುಗಿದ ಸಿದ್ದರಾಮಯ್ಯ, ನೀವು ಹೆಣ್ಣುಮಕ್ಕಳಿದ್ದೀರಲ್ಲವಾ? ನಿಮಗೆ ಮನೆಯಿಂದ ಆಫೀಸ್‌ಗೆ, ಆಫೀಸ್‌ನಿಂದ ಮನೆಗೆ ಹೋಗಲು ಬಸ್‌ ಪ್ರಯಾಣ ಉಚಿತ. ಅಥವಾ ಬೀದರ್‌ಗೆ ಹೋಗುವುದಾದರೂ ಹೋಗಬಹುದು, ಬೆಳಗಾವಿಗೆ ಹೋಗುವುದಾದರೂ ಹೋಗಬಹುದು, ಡು ನಾಟ್‌ ಪೇ ಎನಿಥಿಂಗ್‌ ಫಾರ್‌ ಯುವರ್‌ ಟ್ರಾವೆಲ್ಲಿಂಗ್ ಎಂದು ಹೇಳಿದರು.

ಸಿದ್ದರಾಮಯ್ಯ ಫುಲ್‌ ಕಾಮಿಡಿ ವಿಡಿಯೊ ಇಲ್ಲಿದೆ ನೋಡಿ

ಇದನ್ನೂ ಓದಿ: Congress Guarantee: ಯುವನಿಧಿ ಜಾರಿ: IAS, KAS, ಇತರೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗುವವರಿಗೆ ಸುವರ್ಣಾವಕಾಶ?

ಕಾಸು ಕೊಡೋ ಗಂಡು ಮಕ್ಕಳಿಗೆ ಕೆಎಸ್‌ಆರ್‌ಟಿಸಿಯಲ್ಲಿ 50 ಪರ್ಸೆಂಟ್‌ ರಿಸರ್ವ್‌!

ಕೆಎಸ್‌ಆರ್‌ಟಿಸಿಯಲ್ಲಿ ಪುರುಷರಿಗೆ ಶೇ. 50ರಷ್ಟು ಸೀಟ್‌ಗಳು ರಿಸರ್ವ್‌ ಆಗಿರುತ್ತದೆ. ಉಳಿದ ಶೇ. 50ರಷ್ಟು ಮಹಿಳೆಯರನ್ನು ಮಾತ್ರ ಬಸ್‌ಗೆ ಹತ್ತಿಸಿಕೊಳ್ಳಲಾಗುತ್ತದೆ. ಅದಕ್ಕಿಂತ ಜಾಸ್ತಿ ಮಹಿಳೆಯರಿಗೆ ಪ್ರವೇಶ ಇಲ್ಲ. ಅದೇ ಮಹಿಳೆಯರು ಶೇ.50ಕ್ಕಿಂತ ಕಡಿಮೆ ಇದ್ದರೆ ಪುರುಷರನ್ನು ಹತ್ತಿಸಿಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಬರೀ 50 ಪರ್ಸೆಂಟ್‌ ರಿಸರ್ವ್‌ ಏಕೆ ಎಂದು ಮಾಧ್ಯಮದವರು ಪ್ರಶ್ನೆ ಮಾಡಿದಾಗ ಮಧ್ಯ ಪ್ರವೇಶ ಮಾಡಿದ ಡಿ.ಕೆ. ಶಿವಕುಮಾರ್‌, ಕಾಸು ಕೊಡುವವರಿಗೂ ಗೌರವ ಕೊಡಬೇಕಲ್ಲ ಎಂದು ಹೇಳಿದರು.

Exit mobile version