ಬೆಂಗಳೂರು: ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ (PU Examination System) ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಿದ್ದು, ಇನ್ನು ಮುಂದೆ ಪಿಯುಸಿಯಲ್ಲಿ ವಿಜ್ಞಾನ ಮಾತ್ರವಲ್ಲ ಎಲ್ಲ ವಿಭಾಗದ ಎಲ್ಲ ವಿಷಯಗಳಿಗೂ ಆಂತರಿಕ ಅಂಕ ಇರುತ್ತದೆ. ಇಲ್ಲಿವರೆಗೆ ಪ್ರಾಯೋಗಿಕ ಪರೀಕ್ಷೆ (Practical Exam) ಇರುವ ವಿಜ್ಞಾನದ ವಿಷಯಗಳಿಗೆ ಮಾತ್ರ ಆಂತರಿಕ ಅಂಕ (Internal Marks) ಇತ್ತು. ಇನ್ನು ಮುಂದೆ ಇದು ಎಲ್ಲ ವಿಷಯಗಳಿಗೂ ವಿಸ್ತರಣೆಯಾಗಲಿದೆ. ಶಿಕ್ಷಣ ಇಲಾಖೆ (Education Department) ಸಂಬಂಧ ಸುತ್ತೋಲೆಯನ್ನು ಹೊರಡಿಸಿದ್ದರೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ಇದರ ಬಗ್ಗೆ ಹೆಚ್ಚಿನ ವಿವರ ನೀಡಿದರು.
ಆಂತರಿಕ ಅಂಕ ಎಷ್ಟು?
ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ಹೊಸ ನಿಯಮ ಅನ್ವಯವಾಗಲಿದೆ. ವಿಜ್ಞಾನ ವಿಷಯಗಳಿಗೆ ಪ್ರಾಯೋಗಿಕ ಪರೀಕ್ಷೆಗೆ ಪಿಯುಸಿ ಬೋರ್ಡ್ 30 ಅಂಕಗಳನ್ನು ನೀಡುತ್ತಿದೆ. ಇದು ಹೀಗೆಯೇ ಮುಂದುವರಿಯಲಿದೆ. ಪ್ರಾಯೋಗಿಕ ಪರೀಕ್ಷೆಗಳು ಇಲ್ಲದ ಎಲ್ಲ ವಿಷಯಗಳಿಗೆ ಇನ್ನು ಮುಂದೆ 20 ಆಂತರಿಕ ಅಂಕಗಳನ್ನು ನಿಗದಿ ಮಾಡಲಾಗಿದೆ
ವಿಜ್ಞಾನದ ವಿಷಯಗಳಲ್ಲಿ 70 ಅಂಕಗಳಿಗೆ ಥಿಯರಿ ಪರೀಕ್ಷೆ ಮತ್ತು 30 ಅಂಕಗಳನ್ನು ಪ್ರಾಯೋಗಿಕ ಪರೀಕ್ಷೆ ಆಧರಿತ ಆಂತರಿಕ ಅಂಕಗಳಾಗಿ ನೀಡಲಾಗುತ್ತದೆ. ಇನ್ನು ವಿಜ್ಞಾನ ಹೊರತಾದ ಇತರ ವಿಷಯಗಳಲ್ಲಿ ಮೊದಲು 100 ಅಂಕಗಳಿಗೆ ಪರೀಕ್ಷೆ ನಡೆಯುತ್ತಿತ್ತು. ಇನ್ನು 80 ಅಂಕಗಳಿಗೆ ಮಾತ್ರ ಪರೀಕ್ಷೆ ಇರುತ್ತದೆ. ಉಳಿದ 20 ಅಂಕವನ್ನು ಆಂತರಿಕ ಅಂಕವಾಗಿ ನಿಗದಿ ಮಾಡಲಾಗಿದೆ. . ಅದನ್ನು ಯಾವ ರೀತಿ ನೀಡಬೇಕು, ಮಾನದಂಡ ಏನು ಎನ್ನುವ ಬಗ್ಗೆ ಕೂಡಾ ಸುತ್ತೋಲೆಯಲ್ಲಿ ಸ್ಪಷ್ಟ ವಿವರಣೆ ನೀಡಲಾಗಿದೆ.
ಯಾಕೆ ಆಂತರಿಕ ಅಂಕ: ಸರ್ಕಾರ ಹೇಳುವುದೇನು?
- ಆಂತರಿಕ ಮೌಲ್ಯಮಾಪನವು ಸಮಗ್ರ ಮೌಲ್ಯಮಾಪನ ಭಾಗವಾಗಿದೆ.
- ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅರ್ಥಸಿಕೊಳ್ಳಲು ಸಹಕಾರ ನೀಡುತ್ತದೆ.
- ಕಿರು ಪರೀಕ್ಷೆ ಮತ್ತು ಮಧ್ಯವಾರ್ಷಿಕ ಪರೀಕ್ಷೆಗಳ ಬಗ್ಗೆ ಗಂಭೀರತೆಯನ್ನು ಹೆಚ್ಚಿಸುತ್ತದೆ.
- ಆಂತರಿಕ ಮೌಲ್ಯಮಾಪನದಿಂದ ಪರೀಕ್ಷೆಯ ಕುರಿತ ಹಾಗೂ ಒತ್ತಡ ಕಡಿಮೆಯಾಗುತ್ತದೆ.
- ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಹೆಚ್ಚಿಸಿ ಅವರಲ್ಲಿ ಕಂಡುಬರುವ ವೃತ್ತಿಪರ ಕೌಶಲಗಳು ಅವರನ್ನು ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಲು ಅವಕಾಶ ನೀಡುತ್ತದೆ.
- ವಿದ್ಯಾರ್ಥಿಗಳ ಆವಲೋಕನ, ನಿರಂತರವಾಗಿದ್ದು, ಕಲಿಕೆಯನ್ನು ಉತ್ತಮಗೊಳಿಸಲು ಅವಕಾಶ ನೀಡುತ್ತದೆ.
- ಎಲ್ಲ ವಿಷಯಗಳು ಮತ್ತು ವಿದ್ಯಾರ್ಥಿಗಳಿಗೆ ಏಕರೂಪದ ಪರೀಕ್ಷಾ ಪದ್ಧತಿಗೆ ಅವಕಾಶ ನೀಡುವುದು.
20 ಆಂತರಿಕ ಅಂಕಗಳನ್ನು ಕೊಡುವುದು ಹೇಗೆ?
ಪ್ರಾಯೋಗಿಕ ಪರೀಕ್ಷೆಯಿಲ್ಲದ ವಿಷಯಗಳಲ್ಲಿ ಆಂತರಿಕ ಅಂಕಗಳನ್ನು ನಿರ್ಧಾರ ಮಾಡುವುದು ಹೇಗೆ?
- 10 ಅಂಕಗಳು: ಒಂದನೇ ಕಿರು ಪರೀಕ್ಷೆ, ಎರಡನೇ ಕಿರು ಪರೀಕ್ಷೆ ಹಾಗೂ ಮಧ್ಯ ವಾರ್ಷಿಕ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳಲ್ಲಿ ಉತ್ತಮವಾದ ಎರಡನ್ನು 10 ಅಂಕಗಳಿಗೆ ಪರಿವರ್ತಿಸಿ ಅವುಗಳ ಸರಾಸರಿ ಅಂಕಗಳನ್ನು ನೀಡುವುದು.
- 10 ಅಂಕಗಳು: ಕಾಲೇಜು ಹಂತದಲ್ಲಿ ಪ್ರಾಜೆಕ್ಟ್ ಮತ್ತು ಅಸೈನ್‌ಮೆಂಟ್ ಅಂಕಗಳು: ಪ್ರಾಜೆಕ್ಟ್ ಮತ್ತು ಅಸೈನ್‌ಮೆಂಟ್‌ಗಳಿಗೆ ಬರವಣಿಗೆ (Writing) ವಿಭಾಗಕ್ಕೆ – 5 ಅಂಕಗಳು, ಪ್ರಸ್ತುತಪಡಿಸುವಿಕೆ-Presentationಗೆ 3 ಅಂಕಗಳು, ಸಂದರ್ಶನಕ್ಕೆ (Viva voce)- 2 ಅಂಕಗಳು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಪಿಯು ರಿಸಲ್ಟ್, ಬಡ ವಿದ್ಯಾರ್ಥಿಗಳ ಸಾಧನೆ ಸ್ಫೂರ್ತಿದಾಯಕ
ಕಿರುಪರೀಕ್ಷೆ, ಮಧ್ಯ ವಾರ್ಷಿಕ ಪರೀಕ್ಷೆ ಹೇಗೆ?
- ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ(ಎಲೆಕ್ಟ್ರಾನಿಕ್ಸ್), ಗಣಕ ವಿಜ್ಞಾನ, ಗೃಹ ವಿಜ್ಞಾನ, ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತ ಮತ್ತು NSQF ವಿಷಯಗಳಾದ IT, Automobile, Retail, Beauty & wellness ಈ ವಿಷಯಗಳಿಗೆ ಅಂತರಿಕ ಮೌಲ್ಯಮಾಪನ ಇರುವುದಿಲ್ಲ. ಈ ಎಲ್ಲಾ ವಿಷಯಗಳಲ್ಲಿ ಯಥಾ ಸ್ಥಿತಿಯನ್ನು ಮುಂದುವರಿಸಲಾಗುತ್ತದೆ ಯಾವುದೇ ವ್ಯತ್ಯಾಸ ಇರುವುದಿಲ್ಲ.
- ಉಳಿದೆಲ್ಲ ಭಾಷಾ ಹಾಗೂ ಕೋಡ್ ವಿಷಯಗಳಲ್ಲಿ 20 ಅಂಕಗಳನ್ನು ಅಂತರಿಕ ಮೌಲ್ಯಮಾಪನಕ್ಕೆ ನಿಗದಿಪಡಿಸಲಾಗಿದೆ.
- ಪ್ರಸ್ತುತ ಅನುಸರಿಸುತ್ತಿರುವ ಕಿರು ಪರೀಕ್ಷೆಗಳನ್ನು 40 ಅಂಕಗಳಿಗೆ ಹಾಗೂ ಮಧ್ಯವಾರ್ಷಿಕ ಪರೀಕ್ಷೆಯನ್ನು 30 ಅಂಕಗಳಿಗೆ ನಡೆಸುವುದು.
- 80 ಅಂಕಗಳ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಉತ್ತರಿಸುವಾಗ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಕನಿಷ್ಠ 24 ಅಂಕಗಳನ್ನು ಪರಿಗಣಿಸಲೇಬೇಕು.
- ಒಂದು ವೇಳೆ ವಿದ್ಯಾರ್ಥಿಯು ಒಂದು ಮತ್ತು ಎರಡನೇ ಕಿರು ಪರೀಕ್ಷೆ ಹಾಗೂ ಮಧ್ಯವಾರ್ಷಿಕ ಪರೀಕ್ಷೆಯಲ್ಲಿ ಯಾವುದಾದರೂ ಒಂದರಲ್ಲಿ ಗೈರು ಹಾಜರಾಗಿದ್ದರೆ ಉಳಿದ ಎರಡು ಪರೀಕ್ಷೆಗಳಲ್ಲಿ ಗಳಿಸಿರುವ ಅಂಕಗಳನ್ನು 10 ಅಂಕಗಳಿಗೆ ಪರಿವರ್ತಿಸಿ ಸರಾಸರಿ ತೆಗೆದುಕೊಳ್ಳುವುದು.
- ವಿದ್ಯಾರ್ಥಿಯು ಕೇವಲ ಒಂದೇ ಒಂದು ಕಿರು ಪರೀಕ್ಷೆ ಅಥವಾ ಮಧ್ಯವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದರೆ ಆ ಆಂಕಗಳನ್ನು ಹತ್ತಕ್ಕೆ ಪರಿವರ್ತಿಸಿ ಅರ್ಧದಷ್ಟು ಅಂಕಗಳನ್ನು ನೀಡುವುದು.
- ವಿದ್ಯಾರ್ಥಿಯು ಯಾವುದೇ ಕಿರು ಪರೀಕ್ಷೆ ಅಥವಾ ಮಧ್ಯ ವಾರ್ಷಿಕ ಪರೀಕ್ಷೆಗೆ ಹಾಜರಾಗದೆ ಹಾಗೂ ಯಾವುದೇ ಪ್ರಾಜೆಕ್ಟ್ ಮತ್ತು ಅಸೈನ್‌ಮೆಂಟ್‌ಗಳನ್ನು ಸಲ್ಲಿಸದೇ ಇದ್ದರೆ ಅವರು ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣತೆಗೆ ಅಗತ್ಯವಾಗಿ ಬೇಕಾದ 35 ಅಂಕಗಳನ್ನು ಪರೀಕ್ಷೆ ನಡೆಯುವ 80 ಅಂಕಗಳಲ್ಲಿ ಪಡೆಯಬೇಕಾಗುತ್ತದೆ.
- ಸೂಕ್ತ ಆಸೈನ್‌ಮೆಂಟ್ ಅಥವಾ ಪ್ರಾಜೆಕ್ಟ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಿ 10 ಅಂಕಗಳಿಗೆ ಮೌಲ್ಯಮಾಪನ ಮಾಡುವುದು. ಆಸೈನ್‌ಮೆಂಟ್ ಅಥವಾ ಪ್ರಾಜೆಕ್ಟ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಯಾವುದೇ ಪಕ್ಷಪಾತವಿಲ್ಲದೆ ಅಂಕಗಳನ್ನು ನೀಡುವುದು ಹಾಗೂ ಸದರಿ ದಾಖಲೆಗಳನ್ನು ಪರೀಕ್ಷಾ ನಂತರದ ನಾಲ್ಕು ತಿಂಗಳ ಅವಧಿಯವರೆಗೂ ಕಾಯ್ದಿರಿಸುವುದು(ಉತ್ತರ ಪತ್ರಿಕೆಗಳನ್ನು ಕಾಯ್ದಿರಿಸುವ ಮಾದರಿಯಲ್ಲಿ)
- ಪ್ರತಿ ವಿದ್ಯಾರ್ಥಿಯೂ ಪ್ರತ್ಯೇಕವಾಗಿ ಆಸೈನ್‌ಮೆಂಟ್‌ಗಳನ್ನು ನೀಡುವುದು.
- ಅಯಾ ಜಿಲ್ಲೆಗಳ ವಿಷಯವಾರು ಉಪನ್ಯಾಸಕರ ವೇದಿಕೆಯಲ್ಲಿ ಪ್ರಾಜೆಕ್ಟ್ ಅಥವಾ ಅಸೈನ್‌ಮೆಂಟ್‌ಗಳ ಶೀರ್ಷಿಕೆಗಳನ್ನು ಸಿದ್ಧಪಡಿಸಿ ಪಟ್ಟಿಯನ್ನು ವಿದ್ಯಾರ್ಥಿಗಳಿಗೆ ನೀಡುವುದು ಹಾಗೂ ಆ ಶೀರ್ಷಿಕೆಗಳನ್ನು ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಅನುಸರಿಸುವುದು.
- ಕಾಲೇಜುಗಳ ಪ್ರಾಂಶುಪಾಲರು ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಆಂತರಿಕ ಮೌಲ್ಯಮಾಪನ ಕಾರ್ಯ, ಅಂಕಗಳ ನೀಡಿಕೆ ಹಾಗೂ ಅಂಕಗಳನ್ನು ದಾಖಲಿಸುವ ಬಗ್ಗೆ ಮೇಲ್ವಿಚಾರಣೆ ನಡೆಸುವುದು.
- ಕಿರು ಪರೀಕ್ಷೆಗಳು, ಪ್ರಾಜೆಕ್ಟ್ ಮತ್ತು ಅಸೈನ್‌ಮೆಂಟ್‌ಗಳ ಅಂಕಗಳನ್ನು ಮೌಲ್ಯಮಾಪನದ ನಂತರ ಎರಡು ದಿನಗಳ ಒಳಗೆ ಪೋರ್ಟಲ್‌ಗೆ ಅಪ್‌ಡೇಟ್ ಮಾಡುವುದು, ವಿಳಂಬಕ್ಕೆ ಅವಕಾಶ ಇರುವುದಿಲ್ಲ.
- 2023-2024ನೇ ಸಾಲಿನಿಂದಲೇ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ನೀಡುವ ಪದ್ಧತಿಯನ್ನು ಆರಂಭಿಸುವುದು.
- 2023-24ನೇ ಸಾಲಿನಲ್ಲಿ ವಿದ್ಯಾರ್ಥಿಗಳನ್ನು (Regular) ಹೊರತುಪಡಿಸಿ, ಹಿಂದಿನ ಸಾಲಿನ ವಿದ್ಯಾರ್ಥಿಗಳು ಅಂದರೆ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಂಡು (Private students) ದ್ವಿತೀಯ ಪಿಯು ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಈ ಪದ್ಧತಿ ಅನ್ವಯಿಸುವುದಿಲ್ಲ. ಅಂದರೆ ಆ ವಿದ್ಯಾರ್ಥಿಗಳು 1೦0 ಅಂಕದ ಪ್ರಶ್ನೆ ಪತ್ರಿಕೆಗೆ ಉತ್ತರಿಸಬೇಕಾಗುತ್ತದೆ.
- ವಿದ್ಯಾರ್ಥಿಯು ಅನಿವಾರ್ಯ ಕಾರಣದಿಂದ ಕಾಲೇಜು ಬದಲಾವಣೆ ಮಾಡಿಕೊಂಡ ಸಂದರ್ಭದಲ್ಲಿ, ಖಾಸಗಿಯಾಗಿ ಅಭ್ಯಾಸ ಮಾಡುವ (private study) ವಿಷಯವನ್ನೂ ಸಹ ಅಂತರಿಕ ಮೌಲ್ಯಮಾಪನ ಪದ್ಧತಿಗೆ (20:80) ಒಳಪಡಿಸುವುದು. ಸದರಿ ಕಾಲೇಜುಗಳ ಪ್ರಾಂಶುಪಾಲರು ಮೌಲ್ಯಮಾಪನಕ್ಕೆ ಸೂಕ್ತ ವ್ಯವಸ್ಥೆ ಮಾಡುವುದು.
- ಆಂತರಿಕ ಮೌಲ್ಯಮಾಪನದಿಂದ ನೀಡುವ 20 ಅಂಕಗಳನ್ನು ಎಸ್‌ಎಟಿಎಸ್‌ನಿಂದ ನೇರವಾಗಿ ಫಲಿತಾಂಶ ಪ್ರಕಟಣೆಗೆ ಪರಿಗಣಿಸುವುದರಿಂದ ನಿಗದಿತ ಸಮಯದ ಒಳಗೆ ಅಂಕಗಳನ್ನು ದಾಖಲಿಸಬೇಕು. ಇಲ್ಲವಾದರೆ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಲರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
- ಆಂತರಿಕ ಮೌಲ್ಯಮಾಪನ ಮಾಡುವ ವಿಧಾನಗಳ ಬಗ್ಗೆ ಮಾರ್ಗದರ್ಶಿ ಕೈಪಿಡಿ, 30 ಅಂಕಗಳಿಗೆ ಸರಿ ಹೊಂದುವ ನೀಲ ರಸ್ತೆ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲು ಕರ್ನಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಕ್ರಮ ತೆಗೆದುಕೊಳ್ಳುವುದು.