Site icon Vistara News

Bengaluru Airport : ಬೆಂಗಳೂರು ವಿಮಾನ ನಿಲ್ದಾಣ ಟರ್ಮಿನಲ್‌ 2ನಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರ ಆರಂಭ

Bangalore aiport terminal 2

ಬೆಂಗಳೂರು: ಜಗತ್ತಿನಲ್ಲೇ ಪ್ರಸಿದ್ಧಿ ಪಡೆದಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport) ಟರ್ಮಿನಲ್‌ 2ನಿಂದ (Bangalore airport terminal 2) ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ (International flights) ಮಂಗಳವಾರ (ಸೆಪ್ಟೆಂಬರ್‌ 12) ಆರಂಭಗೊಂಡಿತು. ಬೆಳಗ್ಗೆ 10.45ಕ್ಕೆ ದುಬೈನಿಂದ ಬಂದ ವಿಮಾನ (Flight from Dubai) ಟರ್ಮಿನಲ್‌ 2ನಲ್ಲಿ ಇಳಿಯುವ ಮೂಲಕ ಈ ಟರ್ಮಿನಲ್‌ನಲ್ಲಿ (Bengaluru Airport) ಅಂತಾರಾಷ್ಟ್ರೀಯ ವಿಮಾನಗಳ ಸಂಚಾರದ ಹೊಸ ಪರ್ವ ಆರಂಭಗೊಂಡಿತು.

ಅತ್ಯಾಧುನಿಕ ಸೌಕರ್ಯಗಳುಳ್ಳ ಟರ್ಮಿನಲ್‌ 2ವನ್ನು ಪ್ರಧಾನಿ ನರೇಂದ್ರ ಮೋದಿ ಅವರು 2022ರ ನವೆಂಬರ್‌ 11ರಂದು ಉದ್ಘಾಟನೆ ಮಾಡಿದ್ದರು. ಆದರೆ, ಇದುವರೆಗೆ ಇಲ್ಲಿ ಕೇವಲ ಮೂವರು ದೇಸೀಯ ವಿಮಾನಯಾನ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಸೆಪ್ಟೆಂಬರ್‌ 1ರಿಂದ ಅಂತಾರಾಷ್ಟ್ರೀಯ ವಿಮಾನಗಳು ಇಲ್ಲಿಂದ ಸಂಚರಿಸಲಿವೆ ಎಂದು ತಿಳಿಸಲಾಗಿತ್ತು. ಆದರೆ, ತಾಂತ್ರಿಕ ಕೆಲಸಗಳು ಪೂರ್ಣಗೊಳ್ಳದೆ ಇರುವುದರಿಂದ ಮುಂದೂಡಲಾಗಿತ್ತು. ಇದೀಗ ಸೆಪ್ಟೆಂಬರ್‌ 12ರಂದು ಮೊದಲ ವಿಮಾನ ಆಗಮಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ.

ಮೊದಲ ವಿದೇಶಿ ವಿಮಾನದಿಂದ ಇಳಿದು ಬಂದವರಿಗೆ ಸ್ವಾಗತ

ವಿದೇಶಿ ವಿಮಾನಗಳ ಹಾರಾಟಕ್ಕೆ ವಿಮಾನ ನಿಲ್ದಾಣದ ಆಡಳಿತ ನಿರ್ದೇಶಕ ಹರಿಮಾರನ್ ಅವರು ಚಾಲನೆ ನೀಡಿದರು. ವಿಮಾನದಿಂದ ಇಳಿದು ಬಂದ ಪ್ರಯಾಣಿಕರಿಗೆ ಯಕ್ಷಗಾನದ ವೇಷಧಾರಿಗಳು ಮತ್ತು ಡೊಳ್ಳು ಕುಣಿತಗಳ ಸಂಭ್ರಮದ ಸ್ವಾಗತ ದೊರೆಯಿತು.

ವಿದೇಶಿ ವಿಮಾನಯಾನ ಹಾರಾಟಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಆಗಿದ್ದು, ಟಿ1ನಲ್ಲಿ ಇದ್ದ ಅಂತಾರಾಷ್ಟ್ರೀಯ ಕಸ್ಟಮ್ಸ್ ಅಧಿಕಾರಿಗಳ ಕಚೇರಿ, ಚಿಲ್ಲರೆ ಹಾಗೂ ಆಹಾರ ಮಳಿಗೆಗಳು ಟರ್ಮಿನಲ್‌ 2ಗೆ ಸ್ಥಳಾಂತರ ಆಗಿವೆ.

ಮೊದಲ ವಿದೇಶಿ ವಿಮಾನದಲ್ಲಿ ಬಂದವರಿಗೆ ಸ್ವಾಗತ

ವಿದೇಶಕ್ಕೆ ಹೋಗುವವರು ಟರ್ಮಿನಲ್‌ 2ಗೆ ಹೋಗಿ

ಇದುವರೆಗೆ ಟರ್ಮಿನಲ್‌ 1ನಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳೆರಡನ್ನೂ ಹ್ಯಾಂಡಲ್‌ ಮಾಡಲಾಗುತ್ತಿತ್ತು. ಇದನ್ನು ಅಂತಾರಾಷ್ಟ್ರೀಯ ವಿಮಾನಗಳ ಟೇಕ್‌ ಆಫ್‌ ಮತ್ತು ಲ್ಯಾಂಡಿಂಗ್‌ ಸೇರಿದಂತೆ ಎಲ್ಲ ಚಟುವಟಿಕೆಗಳು ಟರ್ಮಿನಲ್‌ 2ನಲ್ಲಿ ನಡೆಯಲಿವೆ. ಅಂದರೆ ಟರ್ಮಿನಲ್‌ 1 ಪೂರ್ಣ ಪ್ರಮಾಣದಲ್ಲಿ ದೇಶೀಯ ವಿಮಾನಗಳಿಗೆ ಮೀಸಲಾಗಿದ್ದರೆ, ಟರ್ಮಿನಲ್‌ 2 ವಿದೇಶಿ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಲಿದೆ. ಆದರೆ, ಟರ್ಮಿನಲ್‌ 2 ಮೂಲಕ ಕೆಲವು ದೇಶೀಯ ವಿಮಾನಗಳೂ ಹಾರಾಡಲಿವೆ. ಹೀಗಾಗಿ ಅಂತಾರಾಷ್ಟ್ರೀಯ ವಿಮಾನಗಳಿಗೆ ಹೋಗುವವರು ನೇರವಾಗಿ ಟರ್ಮಿನಲ್‌ 2ಗೆ ಹೋಗಬಹುದು. ದೇಶೀಯ ವಿಮಾನಗಳಿಗೆ ಹೋಗುವವರು ಟರ್ಮಿನಲ್‌ 1 ಅಥವಾ ಎರಡು ಎಂದು ಚೆಕ್‌ ಮಾಡಿಕೊಂಡು ಹೋಗಬೇಕು.

ಇದನ್ನೂ ಓದಿ: Modi in Bengaluru | ಕೆಂಪೇಗೌಡ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ಟರ್ಮಿನಲ್‌ 2 ವಿಶೇಷತೆಗಳೇನು?

Bangalore airport terminal 2
  1. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಟರ್ಮಿನಲ್ ಇದಾಗಿದ್ದು, 5 ಸಾವಿರ ಕೋಟಿ ‌ವೆಚ್ಚದಲ್ಲಿ‌ ನಿರ್ಮಾಣವಾಗಿರುವ ಗಾರ್ಡನನ್ನು ಹೊಂದಿದೆ.
  2. 2 ಲಕ್ಷ 55 ಸಾವಿರದ 661 ಚದರ್ ಮೀಟರ್ ವಿಸ್ತೀರ್ಣದ ಈ ಟರ್ಮಿನಲ್‌ ಎರಡೆರಡು ಪ್ರತ್ಯೇಕ ಆಗಮ‌ನ ನಿರ್ಗಮನ ದ್ವಾರಗಳನ್ನು ಹೊಂದಿದೆ.
  3. ವಾರ್ಷಿಕ್ 25 ಮಿಲಿಯನ್ ಪ್ರಯಾಣಿಕರು ಸಂಚರಿಸಬಹುದಾದ ದೊಡ್ಡ ಟರ್ಮಿನಲ್ ಇದು.
  4. 5 ಜಿ ನೆಟ್ವರ್ಕ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಚೆಕ್ ಇನ್, ಬ್ಯಾಗೇಜ್ ಡ್ರಾಪ್ ಕೌಂಟರ್ ವ್ಯವಸ್ಥೆ.
  5. 10 ಸಾವಿರ ಚದರ‌ ಮೀಟರ್ ಹಸಿರು ಗೋಡೆ, ಕೃತಕ ವಾಟರ್ ಪಾಲ್ಸ್, ನೂರಾರು ವರ್ಷಗಳ ಹಳೆಯ ಮರ ಹೊಂದಿದೆ.
  6. ವಿವಿಧ ಜಾತಿಯ ಸಸ್ಯಗಳು ಮತ್ತು ಮರಗಳಿಂದ ಸುತ್ತುವರಿದಿರುವ ಈ ಟರ್ಮಿನಲ್ ಅನ್ನು ಟರ್ಮಿನಲ್ ಇನ್​ ದಿ ಗಾರ್ಡನ್ ಎಂದು ಕರೆಯಲಾಗುತ್ತಿದೆ.
  7. ಈ ಟರ್ಮಿನಲ್​​​ನಲ್ಲಿ 180 ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಜಾತಿಯ ಸಸ್ಯಗಳಿವೆ. 3,600 ಕ್ಕೂ ಹೆಚ್ಚು ಸಸ್ಯ ಪ್ರಭೇದಗಳು, ಬಿದಿರು, 620 ಸ್ಥಳೀಯ ಸಸ್ಯಗಳು, 7,700 ಕಸಿ ಮರಗಳು, 96 ಕಮಲ ಮತ್ತು ಇನ್ನೂ ಹೆಚ್ಚಿನ ಸಸ್ಯಗಳಿವೆ.

Exit mobile version