| ಸಾಗರ್, ಚಾಮರಾಜನಗರ
ಭಾರತದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿ ಸಂಕುಲಗಳಲ್ಲಿ ಹುಲಿಗಳು ಸಹ ಒಂದು. ಆದರೀಗ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. (International Tiger Day) ಚಾಮರಾಜನಗರ ಜಿಲ್ಲೆಯ ಹುಲಿಗಳ ಸಂಖ್ಯಾ ಪ್ರಮಾಣವನ್ನು ನೋಡುವುದಾದರೆ ಕಳೆದ 10 ವರ್ಷದಲ್ಲಿ 100ಕ್ಕೂ ಹೆಚ್ಚು ಹುಲಿಗಳಿಗೆ ಏರಿಕೆ ಕಂಡಿದೆ. ಹೀಗಾಗಿ ಅತಿಹೆಚ್ಚು ಹುಲಿಗಳನ್ನು ಪೋಷಿಸುತ್ತಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಪ್ರತಿ ವರ್ಷ (ಜುಲೈ 29) ವಿಶ್ವ ಹುಲಿ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಅಳಿವಿನ ಅಂಚಿನಲ್ಲಿರುವ ಹುಲಿಗಳನ್ನು ಉಳಿಸಬೇಕು ಎಂಬ ಪ್ರಮುಖ ಉದ್ದೇಶವನ್ನು ಹೊಂದಲಾಗಿದೆ. ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಅಳಿವಿನ ಅಂಚಿನಲ್ಲಿದ್ದ ಹುಲಿಗಳ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಬಂಡೀಪುರ, ಬಿಳಿಗಿರಿ ರಕ್ಷಿತಾರಣ್ಯಗಳಿವೆ. ಹಾಗೇ ಮಲೆ ಮಹದೇಶ್ವರ ವನ್ಯಜೀವಿಧಾಮ ಕೆಲವೇ ದಿನಗಳಲ್ಲಿ ರಕ್ಷಿತಾರಣ್ಯ ಆಗುವ ನಿರೀಕ್ಷೆ ಕೂಡ ಇದೆ. ಇದಾದರೆ ಅತಿಹೆಚ್ಚು ಹುಲಿ ರಕ್ಷಿತಾರಣ್ಯ ಪ್ರದೇಶ ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೂ ಚಾಮರಾಜನಗರ ಪಾತ್ರವಾಗುತ್ತದೆ.
ಮೊದಲಿಗೆ 1973ರಲ್ಲಿ ಬಂಡೀಪುರ ಅರಣ್ಯ ಹುಲಿ ರಕ್ಷಿತಾರಣ್ಯ ಘೋಷಣೆಯಾಗಿತ್ತು. ಹುಲಿ ರಕ್ಷಿತಾರಣ್ಯ ಎಂದು ಘೋಷಣೆಯಾದಾಗ ಕೇವಲ 12 ಹುಲಿಗಳಷ್ಟೇ ಇತ್ತು. ದಿನ ಕಳೆದಂತೆ ಹುಲಿಗಳ ಸಂರಕ್ಷಣೆಗೆ ವಿಶೇಷ ಆಸ್ಥೆ ನೀಡಲಾಗಿದ್ದು, ಕಳೆದ ಹುಲಿ ಗಣತಿಯ ಪ್ರಕಾರ ಸುಮಾರು 150ಕ್ಕೂ ಹೆಚ್ಚು ಹುಲಿಗಳಿವೆ ಎಂದು ತಿಳಿದುಬಂದಿದೆ. ಅದೇ ರೀತಿ ಬಿಳಿಗಿರಿ ರಕ್ಷಿತಾರಣ್ಯದಲ್ಲೂ ಕಳೆದ ಗಣತಿಯಲ್ಲಿ 86 ಹುಲಿಗಳಿರುವುದು ಕಂಡುಬಂದಿದೆ.
ಇದನ್ನೂ ಓದಿ | ಮಾನವ ಹಾಗೂ ಪ್ರಾಣಿ ಸಂಘರ್ಷ ತಪ್ಪಿಸಲು ಕಾಡಿನಲ್ಲೆ ಹಣ್ಣಿನ ಗಿಡ ಬೆಳೆಸುವ ಯೋಜನೆಗೆ ಅರಣ್ಯ ಇಲಾಖೆ ಚಾಲನೆ
ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 15ಕ್ಕೂ ಹೆಚ್ಚು ಹುಲಿಗಳಿದ್ದವು. ಈಗ ಅವುಗಳ ಸಂಖ್ಯೆ 25ರಿಂದ 30ಕ್ಕೆ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಗಣತಿಯ ಪ್ರಕಾರವೇ ಕಳೆದ 10 ವರ್ಷದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಹುಲಿಗಳು ಹೆಚ್ಚಾಗಿದೆ. ಇದರಿಂದಾಗಿ ಜಿಲ್ಲೆಯ ಕಾಡಿನಲ್ಲಿ 250ಕ್ಕೂ ಹೆಚ್ಚು ಹುಲಿಗಳು ಇದೆ ಎಂದು ತಿಳಿದುಬಂದಿದೆ.
ಹುಲಿಗಳ ಸಂರಕ್ಷಣೆ ವಿಚಾರವಾಗಿ ಅರಣ್ಯ ಇಲಾಖೆ ತೆಗೆದುಕೊಂಡ ಕ್ರಮಗಳು ಹುಲಿಗಳ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಹುಲಿಗಳ ಹಾಗೂ ವನ್ಯಜೀವಿ ಬೇಟೆಗಾರರ ಮೇಲೆ ಇಲಾಖೆ ಸಾಕಷ್ಟು ನಿಗಾ ಇಟ್ಟಿತು. ಇದರಿಂದ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ಮೂಲಕ ಪ್ರವಾಸೋದ್ಯಮ ಚಟುವಟಿಕೆ ಕೂಡ ಹೆಚ್ಚಾಗಿದೆ. ದೇಶ-ವಿದೇಶದಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಚಾಮರಾಜನಗರ ಹುಲಿಗಳ ನಾಡು ಎಂದೇ ಕರೆಸಿಕೊಳ್ಳುತ್ತಿದೆ.
ಎಲ್ಲೆಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ
ಚಾಮರಾಜನಗರ ಜಿಲ್ಲೆಯಲ್ಲಿರುವ ಬಂಡೀಪುರ, ಬಿ.ಆರ್.ಟಿ., ಮಲೆ ಮಹದೇಶ್ವರ ಬೆಟ್ಟಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಹುಲಿಗಳು ಕಾಡಿನಲ್ಲಿ ತನ್ನದೇ ಆದ ಒಂದೊಂದು ಜಾಗವನ್ನು ಹೊಂದಿರುತ್ತವೆ. ಅವು ತಮ್ಮ ವ್ಯಾಪ್ತಿಗೆ ಬೇರೆ ಹುಲಿಗಳನ್ನು ಬರಲು ಬಿಡುವುದಿಲ್ಲ. ಒಮ್ಮೊಮ್ಮೆ ಎರಡು ಹುಲಿಗಳ ನಡುವೆ ಸಂಘರ್ಷವಾಗಿ ಅನಿರೀಕ್ಷಿತವಾಗಿ ಹುಲಿಗಳು ಕಾಡಿನಿಂದ ಆಚೆ ಬರುತ್ತವೆ. ಆಗ ಮನುಷ್ಯರ ಮೇಲೆ ದಾಳಿ ಮಾಡುವ ಸಂಭವ ಹೆಚ್ಚಿರುತ್ತದೆ ಎಂದು ಬಿ.ಆರ್.ಟಿ. ಡಿಸಿಎಫ್ ಸಂತೋಷ್ ವಿಸ್ತಾರ ನ್ಯೂಸ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ದೇಶದಲ್ಲಿ ೪ ಸಾವಿರಕ್ಕೆ ಹುಲಿಗಳ ಸಂಖ್ಯೆ ಹೆಚ್ಚಳ
ದೇಶದಲ್ಲಿ ಈ ಹಿಂದೆ ಹುಲಿಗಳು ಸಂಖ್ಯೆ ವಿರಳವಾಗಿದ್ದಲ್ಲದೆ, ಅಳಿವಿನ ಅಂಚಿನಲ್ಲಿದ್ದವು. ಅಂದರೆ 1,400 ಹುಲಿಗಳು ಮಾತ್ರ ಇದ್ದವು. ಈ ಹಿನ್ನೆಲೆಯಲ್ಲಿ ಇವುಗಳಿಗೆ ಸರ್ಕಾರಗಳು ಹೆಚ್ಚಿನ ಒತ್ತು ನೀಡಿ ಟೈಗರ್ ರಿಸರ್ವ್ಸ್ ಅನ್ನು ಮಾಡಿದ್ದರಿಂದ 4 ಸಾವಿರದಷ್ಟು ಏರಿಕೆ ಕಂಡಿದೆ. ಇದರಿಂದ ಪ್ರವಾಸೋದ್ಯಮ ಕೂಡ ಬೆಳೆಯುತ್ತಿದೆ ಎಂದು ಬಿ.ಆರ್.ಟಿ. ಡಿಸಿಎಫ್ ಎಡುಕುಂಡಲ ವಿಸ್ತಾರ ನ್ಯೂಸ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ | ಭಾರತದ ಅತ್ಯಂತ ಹಿರಿಯ ಹುಲಿ ರಾಜ ಇನ್ನಿಲ್ಲ