Site icon Vistara News

International womens day-2023: ಮಹಿಳೆಯರನ್ನು ಪುರುಷರೂ ಅರ್ಥ ಮಾಡಿಕೊಳ್ಳಬೇಕು ಎಂದ ಸಿಎಂ ಬೊಮ್ಮಾಯಿ

Bommai international womens day

#image_title

ಬೆಂಗಳೂರು: ಮಹಿಳೆಯರಿಗೆ ಪುರುಷರಿಂದ ಯಾವುದೇ ರೀತಿಯ ತೊಂದರೆಯಾಗದಂಥ ರೀತಿಯಲ್ಲಿ ಜಾಗೃತಿಯನ್ನು ಮೂಡಿಸಬೇಕು. ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ (International womens day-2023) ಪುರುಷರನ್ನೂ ಒಳಗೊಂಡು ನಡೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಅವರು ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ರವೀಂದ್ರ ಕಲಾಕ್ಷೇತ್ರ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಮತ್ತು “ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ” ಮಾಡಿ ಮಾತನಾಡಿದರು.

ಪುರುಷರಿಗೆ ಜಾಗೃತಿ ಅಗತ್ಯ

ʻʻಎಲ್ಲರಿಗೂ ತಾಯಿಯೊಂದಿಗೆ ಜನ್ಮಪೂರ್ವದ ಸಂಬಂಧವಿದ್ದು, ಇದೊಂದು ಪವಿತ್ರ ಸಂಬಂಧ. ಮನುಕುಲದ ಮುಂದುವರಿಕೆ ಹೆಣ್ಮಕ್ಕಳಿಂದಲೇ ನಡೆಯುತ್ತಿರುವುದು. ತಾಯಿ, ಪತ್ನಿಯಿಂದ ಸದಾ ಸೇವೆ ಪಡೆಯುವುದು ಪುರುಷ. ಆದರೆ, ನಿಜವಾಗಿ ಮಹಿಳೆಗೆ ತೊಂದರೆಯಾದರೆ ಅದು ಗಂಡು ಮಕ್ಕಳಿಂದ. ಹೀಗಾಗಿ ಗಂಡು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕುʼʼ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಮಹಿಳೆಯರ ಸಾಧನೆ

ʻʻನಮ್ಮದು ಪುರುಷ ಪ್ರಧಾನ ಸಮಾಜ ಆದರೆ, ಮೊದಲಿನಿಂದಲೂ ನೋಡಿದರೆ, ಮಹಿಳೆ ಸಾಕಷ್ಟು ಸಾಧನೆ ಮಾಡಿದ್ದಾಳೆ. ನಮ್ಮ ಪುರಾಣಗಳಲ್ಲಿ ಮಹಿಳೆಯರು ಸಾಕಷ್ಟು ಮಹತ್ವ ಪಡೆದಿದ್ದಾರೆ. ಸ್ವಾತಂತ್ರ್ಯ. ಹೋರಾಟದಲ್ಲಿ ಕಿತ್ತೂರು ಚೆನ್ನಮ್ಮ ಕಹಳೆ ಊದಿದರು. ಅನೇಕ ಮಹಿಳೆಯರು ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೆ‌ʼʼ ಎಂದು ನೆನಪು ಮಾಡಿಕೊಂಡರು ಸಿಎಂ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಿದರು.

ʻʻನಾವು ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತೇವೆ‌ . ಆದರೆ ಮಹಿಳೆಯರು ಸಮಸ್ಯೆಯ ಜೊತೆಗೆ ಬದುಕುತ್ತಿದ್ದಾರೆ. ಹೀಗಾಗಿ ಈ ವರ್ಷ ಬಜೆಟ್ ನಲ್ಲಿ ಹೊಲದಲ್ಲಿ ಕೆಲಸ ಮಾಡುವ ಎಲ್ಲ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಸಾವಿರ ರೂ ನೀಡಲು ತೀರ್ಮಾನಿಸಲಾಗಿದೆ. ಅಂಗನವಾಡಿ ಕಾರ್ಯಕರ್ತರು ಎಲ್ಲ ಮಕ್ಕಳ ತಾಯಿಯಾಗಿ‌‌ ಕೆಲಸ ಮಾಡುತ್ತಿದ್ದಾರೆ. ಅವರ ಸಹನೆ ಮೆಚ್ಚುವಂತದ್ದು, ಅವರಿಗೆ ಕಳೆದ ವರ್ಷ 1000 ರೂ. ಈ ವರ್ಷ ಒಂದು ಸಾವಿರ. ರೂ. ಹೆಚ್ಚಳ ಮಾಡಲಾಗಿದೆ. ಉದ್ಯೋಗ, ಶಿಕ್ಷಣ ಮತ್ತು ಸಬಲೀಕರಣ ಎಂಬ ಮೂರು ಮಂತ್ರ ಅಳವಡಿಸಿಕೊಂಡು ಶಿಕ್ಷಣದ ಮೇಲೆ ಬಂಡವಾಳ ಹೂಡಿಕೆ ಮಾಡಲಾಗಿದೆ. ಅದಕ್ಕಾಗಿ ಎಲ್ಲ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಕೊಡಲು‌ ತೀರ್ಮಾಸಲಾಗಿದೆ ಎಂದರಲ್ಲದೇ ಮಹಿಳೆಯರು ಎಲ್ಲ ರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ.‌ ಆತ್ಮವಿಶ್ವಾಸ ವಿದ್ದರೆ ಏನಾದರೂ ಸಾಧಿಸಬಹುದುʼʼ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಮಹಿಳಾ ದಿನಾಚರಣೆಯಂದು ಮಕ್ಕಳ ಜತೆ ಸಿಎಂ ಬೊಮ್ಮಾಯಿ

ಮಹಿಳಾ ಸುರಕ್ಷತೆಗೆ ವ್ಯವಸ್ಥೆ

ಮಹಿಳೆಯ ಸುರಕ್ಷತೆಗೆ ನಮ್ಮ ಸರ್ಕಾರ ವ್ಯವಸ್ಥೆ ಕಲ್ಪಿಸಿದ್ದು, ಸುರಕ್ಷಿತ ನಗರ ಯೋಜನೆ ಗೆ ಚಾಲನೆ ನೀಡಲಾಗಿದೆ. ಏಳು ಸಾವಿರ ಕ್ಯಾಮೆರಾ ಅಳವಡಿಸಿ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ. 400 ವಾಹನಗಳನ್ನು ಒದಗಿಸಲಾಗಿದೆ. ಈ ಯೋಜನೆಯನ್ನು ತಾಲ್ಲೂಕು ಕೇಂದ್ರ ಹಾಗೂ ಎಲ್ಲಾ ಮಹಾನಗರಪಾಲಿಕೆಗಳಿಗೆ ವಿಸ್ತರಣೆ ಮಾಡಲಾಗುವುದು ಎಂದರು. ಎಲ್ಲಾ ಹಂತಗಳಲ್ಲಿ ಮಹಿಳಾ ಸುರಕ್ಷತೆ ಅತ್ಯಂತ ಮುಖ್ಯವಾಗಿದೆ ಎಂದರು ಸಿಎಂ

ಕರಕುಶಲ ಪ್ರದರ್ಶನದಲ್ಲಿ ಮಹಿಳೆಯೊಬ್ಬರು ಶ್ರೀ ಗುರು ರಾಘವೇಂದ್ರರ ಮೂರ್ತಿ ನೀಡಿದರು

ಅಂತಾರಾಷ್ಟ್ರೀಯ ‌ಮಟ್ಟಕ್ಕೇರಬೇಕು

ನಾವು ಯಾರದೇ ಮನೆಯಲ್ಲಿ ಹುಟ್ಟಿದರೂ ನಾವು ಬೆಳೆದು ಇತರರಿಗೆ ನೆರವಾಗುವ ಕೆಲಸ ಮಾಡಬೇಕು. ಇದರಿಂದ ಸಮಾಜಕ್ಕೆ ಅನುಕೂಲವಾಗಲಿದೆ. ಐಟಿ ಬಿಟಿ, ಬ್ಯಾಂಕಿಂಗ್ ಕ್ಷೇತ್ರ, ಸೇರಿದಂತೆ ಎಲ್ಲಾ ರಂಗದಲ್ಲಿಯೂ ಮುಂದಿರುವ ಮಹಿಳೆಯರು ವಿಮಾನ, ಬಸ್ , ಟ್ರಕ್, ಟ್ರ್ಯಾಕ್ಟರ್ ಎಲ್ಲವನ್ನೂ ಓಡಿಸುತ್ತಾರೆ. ನಮ್ಮ ಕನ್ನಡದ ಮಹಿಳೆಯರು ಅಂತಾರಾಷ್ಟ್ರೀಯ ‌ಮಟ್ಟದಲ್ಲಿ ಹೆಸರು ಮಾಡಬೇಕು ಎಂದು ಸಿಎಂ ಆಶಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್, ಸಾಲು ಮರದ ತಿಮ್ಮಕ್ಕ, ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ರಾಜಣ್ಣಗೌಡ, ಡಿ.ಆರ್.ಡಿ.ಓ ಸಂಸ್ಥೆಯ ಆಶು ಭಾಟಿಯಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಡಾ. ಅನುರಾಧಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಮಂಜುಳಾ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ : Women’s Day 2023 : ಮಹಿಳೆಯರಿಂದ ಮಹಿಳೆಯರಿಗೇ ಮೀಸಲಾದ ಬೆಂಗಳೂರಿನ ಗೋ ಪಿಂಕ್‌ ಕ್ಯಾಬ್ಸ್‌ಗೆ ಪ್ರೇರಣೆ ಯಾವುದು?

Exit mobile version