ಬೆಂಗಳೂರು: ದೇಶದಲ್ಲಿ ಈಗ ಔದ್ಯಮಿಕ ಕ್ಷೇತ್ರದ ಹೂಡಿಕೆಗೆ ಸಂಬಂಧಿಸಿ ಕೆಂಪು ಪಟ್ಟಿ ಎಂಬ ಮಾತೇ ಇಲ್ಲ. ನಾವು ಕೆಂಪು ಹಾಸನ್ನು ಹಾಸಿದ್ದೇವೆ. ದೇಶವನ್ನು ನಾನಾ ಆಯಾಮಗಳಲ್ಲಿ ಹೂಡಿಕೆಗೆ ಸಜ್ಜುಗೊಳಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬೆಂಗಳೂರು ಅರಮನೆ ಮೈದಾನದಲ್ಲಿ ಬುಧವಾರ ಆರಂಭಗೊಂಡ ಮೂರು ದಿನಗಳ ಇನ್ವೆಸ್ಟ್ ಕರ್ನಾಟಕ- invest karnataka-2022 ಹೂಡಿಕೆದಾರರ ಸಮಾವೇಶದಲ್ಲಿ ಅವರು ಮಾತನಾಡಿದರು. ವಿಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಅವರು ಭಾಗಿಯಾದರು. ಬಿಲ್ಡ್ ಫಾರ್ ದಿ ವರ್ಲ್ಡ್ ಎಂಬ ಪರಿಕಲ್ಪನೆಯಡಿ ನಡೆಯುತ್ತಿರುವ ಸಮಾವೇಶ ಇದಾಗಿದೆ.
ಹೂಡಿಕೆಯ ಹಾದಿಗೆ ಕಾಯಕಲ್ಪ
ʻʻದೇಶವನ್ನು ನಾವು ಹೂಡಿಕೆಗಾಗಿ ಸಿದ್ಧಗೊಳಿಸಿದ್ದೇವೆ. ಬ್ಯಾಂಕಿಂಗ್ ವ್ಯವಸ್ಥೆಯನ್ನು ಗಟ್ಟಿಗೊಳಿಸಿದ್ದೇವೆ, ಡಿಜಿಟಲ್ ಕ್ರಾಂತಿಗೆ ವ್ಯವಸ್ಥೆ ಮಾಡಿದ್ದೇವೆ. ೧೫ಕ್ಕೂ ಅಧಿಕ ಅನಗತ್ಯ ಕಾನೂನುಗಳನ್ನು ರದ್ದುಗೊಳಿಸಿದ್ದೇವೆ. ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡಿದೆವು. ಪಾರದರ್ಶಕತೆಯನ್ನು ಹೆಚ್ಚಿಸಿದೆವು, ಹೊಸ ಹೊಸ ಸೆಕ್ಟರ್‌ಗಳನ್ನು ತೆರೆದೆವು. ಮೂಲ ಸೌಕರ್ಯ ಕ್ಷೇತ್ರದಲ್ಲಿ ಸಾಕಷ್ಟು ವ್ಯವಸ್ಥೆ ಮಾಡಿದೆವು. ಈ ಮೂಲಕ ಹೂಡಿಕೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಸಜ್ಜುಗೊಳಿಸಿದ್ದೇವೆʼʼ ಎಂದು ಮೋದಿ ಹೇಳಿದರು.
೮೪ ಬಿಲಿಯನ್ ಡಾಲರ್ ನೇರ ವಿದೇಶಿ ಹೂಡಿಕೆ
ʻʻ೨೧ನೇ ಶತಮಾನದಲ್ಲಿ ದೇಶದ ಅಭಿವೃದ್ಧಿಯ ಗತಿಯೇ ಬದಲಾಗಿದೆ. ನಾವು ಶರವೇಗದಲ್ಲಿ ಮುಂದಕ್ಕೆ ಸಾಗುತ್ತಲೇ ಇದ್ದೇವೆ. ಕಳೆದ ವರ್ಷ ದೇಶದಲ್ಲಿ ೮೪ ಬಿಲಿಯನ್ ಡಾಲರ್ ನೇರ ವಿದೇಶಿ ಹೂಡಿಕೆ ಆಗಿದೆ. ಇದೊಂದು ದಾಖಲೆ. ಇಡೀ ವಿಶ್ವವೇ ಹಲವು ಸಂಕಷ್ಟಗಳಲ್ಲಿ ಬಳಲುತ್ತಿದ್ದರೆ ಭಾರತ ಭದ್ರವಾಗಿದೆʼʼ ಎಂದು ಮೋದಿ ಹೆಮ್ಮೆಯಿಂದ ಹೇಳಿದರು.
ʻʻಕೋವಿಡ್, ಯುದ್ಧದಲ್ಲಿ ಇಡೀ ವಿಶ್ವ ಸಿಕ್ಕಿಬಿದ್ದಿದೆ. ಎಲ್ಲ ಕಡೆ ಹಲವಾರು ರೀತಿಯ ಅತಂತ್ರ ಸ್ಥಿತಿ ಇದೆ. ಭಾರತದಲ್ಲೂ ಯುದ್ಧ, ಕೊರೊನಾದ ಪ್ರಭಾವ ಇತ್ತು. ಇಷ್ಟಿದ್ದರೂ ನಾವು ಎಲ್ಲವನ್ನೂ ಮೆಟ್ಟಿನಿಲ್ಲಲು ಶಕ್ತರಾದೆವು. ಹೀಗಾಗಿ ಇಡೀ ಜಗತ್ತು ನಮ್ಮ ಕಡೆಗೆ ಆಸೆ ಕಣ್ಣುಗಳಿಂದ ನೋಡುತ್ತಿದೆ. ಇದಕ್ಕೆಲ್ಲ ಕಾರಣ ಭಾರತೀಯ ಅರ್ಥ ವ್ಯವಸ್ಥೆ ಮೂಲ ನೆಲೆಗಟ್ಟು ಗಟ್ಟಿಯಾಗಿದೆ ಎಂದು ಜಗತ್ತಿಗೆ ಗೊತ್ತಿದೆ. ಜಗತ್ತಿನೊಂದಿಗೆ ಸೇರಿಕೊಂಡು ಮತ್ತು ಜಗತ್ತಿನ ಅಭಿವೃದ್ಧಿಗಾಗಿ ಶ್ರಮಿಸುವವರು ನಾವು ಎನ್ನುವುದು ಎಲ್ಲರಿಗೂ ಅರ್ಥವಾಗಿದೆʼʼ ಎಂದು ಪ್ರಧಾನಿ ಮೋದಿ ಹೇಳಿದರು.
ಉದ್ಘಾಟನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಈ ಬೃಹತ್ ಸಮಾವೇಶವನ್ನು ಉದ್ಘಾಟಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ,ಸಚಿವ ಅಶ್ವತ್ ನಾರಯಣ್, ಎಂಟಿಬಿ ನಾಗರಾಜ್,ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್,ಕೇಂದ್ರ ಸಚಿವ ಪಿಯೂಶ್ ಗೋಯಲ್, ರಾಜೀವ್ ಚಂದ್ರಶೇಖರ್, ರಾಜಮಾತೆ ಪ್ರಮೋದಾ ದೇವಿ ಉಪಸ್ಥಿತರಿದ್ದರು.
5 ಲಕ್ಷ ಕೋಟಿ ಕೋಟಿ ಹೂಡಿಕೆ, ೫ ಲಕ್ಷ ಉದ್ಯೋಗ ನಿರೀಕ್ಷೆ
ರಾಜ್ಯದಲ್ಲಿ ನಡೆಯುತ್ತಿರುವ ಈ ಐದನೇ ಹೂಡಿಕೆದಾರರ ಸಮಾವೇಶದಲ್ಲಿ ಈ ಬಾರಿ ವಿಶ್ವದ ಮುಂಚೂಣಿಯಲ್ಲಿರುವ ಉದ್ಯಮಿಗಳು ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದ್ದು, ಅಂದಾಜು ೫ ಲಕ್ಷ ಕೋಟಿಗೂ ಅಧಿಕ ಹೂಡಿಕೆ ಆಗಲಿದೆ, ೫ ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಜನೆಯಾಗಲಿವೆ ಎಂಬ ವಿಶ್ವಾಸವಿದೆ. ದೇಶ ವಿದೇಶಗಳ ಕೈಗಾರಿಕೋದ್ಯಮಿಗಳು, ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸುಮಾರು 60 ಕಂಪನಿಗಳೊಂದಿಗೆ ಒಪ್ಪಂದಕ್ಕೆ ಸಿದ್ಧತೆ ನಡೆದಿದೆ.
ಕೈಗಾರಿಕೆಗಳು ಬೆಂಗಳೂರನ್ನೇ ಕೇಂದ್ರೀಕೃತವಾಗಿರಿಸಿಕೊಂಡಿದ್ದು, ಅದನ್ನು ಎರಡು ಮತ್ತು ಮೂರನೇ ಹಂತದ ನಗರಗಳಿಗೂ ವಿಸ್ತರಿಸಲು ಸರ್ಕಾರ ಮುಂದಾಗಿದೆ. ಬೆಂಗಳೂರಿನ ಆಚೆಗೆ ಉದ್ಯಮ ವಿಸ್ತರಣೆ ಮತ್ತು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುತ್ತಿದೆ.
ನವೆಂಬರ್ ೪ರಂದು ಸಮಾರೋಪ
ನವೆಂಬರ್ ೪ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಸಿಎಂ ಬೊಮ್ಮಾಯಿ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಳ್ಳುವರು.
ಸಾಂಸ್ಕೃತಿಕ ಲೋಕವೂ ಇದೆ
ಈ ಸಮಾವೇಶ ಬಂಡವಾಳ ಹೂಡಿಕೆಗಷ್ಟೇ ಸೀಮಿತವಾಗಿಲ್ಲ.ಕರ್ನಾಟಕದ ಸಾಂಸ್ಕೃತಿ ಲೋಕ ಅಲ್ಲಿ ಅನಾವರಣಗೊಳ್ಳಲ್ಲಿದೆ. ಗ್ರಾಮಿ ಪ್ರಶಸ್ತಿ ಪುರಸ್ಕೃತ ರಿಕ್ಕಿ ಕೇಜ್, ಗಾಯಕಿ ವಸುಂಧರಾ ದಾಸ್, ಹಿಂದೂಸ್ಥಾನಿ ಹಾಗೂ ಕರ್ನಾಟಕ ಸಂಗೀತದ ಜುಗಲ್‌ಬಂದಿಯ ಸಂಗೀತ ಆಸ್ವಾದಿಸಬಹುದು. ಯಕ್ಷಗಾನ, ವಸ್ತು ಪ್ರದರ್ಶನ, ಕೈಮಗ್ಗ ಮತ್ತು ಜವಳಿ, ವಾಸ್ತುಶಿಲ್ಪ ಪ್ರದರ್ಶನ, ಚಿತ್ರಕಲಾ ಪರಿಷತ್‌ನಲ್ಲಿ ವಿಶೇಷ ಪ್ರದರ್ಶನ ಇರಲಿದೆ.ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್, ರಾಜ್ಯದ ಎಲ್ಲಾ ಭಾಗಗಳಲ್ಲಿರುವ ವಸ್ತು ಸಂಗ್ರಹಾಲಯಗಳು ಮತ್ತು ಗ್ಯಾಲರಿಗಳಿಂದ ವರ್ಣಚಿತ್ರಗಳು ಮತ್ತು ಕಲಾಕೃತಿಗಳನ್ನು ಪ್ರದರ್ಶಿಸಲಿದೆ.