ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಕಾವು ಏರುತ್ತಿದ್ದರೆ, ದೇಶದಲ್ಲಿ ಐಪಿಎಲ್ ಫಿವರ್ ಬಂದಿದೆ. ಈ ಸೋಮವಾರ (ಏ.17) ನಡೆಯುವ ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವಿನ (IPL 2023) ಹೈ ವೋಲ್ಟೇಜ್ ಪಂದ್ಯದ ಟಿಕೆಟ್‌ಗೆ ಭಾರಿ ಬೇಡಿಕೆ ಇದ್ದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರವೇ ಅಭಿಮಾನಿಗಳು ಸಾಲುಗಟ್ಟಿ ನಿಂತರೂ ಟಿಕೆಟ್ ಸಿಗದೆ ನಿರಾಸೆಗೊಂಡಿದ್ದಾರೆ. ಟಿಕೆಟ್ ಕೌಂಟರ್‌ನಲ್ಲಿ ಟಿಕೆಟ್ ನೀಡದೆ ಸೋಲ್ಡ್‌ಔಟ್ (Ticket soldout) ಎಂದು ಬೋರ್ಡ್ ಹಾಕಿದ್ದಕ್ಕೆ ಕ್ರಿಕೆಟ್ ಪ್ರೇಮಿಗಳು ಗರಂ ಆಗಿದ್ದಾರೆ.
ಐಪಿಎಲ್ ಪಂದ್ಯಾವಳಿಯ ಆರಂಭಿಕ ದಿನದಿಂದಲೂ ಆರ್‌ಸಿಬಿ, ಸಿಎಸ್‌ಕೆ ಪಂದ್ಯ ಇದೆ ಎಂದರೆ ಹೈವೋಲ್ಟೇಜ್ ಕ್ರಿಯೇಟ್ ಆಗುತ್ತಿತ್ತು. ಅಷ್ಟರಮಟ್ಟಿಗೆ ಎರಡೂ ಕಡೆಯ ಫ್ಯಾನ್‌ಗಳು ತಮ್ಮ ಅಭಿಮಾನಗಳನ್ನು ಪ್ರದರ್ಶಿಸುತ್ತಿದ್ದರು. ಈಗ ಬರುವ ಸೋಮವಾರ (ಏ.17) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹಣಾಯಣಿ ನಡೆಯಲಿದ್ದು, ಅಭಿಮಾನಿಗಳು ಟಿಕೆಟ್ ಸಿಗದೆ ನಿರಾಸೆಗೊಂಡಿದ್ದಾರೆ.
ಆಡಳಿತ ಮಂಡಳಿ ಸೋಮವಾರದ ಆರ್‌ಸಿಬಿ ಹಾಗೂ ಸಿಎಸ್‌ಕೆ ಮ್ಯಾಚ್‌ನ ಟಿಕೆಟ್‌ಗಾಗಿ ಶುಕ್ರವಾರ ಕೌಂಟರ್ ತೆರೆಯುವುದಾಗಿ ಹೇಳಿತ್ತು. ಹೀಗಾಗಿ ಗುರುವಾರ ರಾತ್ರಿಯಿಂದಲೇ ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾದು ನಿಂತಿದ್ದರು. ಆದರೆ ಬೆಳಗ್ಗೆ ಒಂದೇ ಒಂದು ಟಿಕೆಟ್ ಕೂಡ ನೀಡದೆ ಸೋಲ್ಡ್‌ಔಟ್ ಎಂದು ಸಿಬ್ಬಂದಿ ಬೋರ್ಡ್ ಹಾಕಿದ್ದಾರೆ.
ಇದನ್ನೂ ಓದಿ: IPL 2023: ಪಂಜಾಬ್ಗೆ ಸೋಲು; ಐಪಿಎಲ್ ಅಂಕಪಟ್ಟಿ ಹೇಗಿದೆ?
ಇದರಿಂದ ಗರಂ ಆದ ಅಭಿಮಾನಿಗಳು ಕಿಡಿಕಾರಿದ್ದು, ಬ್ಲ್ಯಾಕ್‌ನಲ್ಲಿ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಫೋನ್ ಮಾಡಿದ್ದರೆ ಯಾರೂ ಪ್ರತಿಕ್ರಿಯಿಸುತ್ತಿಲ್ಲ. ನಮಗೆ ಮ್ಯಾಚ್ ಟಿಕೆಟ್ ಬೇಕೇ ಬೇಕು ಎಂದು ಮುಗಿಬಿದ್ದರು. ಇತ್ತ ಕ್ರಿಕೆಟ್ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.