ಬೆಂಗಳೂರು: ದೇಶಾದ್ಯಂತ ಹವಾ ಎಬ್ಬಿಸಿರುವ ಇಂಡಿಯನ್ ಪ್ರೀಮಿಯನ್ ಲೀಗ್ (IPL 2023)ನ ಕುತೂಹಲಕಾರಿ ಪಂದ್ಯ ಇಂದು (ಏಪ್ರಿಲ್ 2) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮತ್ತು ಮುಂಬಯಿ ಇಂಡಿಯನ್ಸ್ (Mumbai Indians) ನಡುವೆ ನಡೆಯುವ ಈ ಪಂದ್ಯದ ಟಿಕೆಟ್‌ಗಳೆಲ್ಲವೂ ಸೋಲ್ಡ್ ಔಟ್ ಆಗಿದೆ. ಇಂದು ಬೆಂಗಳೂರಿನ ಎಲ್ಲ ರಸ್ತೆಗಳು ಚಿನ್ನ ಸ್ವಾಮಿ ಸ್ಟೇಡಿಯಂನತ್ತಲೇ ಚಲಿಸಲಿದ್ದು, ಸಂಜೆಯ ನಂತರ ಟ್ರಾಫಿಕ್ ವಿಪರೀತವಾಗಿರಲಿದೆ. ಪಂದ್ಯ ರಾತ್ರಿ 7.3೦ರಿಂದ ಆರಂಭವಾಗಿ 11 ಗಂಟೆಯ ಹೊತ್ತಿಗೆ ಮುಕ್ತಾಯವಾಗಲಿದೆ.
ಕ್ರಿಕೆಟ್ ಪಂದ್ಯ ನೋಡಲು ಬರುವ ಕ್ರಿಕೆಟ್ ಪ್ರೇಮಿಗಳಿಗಾಗಿ ಮೆಟ್ರೋ ರೈಲು ಮತ್ತು ಬಿಎಂಟಿಸಿ ವಿಶೇಷ ಓಡಾಟಕ್ಕೆ ಅನುಮತಿ ನೀಡಿವೆ. ಹೀಗಾಗಿ ಕ್ರಿಕೆಟ್ ನೋಡಲು ಬರುವವರು, ಕ್ರೀಡಾಂಗಣ ತಲುಪುವ ವಿಚಾರದಲ್ಲಿ ಯಾವುದೇ ಚಿಂತೆ ಮಾಡಬೇಕಾಗಿಲ್ಲ.
ರಾತ್ರಿ ಒಂದು ಗಂಟೆವರೆಗೂ ಮೆಟ್ರೋ ಸಂಚಾರ
ಬೆಂಗಳೂರಲ್ಲಿ ನಡೆಯುವ ಐಪಿಎಲ್ ಪಂದ್ಯಾವಳಿಗಾಗಿ ಪಂದ್ಯ ನಡೆಯುವ ಎಲ್ಲ ದಿನಗಳಲ್ಲಿ ಮೆಟ್ರೋ ಸಂಚಾರದ (Metro Timings) ಸಮಯವನ್ನು ಬಿಎಂಆರ್‌ಸಿಎಲ್ ವಿಸ್ತರಿಸಿದೆ. ಬೆಂಗಳೂರಲ್ಲಿ ಏಪ್ರಿಲ್ 2, 10, 17, 26 ಹಾಗೂ ಮೇ 21ರಂದು ಐಪಿಎಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಬೈಯಪ್ಪನಹಳ್ಳಿ – ಕೆಂಗೇರಿ ಮತ್ತು ನಾಗಸಂದ್ರ – ರೇಷ್ಮೆ ಟರ್ಮಿನಲ್‌ನಿಂದ ಕೊನೆಯ ರೈಲು ಸೇವೆಯು ಮಧ್ಯರಾತ್ರಿ 1 ಗಂಟೆ ಹೊರಡಲಿದ್ದು, ಕೆಂಪೇಗೌಡ ನಿಲ್ದಾಣದಿಂದ 1.30ಕ್ಕೆ ಕೊನೇ ರೈಲು ಓಡಾಡಲಿದೆ.
ಗ್ರಾಹಕರಿಗೆ ಅನುಕೂಲವಾಗಲು 50 ರೂಪಾಯಿ ಪೇಪರ್ ಟಿಕೆಟ್ ಅನ್ನು ಪಂದ್ದ ನಡೆಯುವ ದಿನದಂದು ಮಧ್ಯಾಹ್ನ 3 ಗಂಟೆಗೆ ವಿತರಣೆ ಮಾಡಲಾಗುತ್ತದೆ. ಎಂ.ಜಿ ರಸ್ತೆ, ಕಬ್ಬನ್ ಪಾರ್ಕ್ ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೆ ತಲುಪಬಹುದಾಗಿದೆ. ಪೇಪರ್ ಟಿಕೆಟ್ ಖರೀದಿ ಮಾಡುವವರಿಗೆ ಮಾತ್ರ ಈ ದರ ಅನ್ವಯವಾಗಲಿದ್ದು, ಉಳಿದಂತೆ ಕಾರ್ಡ್ ಹಾಗೂ ಕ್ಯೂಆರ್ ಹೋಲ್ಡರ್‌ಗಳಿಗೆ ಸಾಮಾನ್ಯ ದರ ಇರಲಿದೆ.
ಹೆಚ್ಚುವರಿ ಬಸ್ ಸಂಚಾರದ ಸೇವೆ ನೀಡಲಿದೆ ಬಿಎಂಟಿಸಿ
ಬಿಎಂಟಿಸಿ ಕ್ರಿಕೆಟ್ ಪ್ರೇಮಿಗಳಿಗೆ ಮನೆಗೆ ಹೋಗಲು ಚಿನ್ನಸ್ವಾಮಿ ಸ್ಟೇಡಿಯಂ ಬಳಿಯಿಂದ ಹೆಚ್ಚುವರಿ ಬಸ್ ಸೇವೆಗಳನ್ನು ನೀಡಲಿದೆ. ಕಾಡುಗೋಡಿ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಕೆಂಗೇರಿ ಕೆಎಚ್ಬಿ ಕ್ವಾರ್ಟರ್ಸ್, ನೆಲಮಂಗಲ, ಯಲಹಂಕ 5ನೇ ಹಂತ, ಆರ್.ಕೆ.ಹೆಗಡೆ ನಗರ, ಬಾಗಲೂರು, ಹೊಸಕೋಟೆ. ಈ ಬಸ್ಸುಗಳು ಎಚ್ಎಎಲ್ ರಸ್ತೆ, ಹೂಡಿ, ಅಗರ ದೊಮ್ಮಸಂದ್ರ, ಹೊಸೂರು ರಸ್ತೆ, ಜಯದೇವ ಆಸ್ಪತ್ರೆ, ಎಂಸಿಟಿಸಿ- ನಾಯಂಡನಹಳ್ಳಿ, ಮಾಗಡಿ ರಸ್ತೆ, ಯಶವಂತಪುರ, ಹೆಬ್ಬಾಳ, ನಾಗವಾರ, ಟ್ಯಾನರಿ ರಸ್ತೆ, ಹೆಣ್ಣೂರು ರಸ್ತೆ, ಟಿನ್ ಫ್ಯಾಕ್ಟರಿ ಮಾರ್ಗವಾಗಿ ಸಂಚರಿಸಲಿವೆ.
ಕ್ರಿಕೆಟ್ ನೋಡಲು ಬರುವವರಿಗೆ ಎಲ್ಲೆಲ್ಲಿ ಪಾರ್ಕಿಂಗ್
ಚಿನ್ನಸ್ವಾಮಿ ಕ್ರೀಡಾಂಗಣದತ್ತ ವಾಹನಗಳ ದಂಡೇ ಬರುವುದರಿಂದ ಕೆಲವು ಕಡೆ ಪಾರ್ಕಿಂಗ್ ನಿಷೇಧಿಸಲಾಗಿದೆ. ಇನ್ನು ಕೆಲವು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಏಪ್ರಿಲ್ 2ರಂದು ಸಂಜೆ ನಾಲ್ಕರಿಂದ ರಾತ್ರಿ 11ರವರೆಗಿನ ಮಾರ್ಗಸೂಚಿ ಇಲ್ಲಿದೆ.
ಈ ರಸ್ತೆಗಳಲ್ಲಿ ಪಾರ್ಕಿಂಗ್ ನಿರ್ಬಂಧ
ಕ್ವೀನ್ಸ್ ರೋಡ್, ಎಂಜಿ ರೋಡ್‌ನಿಂದ ಕಬ್ಬನ್ ಪಾರ್ಕ್ ರಸ್ತೆ, ರಾಜಭವನ್ ರೋಡ್-ಸೆಂಟ್ರಲ್ ಸ್ಟ್ರೀಟ್ ರೋಡ್, ಕಬ್ಬನ್ ರಸ್ತೆ, ಸೈಂಟ್ ಮಾರ್ಕ್ ರಸ್ತೆ, ಮ್ಯೂಸಿಯಂ ರೋಡ್, ಕಸ್ತೂರ್ಬಾ ರೋಡ್, ಅಂಬೇಡ್ಕರ್ ವೀದಿ, ಟ್ರಿನಿಟಿ, ಲಾವೆಲ್ಲೆ ರೋಡ್, ವಿಠಲ್ ಮಲ್ಯ ರೋಡ್, ನೃಪತುಂಗ ರಸ್ತೆ
ಪಾರ್ಕಿಂಗ್‌ಗೆ ಎಲ್ಲೆಲ್ಲಿ ವ್ಯವಸ್ಥೆ
ಕಿಂಗ್ಸ್ ರೋಡ್, ಯುಬಿ ಸಿಟಿ ಪಾರ್ಕಿಂಗ್, ಬಿಎಂಟಿಸಿ ಟಿಟಿಎಂಸಿ ಶಿವಾಜಿ ನಗರ್ ಫಸ್ಟ್ ಫ್ಲೋರ್, ಹಳೆ ಕೆಜಿಐಡಿ ಬಿಲ್ಡಿಂಗ್, ಮೆಟ್ರೋ ಲೇನ್ ಕೆಳಗಿನ ಬಿಆರ್‌ವಿ ಗ್ರೌಂಡ್
ಇಂದು ಸಂಜೆ ಮಳೆ ಬರುತ್ತಾ?
ಬೆಂಗಳೂರಿನಲ್ಲಿ ಏಪ್ರಿಲ್ 3ರ ಸಂಜೆವರೆಗೆ ಮಳೆ ಬರುವ ಮುನ್ಸೂಚನೆ ಇದೆಯಾದರೂ ಆಟವನ್ನೇ ನಿಲ್ಲಿಸುವಷ್ಟು ಜೋರಾಗಿ ಬರುವ ಸಾಧ್ಯತೆ ಇಲ್ಲ. ಸಣ್ಣಗೆ ತುಂತುರು ಮಳೆ ಬರಲೂಬಹುದು. ಹೀಗೆ ಸ್ವಲ್ಪ ಹೊತ್ತು ಮಳೆ ಬಂದರೂ ಬೇಗನೆ ಅದರ ಪರಿಣಾಮಗಳನ್ನು ನಿವಾರಿಸಿ ಆಟಕ್ಕೆ ಅಣಿ ಮಾಡುವ ತಂತ್ರಜ್ಞಾನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ.
ಇದನ್ನೂ ಓದಿ : IPL 2023: ಆರ್ಸಿಬಿ-ಮುಂಬೈ ವಿರುದ್ಧದ ಪಂದ್ಯದ ಪಿಚ್ ರಿಪೋರ್ಟ್ ಹೇಗಿದೆ?