ಬೆಂಗಳೂರು: ಮೇ 21ರಂದು ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯಲಿರುವ ಗುಜರಾತ್ ಟೈಟನ್ಸ್ ಮತ್ತು ಆರ್‌ಸಿಬಿ ನಡುವಿನ (IPL 2023) ಹೈ ವೋಲ್ಟೇಜ್ ಪಂದ್ಯದ ಟಿಕೆಟ್ ಸಿಗದೆ ಆಕ್ರೋಶಗೊಂಡ ಕ್ರಿಕೆಟ್ ಅಭಿಮಾನಿಗಳು ಅಧಿಕಾರಿಗಳ ವಿರುದ್ಧ ತಮ್ಮ ಸಿಟ್ಟು ಪ್ರದರ್ಶಿಸಿದರು. ಕ್ರಿಕೆಟ್ ಫ್ಯಾನ್ಸ್ ಆಕ್ರೋಶದ ಬಿಸಿ ಭಾರತ ಕ್ರಿಕಟ್ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ (Rahul dravid) ಅವರಿಗೂ ತಟ್ಟಿತು.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ತಂಡ ಗುರುವಾರ (ಮೇ 18) ಜಯಬೇರಿ ಸಾಧಿಸಿ ಮುಂದಿನ ಪ್ಲೇಆಫ್ ಪ್ರವೇಶಕ್ಕೆ ದೊಡ್ಡ ಹೆಜ್ಜೆಯಿಟ್ಟಿದೆ. ಮೇ 21ರಂದು ಗುಜರಾತ್ ಟೈಟನ್ಸ್ ಮತ್ತು ಆರ್‌ಸಿಬಿ ನಡುವೆ ನಿರ್ಣಾಯಕ ಪಂದ್ಯ ನಡೆಯಲಿದೆ. ಅತ್ಯಂತ ಮಹತ್ವದ ಈ ಪಂದ್ಯವನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಅದರಲ್ಲೂ ಆರ್‌ಸಿಬಿ ಫ್ಯಾನ್ಸ್ ಕಾತರರಾಗಿದ್ದಾರೆ. ಆದರೆ, ಟಿಕೆಟ್ ಸಿಗದೆ ಅವರು ಸಿಟ್ಟಿಗೆದ್ದಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರವೇ ಅಭಿಮಾನಿಗಳು ಸಾಲುಗಟ್ಟಿ ನಿಂತರೂ ಟಿಕೆಟ್ ಸಿಗದೆ ನಿರಾಸೆಗೊಂಡಿದ್ದಾರೆ. ಟಿಕೆಟ್ ಕೌಂಟರ್‌ನಲ್ಲಿ ಟಿಕೆಟ್ ನೀಡದೆ ಸೋಲ್ಡ್‌ಔಟ್ (Ticket soldout) ಎಂದು ಬೋರ್ಡ್ ಹಾಕಿದ್ದಕ್ಕೆ ಕ್ರಿಕೆಟ್ ಪ್ರೇಮಿಗಳು ಗರಂ ಆಗಿದ್ದಾರೆ.
ರಾಯಚೂರು, ಕೊಪ್ಪಳ, ಬಳ್ಳಾರಿ, ಬೀದರ್, ಗುಲ್ಬರ್ಗ, ಯಾದಗಿರಿ, ಹುಬ್ಬಳ್ಳಿಯಿಂದ ಕ್ರಿಕೆಟ್ ಅಭಿಮಾನಿಗಳು ಆಗಮಿಸಿದ್ದಾರೆ. ಗುರುವಾರ ರಾತ್ರಿಯಿಂದಲೇ ಕ್ಯೂ ನಿಂತಿದ್ದರು ಟಿಕೆಟ್ ಸಿಗುತ್ತಿಲ್ಲ. ಈ ಬಗ್ಗೆ ಕೇಳಿದರೆ ಒಂದು ಟಿಕೆಟ್‌ಗೆ 9 ಸಾವಿರ ಎಂದು ಹೇಳುತ್ತಿದ್ದಾರೆ. ಕೇವಲ 150 ಟಿಕೆಟ್ ಮಾತ್ರ ಕೊಟ್ಟಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಟಿಕೆಟ್ ವಿಚಾರದಲ್ಲಿ ತುಂಬಾ ಮೋಸ ಆಗುತ್ತಿದೆ ಎಂದು ಮ್ಯಾನೇಜ್ಮೆಂಟ್ ವಿರುದ್ಧ ಅಭಿಮಾನಿಗಳು ಕಿಡಿಕಾರಿದರು.
ಈ ನಡುವೆ, ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದ ಪರಿಸರಕ್ಕೆ ಬಂದಾಗ ಕಾರನ್ನು ಅಡ್ಡಗಟ್ಟಿ ʻʻಟಿಕೆಟ್ ಸಿಗುತ್ತಿಲ್ಲ ಸರ್ʼʼ ಎಂದು ಆರ್‌ಸಿಬಿ ಅಭಿಮಾನಿಗಳು ಅಳಲು ತೋಡಿಕೊಂಡರು.
ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ