ಬೆಂಗಳೂರು: ಐಪಿಎಲ್ ಕ್ರಿಕೆಟ್ ಹವಾ (IPL 2023) ಜೋರಾಗಿದ್ದು, ಸೋಮವಾರ (ಏ.17) ನಡೆಯುವ ಹೈವೋಲ್ಟೇಜ್ ಮ್ಯಾಚ್‌ಗೆ ಚಿನ್ನಸ್ವಾಮಿ ಕ್ರೀಡಾಂಗಣದ ಎದುರು ಟಿಕೆಟ್‌ಗಾಗಿ ಭಾನುವಾರವೂ ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹಣಾಹಣಿ ನಡೆಯಲಿದ್ದು, ಅಭಿಮಾನಿಗಳು ಸ್ಟೇಡಿಯಂ ಮುಂಭಾಗ ಜಮಾಯಿಸಿದ್ದರು. ಶುಕ್ರವಾರವೇ ಟಿಕೆಟ್ ಸೋಲ್ಡ್‌ಔಟ್ ಎಂದು ಬೋರ್ಡ್ ಹಾಕಿದ್ದರಿಂದ ಗಲಾಟೆ ನಡೆದಿತ್ತು. ಆದರೂ ಮತ್ತೆ ಇಲ್ಲಿ ಕ್ರೀಡಾಭಿಮಾನಿಗಳು ಸೇರಿರುವುದು ಗೊಂದಲಕ್ಕೆ ಕಾರಣವಾಗಿತ್ತು.
ಆಡಳಿತ ಮಂಡಳಿ ಸೋಮವಾರದ ಆರ್‌ಸಿಬಿ ಹಾಗೂ ಸಿಎಸ್‌ಕೆ ಮ್ಯಾಚ್‌ನ ಟಿಕೆಟ್‌ಗಾಗಿ ಶುಕ್ರವಾರ ಕೌಂಟರ್ ತೆರೆಯುವುದಾಗಿ ಹೇಳಿತ್ತು. ಹೀಗಾಗಿ ಗುರುವಾರ ರಾತ್ರಿಯಿಂದಲೇ ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾದು ನಿಂತಿದ್ದರು. ಆದರೆ, ಬೆಳಗ್ಗೆ ಒಂದೇ ಒಂದು ಟಿಕೆಟ್ ಕೂಡ ನೀಡದೆ ಸೋಲ್ಡ್‌ಔಟ್ ಎಂದು ಸಿಬ್ಬಂದಿ ಬೋರ್ಡ್ ಹಾಕಿದ್ದಾಗಲೂ ಅಭಿಮಾನಿಗಳು ಗರಂ ಆಗಿ ಗಲಾಟೆ ಮಾಡಿದ್ದರು.
ಹೀಗಾಗಿ, ಭಾನುವಾರ ಟಿಕೆಟ್ ಸಿಗಬಹುದೇನೋ ಎಂಬ ಕಾರಣಕ್ಕೆ, ಬೆಳಗ್ಗೆಯೇ ಟಿಕೆಟ್ ಖರೀದಿ ಮಾಡಲು ಸ್ಟೇಡಿಯಂ ಮುಂದೆ ಜನಸಾಗರವೇ ಹರಿದು ಬಂದಿದೆ. ಆದರೆ, ಟಿಕೆಟ್ ಸಿಗದಿದ್ದಕ್ಕೆ ನಿರಾಸೆಗೊಂಡ ಅಭಿಮಾನಿಗಳು ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ. ಇತ್ತ ನೂರಾರು ಜನರು ಒಮ್ಮೆಲೆ ಆಗಮಿಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜನರನ್ನು ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಇದನ್ನೂ ಓದಿ: IPL 2023: ದಾದಾ-ವಿರಾಟ್ ಮಧ್ಯೆ ಮೈದಾನದಲ್ಲೇ ನಡೆಯಿತು ಮುಸುಕಿನ ಗುದ್ದಾಟ; ವಿಡಿಯೊ ವೈರಲ್
ಬ್ಲ್ಯಾಕ್‌ನಲ್ಲಿ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಮಾಡಲಾಗಿದೆ ಎಂದು ಅಭಿಮಾನಿಗಳು ಆರೋಪಿಸಿದರು. ನಮಗೆ ಆರ್‌ಸಿಬಿ/ಸಿಎಸ್‌ಕೆ ಮ್ಯಾಚ್‌ನ ಟಿಕೆಟ್ ಬೇಕೇ ಬೇಕು ಎಂದು ಮುಗಿಬಿದ್ದರು. ಇತ್ತ ಕ್ರಿಕೆಟ್ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.