ನವದೆಹಲಿ: ಕರ್ನಾಟಕ ರಾಜ್ಯ ಪೊಲೀಸ್ ಮಾಜಿ ಮಹಾನಿರ್ದೇಶಕ ಪ್ರವೀಣ್ ಸೂದ್ (Praveen Sood) ಅವರು ಕೇಂದ್ರೀಯ ತನಿಖಾ ದಳದ (CBI) ನೂತನ ನಿರ್ದೇಶಕರಾಗಿ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ. 1986ರ ಬ್ಯಾಚ್, ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಪ್ರವೀಣ್ ಸೂದ್ ಅವರು ಸಿಬಿಐನ 34ನೇ ನಿರ್ದೇಶಕರಾಗಿದ್ದಾರೆ. ಸುಬೋಧ್ ಕುಮಾರ್ ಜೈಸ್ವಾಲ್ ಅವರ ಅಧಿಕಾರದ ಅವಧಿ ಮುಗಿದ ಹಿನ್ನೆಲೆಯಲ್ಲಿ ಪ್ರವೀಣ್ ಸೂದ್ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಮರುದಿನ ಅಂದರೆ, ಮೇ 14ರಂದು ಪ್ರವೀಣ್ ಸೂದ್ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಸದ್ಯ, ದೆಹಲಿ ಅಬಕಾರಿ ನೀತಿ ಅಕ್ರಮ ಪ್ರಕರಣ ಸೇರಿ ಸಿಬಿಐ ಹಲವು ಸೂಕ್ಷ್ಮ ಪ್ರಕರಣಗಳ ಕುರಿತು ತನಿಖೆ ನಡೆಸುತ್ತಿದೆ.
ಪ್ರವೀಣ್ ಸೂದ್ ಹಿನ್ನೆಲೆ ಏನು?
ಪ್ರವೀಣ್ ಸೂದ್ ಅವರು ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯವರಾಗಿದ್ದಾರೆ. ಇವರು ಬಿ.ಟೆಕ್ ಪದವೀಧರರಾಗಿದ್ದು, ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. 1985ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಮೈಸೂರಿನಲ್ಲಿ ವೃತ್ತಿ ಜೀವನ ಆರಂಭ
1989ರಲ್ಲಿ ಮೈಸೂರು ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಆಗಿ ಪ್ರವೀಣ್ ಸೂದ್ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಬಳಿಕ ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿಭಾಯಿಸಿದ್ದಾರೆ.
ಮಾರಿಷಸ್‌ಗೆ ಸಲಹೆಗಾರಾಗಿದ್ದ ಸೂದ್
ಈ ನಡುವೆ ಮಾರಿಷಸ್ ದೇಶಕ್ಕೆ ಪೊಲೀಸ್ ಸಲಹೆಗಾರರಾಗಿಯೂ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ. ಪುನಃ ಅವರು ತಮ್ಮ ಆರಂಭಿಕ ಕ್ಷೇತ್ರವಾದ ಮೈಸೂರಿನಲ್ಲಿ 2004-2007ರವರೆಗೆ ಸೇವೆ ಸಲ್ಲಿಸಿದ್ದಾರೆ. ಆಗ ಅವರು ಮೈಸೂರು ಪೊಲೀಸ್ ಆಯುಕ್ತರಾಗಿದ್ದರು.
ಇದನ್ನೂ ಓದಿ: Praveen Sood: ಮುಂದಿನ ಸಿಬಿಐ ನಿರ್ದೇಶಕ ಡಿಜಿಪಿ ಪ್ರವೀಣ್ ಸೂದ್; ಕೇಂದ್ರದ ಅಧಿಕೃತ ಆದೇಶ
2008ರಲ್ಲಿ ಬೆಂಗಳೂರು ನಗರದ ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರಾಗಿ ನೇಮಕಗೊಂಡಿದ್ದ ಪ್ರವೀಣ್ ಸೂದ್, 2013-14ರಲ್ಲಿ ಕರ್ನಾಟಕ ಹೌಸಿಂಗ್ ಕಾರ್ಪೊರೇಷನ್ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಕಾರ್ಯನಿರ್ವಹಣೆ ಮಾಡಿದ್ದರು. 2017ರಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿಯೂ ಕೆಲಸ ಮಾಡಿದ್ದಾರೆ. ಇವರ ಕರ್ತವ್ಯ ನಿಷ್ಠೆಗೆ 1996ರಲ್ಲಿ ಮುಖ್ಯಮಂತ್ರಿಗಳ ಪದಕ ಸಿಕ್ಕಿದೆ. ಅಲ್ಲದೆ, 2011ರಲ್ಲಿ ರಾಷ್ಟ್ರಪತಿಗಳ ಪದಕವನ್ನೂ ಇವರು ಪಡೆದಿದ್ದಾರೆ.