ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ರವೀಂದ್ರನಾಥ ಅವರ ರಾಜೀನಾಮೆ ಹಿನ್ನೆಲೆ ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿದೆ. ಹಲವು ನಾಯಕರು ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ರಾಜೀನಾಮೆ ಅಂಗೀಕರಿಸದಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಈ ಬಗ್ಗೆ ಸರಕಾರದ ನಡೆಯನ್ನು ಪ್ರಶ್ನಿಸಿದ್ದಾರೆ.
ನಿಯೋಗದಿಂದ ಸಿಎಸ್ ಭೇಟಿ
ಈ ಪ್ರಕರಣದ ಕುರಿತು ಅನುಸೂಚಿತ ಜಾತಿ ಪಂಗಡಗಳ ಸಮಿತಿ ಅಧ್ಯಕ್ಷ ಎಂ.ಪಿ. ಕುಮಾರ ಸ್ವಾಮಿ ನೇತೃತ್ವದಲ್ಲಿ ಪ್ರಮುಖ ಸಭೆ ಕರೆಯಲಾಗಿದೆ. ಸಮಿತಿಯ ಸದಸ್ಯರು ರಾಜ್ಯ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿ ರವೀಂದ್ರ ನಾಥ್ ತಮ್ಮ ರಾಜೀನಾಮೆ ಹಿಂಪಡೆಯಲು ತಮ್ನ ಅಭ್ಯಂತರವಿಲ್ಲ ಎಂದು ಮುಖ್ಯ ಕಾರ್ಯದರ್ಶಿಗಳು ನಿಯೋಗಕ್ಕೆ ಭರವಸೆ ನೀಡಿದ್ದಾರೆ. ಈ ವೇಳೆ ಶಾಸಕರಾದ ಮಹೇಶ್, ಪಿ.ರಾಜೀವ್, ಅಬ್ಬಯ್ಯ, ಪ್ರಸಾದ್, ಪ್ರೊ. ಲಿಂಗಣ್ಣ ಇನ್ನಿತರರು ಹಾಜರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಪ್ರಕರಣದ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ:
ರವೀಂದ್ರನಾಥ್ ಅವರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿದ್ದರು. ನಕಲಿ ಜಾತಿ ಪ್ರಮಾಣಪತ್ರ ಪಡೆದವರ ಮೇಲೆ ತನಿಖೆ ಮಾಡಿ, ಕ್ರಮ ಕೈಗೊಳ್ಳುವುದು ಅವರ ಕರ್ತವ್ಯವಾಗಿತ್ತು. ರವೀಂದ್ರನಾಥ್ ಅವರು ಪ್ರಭಾವಿ ವ್ಯಕ್ತಿಗಳ ಬಗ್ಗೆ ತನಿಖೆ ಮಾಡಿದ್ದರು, ಹಾಗಾಗಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ ಎಂದು ವರದಿಯಾಗಿದೆ. ಈ ಬಗ್ಗೆ ಸ್ವತಃ ರವೀಂದ್ರನಾಥ್ ಅವರೇ ಹೇಳಿದ್ದಾರೆ. ಸರ್ಕಾರ ಹೀಗೆ ಮಾಡಿದ್ದರೆ ಅದು ದೊಡ್ಡ ಅಪರಾಧ.
ರೇಣುಕಾಚಾರ್ಯ ತಮ್ಮ ಪುತ್ರಿಗಾಗಿ ʼಬೇಡ ಜಂಗಮʼ ಜಾತಿಯ ನಕಲಿ ಜಾತಿ ಪ್ರಮಾಣಪತ್ರ ತೆಗೆದುಕೊಂಡಿದ್ದರು. ಈ ವಿಚಾರ ಸದನದಲ್ಲೂ ಚರ್ಚೆಯಾಗಿತ್ತು. ಆದರೆ ರೇಣುಕಾಚಾರ್ಯ ʼಬೇಡ ಜಂಗಮʼ ಜಾತಿ ಪ್ರಮಾಣಪತ್ರಕ್ಕೆ ಅರ್ಹರಲ್ಲ. ಈ ರೀತಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕಲ್ಲವೇ? ರಾಜ್ಯದಲ್ಲಿ ದುರ್ಬಲವಾದ ಭ್ರಷ್ಟ ಸರ್ಕಾರವಿದೆ, ಇಂತಹ ಸರ್ಕಾರದಲ್ಲಿ ನ್ಯಾಯ ಎಲ್ಲಿ ಸಿಗುತ್ತೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ:
ಐಪಿಎಸ್ ಅಧಿಕಾರಿ ರವೀಂದ್ರನಾಥ್ ಅವರ ಕಾರ್ಯವೈಖರಿಯ ಬಗ್ಗೆ, ಅವರ ದಕ್ಷತೆಯ ಬಗ್ಗೆ ಕುಮಾರಸ್ವಾಮಿಯವರು ಅಭಿಮಾನ ಪಟ್ಟಿದಗ್ದು ಅಲ್ಲದೆ, ಅವರ ರಾಜೀನಾಮೆಯನ್ನು ಸರಕಾರ ಅಂಗೀಕರಿಸಬಾರದು ಎಂದು ಮನವಿ ಮಾಡಿದ್ದಾರೆ. ʼರವೀಂದ್ರನಾಥ್ ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ದಲಿತ, ದಕ್ಷ ಅಧಿಕಾರಿ ರವೀಂದ್ರನಾಥ್ ಅವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರಕಾರಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ತಿಮಿಂಗಿಲಗಳಿಗೆ ಬಲೆ ಹಾಕಿದ್ದರು ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಸರಕಾರದ ನಡೆಯನ್ನು ವಿರೋಧಿಸಿದ ಕುಮಾರಸ್ವಾಮಿ ಅವರು ʼಈ ಸರಕಾರ ಯಾರ ಬಾಲಂಗೋಚಿ ಎನ್ನುವುದು ಈ ವರ್ಗಾವಣೆ ಒಂದರಿಂದಲೇ ಅರ್ಥವಾಗುತ್ತದೆ. ಏಕೆಂದರೆ, ಆರೋಪಿತ ನಿವೃತ್ತ ಅಧಿಕಾರಿ ಕಾಂಗ್ರೆಸ್ ಸರಕಾರದಲ್ಲಿ ಗೃಹ ಇಲಾಖೆ ಸಲಹೆಗಾರರಾಗಿದ್ದರು. 5 ವರ್ಷ ರಾಜ್ಯವನ್ನಾಳಿದ ಮುಖ್ಯಮಂತ್ರಿಗೆ ಆಪ್ತರೂ ಆಗಿದ್ದರು. ಅವರಿಗೆ ನೋಟೀಸ್ ನೀಡಿದಾಕ್ಷಣ ಡಾ.ರವೀಂದ್ರನಾಥ್ʼರನ್ನು ವರ್ಗಾವಣೆ ಮಾಡಲಾಗಿದೆ. ಒಬ್ಬ ದಲಿತ ಅಧಿಕಾರಿಯನ್ನು ಬಲಿ ಹಾಕಲು ಎರಡೂ ರಾಷ್ಟ್ರೀಯ ಪಕ್ಷಗಳು ನಡೆಸಿದ ಷಡ್ಯಂತ್ರ ಇದು ಎಂಬುದು ನನ್ನ ನೇರ ಆರೋಪʼ ಎಂದು ಸರಕಾರದ ನಡೆಯ ಬಗ್ಗೆ ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ಸರಕಾರ ನಡೆದುಕೊಳ್ಳುತ್ತಿರವ ರೀತಿ ಪ್ರಮಾಣಿಕ ಅಧಿಕಾರಿಗಳಿಗೆ ಬೆದರಿಕೇ ನೀಡಿದಂತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.