ಬೆಂಗಳೂರು: ರಾಜ್ಯದಲ್ಲಿ ಒಂದೇ ದಿನ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಬಂಧನವಾಗಿರುವುದು ಅಧಿಕಾರಿಗಳ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್, “ಐಪಿಎಸ್ ಅಧಿಕಾರಿಗಳ ಮೇಲೆ ಯಾವುದೇ ಶಿಸ್ತುಕ್ರಮ ಆಗುವುದಿಲ್ಲ ಎಂದು ಬಹಳಷ್ಟು ಜನರು ನನಗೆ ಹೇಳ್ತಾ ಇದ್ದದ್ದು ಸುಳ್ಳು ಎಂಬುದು ಮೊತ್ತ ಮೊದಲ ಬಾರಿಗೆ ರಾಜ್ಯದಲ್ಲಿ ನಡೆದ ಎಡಿಜಿ ಹುದ್ದೆಯ ಐಪಿಎಸ್ ಅಧಿಕಾರಿ ಬಂಧನ ಸಾಕ್ಷಿಯಾಗಿದೆ. ಕಾನೂನಿನ ಮುಂದೆ ಎಲ್ಲರೂ ಒಂದೇ. ಅಖಿಲ ಭಾರತ ಸಿವಿಲ್ ಸೇವಾ ನಿಯಮದಡಿ ಬಂಧನ ಆದರೆ ಸಸ್ಪೆಂಡ್ ಕೂಡ ಮಾಡಲೇಬೇಕಾಗುತ್ತದೆʼʼ ಎಂದಿದ್ದಾರೆ.
ಭ್ರಷ್ಟಾಚಾರ ಪ್ರಕರಣಗಳನ್ನು ತನಿಖಾ ಸಂಸ್ಥೆಗಳಾದ ಸಿಐಡಿ ಮತ್ತು ಎಸಿಬಿಗಳು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಹೈಕೋರ್ಟ್ ಚಾಟಿ ಬೀಸುತ್ತಿದ್ದಂತೆಯೇ ಎರಡು ಪ್ರತ್ಯೇಕ ಭ್ರಷ್ಟಾಚಾರ ಪ್ರಕರಗಳಿಗೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಹಾಗೂ ಐಎಎಸ್ ಅಧಿಕಾರಿ ಜೆ ಮಂಜುನಾಥ್ ಅವರನ್ನು ಸೋಮವಾರ ಬಂಧಿಸಲಾಗಿತ್ತು.
ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಟ್ವೀಟ್‌ಗೆ ಅನೇಕರು ಪ್ರತಿಕ್ರಿಯಿಸಿದ್ದು, ಅಂಬರೀಷ್ ಮಡಿವಾಳ ಎಂಬುವರು, ಐಪಿಎಸ್ ಅಧಿಕಾರಿ ಆದರೆ ಏನು ಕೆಎಎಸ್ ಅಧಿಕಾರಿ ಆದರೆನು ಮೇಡಂ ಕಾನೂನಿನ ಮುಂದೆ ಅಪರಾಧಿಗಳೂ ಅಪರಾಧಗಳೇ.. ಇಂಥ ಕೆಟ್ಟ ವ್ಯವಸ್ಥೆಯ ಮಧ್ಯೆ ಅಮಾಯಕ ವಿಧ್ಯಾರ್ಥಿಗಳ ಬದುಕು ಬಲು ಶೋಚನೀಯ ಸ್ಥಿತಿಗೆ ತಲುಪಿದೆ.. #₹ದುಡ್ಡು ಇದ್ರೆ ದುನಿಯಾ ಮುಂದೆ ಕಣ್ಣಿಗೆ ಬಟ್ಟೆ ಕಟ್ಟಿರೋ ನ್ಯಾಯ ದೇವತೆ ಕಣ್ಣು ಬಿಡುತ್ತಾಳ…? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು ಡಿಸಿ ಕಂದಾಯ ಇಲಾಖೆಯ ಮಂತ್ರಿಗಳಿಗೆ ಗೊತ್ತಿಲ್ಲದೇ ಭ್ರಷ್ಟಾಚಾರ ಮಾಡಲು ಸಾಧ್ಯನಾ? ಪೊಲೀಸ್ ಐ ಪಿ ಎಸ್ ಅಧಿಕಾರಿ ಗೃಹ ಇಲಾಖೆಯ ಮಂತ್ರಿಗೆ ಗೊತ್ತಿಲ್ಲದೇ ಭ್ರಷ್ಟಾಚಾರ ಮಾಡಲು ಸಾಧ್ಯನಾ? ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.
ಡಿ. ರೂಪಾ ಹೇಳಿದಂತೆ ಬಂಧನಕ್ಕೊಳಗಾಗಿರುವ ಇಬ್ಬರು ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿದೆ.
ಇದನ್ನೂ ಓದಿ| ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ, ಬಂಧಿತ ಎಡಿಜಿಪಿ ಅಮೃತ್ ಪಾಲ್ ವಿಚಾರಣೆ ಇಂದು