Site icon Vistara News

Road accident : ಮದ್ಯ ಸಾಗಿಸುತ್ತಿದ್ದ ಲಾರಿಗೆ ಅದಿರು ಸಾಗಾಟದ ಲಾರಿ ಡಿಕ್ಕಿ; ಚಾಲಕ ಸ್ಥಳದಲ್ಲೇ ಮೃತ್ಯುವಶ

Karwar accident

#image_title

ಕಾರವಾರ: ಮದ್ಯ ಸಾಗಿಸುತ್ತಿದ್ದ ಲಾರಿಗೆ ಅದಿರು ಸಾಗಾಟದ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ (Road accident) ಅದಿರು ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ ತೋಡೂರು ಗ್ರಾಮದ ಬಳಿ ನಡೆದಿದೆ.

ಬುಧವಾರ ಮುಂಜಾನೆ ನಡೆದ ಅಪಘಾತದಲ್ಲಿ ಮೃತಪಟ್ಟ ಚಾಲಕನನ್ನು ರೂಪೇಶ ಪಾಟೀಲ್(23) ಎಂದು ಗುರುತಿಸಲಾಗಿದೆ. ಇವರು ಬೆಳಗಾವಿ ಜಿಲ್ಲೆಯ ಖಾನಾಪುರ ನಿವಾಸಿ.

ಕಾರವಾರ ಬಳಿ ನಡೆದ ಅಪಘಾತದ ದೃಶ್ಯ

ಎರಡೂ ಲಾರಿಗಳು ಗೋವಾದಿಂದ ಅಂಕೋಲಾದತ್ತ ತೆರಳುತ್ತಿದ್ದವು. ಮದ್ಯ ತುಂಬಿದ ಲಾರಿ ಮುಂದಿನಿಂದ ಸಾಗುತ್ತಿದ್ದರೆ, ಅದಿರು ಲಾರಿ ಹಿಂದಿನಿಂದ ಸಾಗುತ್ತಿತ್ತು. ಬೆಳಗಿನ ಜಾವ ನಿದ್ದೆ ಮಂಪರಿನಲ್ಲಿ ಮುಂಬದಿ ತೆರಳುತ್ತಿದ್ದ ಮದ್ಯ ಸಾಗಾಟ ಲಾರಿಗೆ ಅದಿರು ಲಾರಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಮದ್ಯ ಸಾಗಾಟದ ಲಾರಿ ನುಜ್ಜುಗುಜ್ಜಾಗಿದೆ. ಮದ್ಯದ ಬಾಕ್ಸ್‌ಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ನಡುವೆ, ಲಾರಿಯ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಚಾಲಕ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕ್ರೇನ್ ಮೂಲಕ ಲಾರಿಗಳ ತೆರವು ಕಾರ್ಯಾಚರಣೆ ನಡೆದಿದೆ. ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌- ಲಾರಿ ಮಧ್ಯೆ ಭೀಕರ ಅಪಘಾತ; ಸವಾರ ಸ್ಥಳದಲ್ಲೇ ಮೃತ್ಯು

ಗದಗ: ಬೈಕ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಕನಕಾಪೂರ ದ್ಯಾಮವ್ವ ದೇವಿ ದೇವಸ್ಥಾನದ ಬಳಿ ನಡೆದಿದೆ. ಶಿಗ್ಲಿ ಗ್ರಾಮದ ರಾಜು‌ ಬಸರಿ(41) ಮೃತ ದುರ್ದೈವಿ.

ಡಾಬಾ ಹಾಗೂ ಹೋಟೆಲ್ ಗಳಿಗೆ ರೊಟ್ಟಿ ಪೂರೈಕೆ ಮಾಡುತ್ತಿದ್ದ ರಾಜು ಅವರು ತಮ್ಮ ಬೈಕ್‌ನಲ್ಲಿ ಶಿಗ್ಲಿ ಗ್ರಾಮದಿಂದ ಲಕ್ಷ್ಮೇಶ್ವರ ಪಟ್ಟಣದತ್ತ ತೆರಳುತ್ತಿದ್ದರು. ಈ ವೇಳೆ‌ ಲಕ್ಷ್ಮೇಶ್ವರ ಪಟ್ಟಣದಿಂದ ಶಿಗ್ಲಿ ಗ್ರಾಮದತ್ತ ಬರುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಅಪಘಾತದ ಹೊಡೆತಕ್ಕೆ ಲಾರಿ ಕೂಡಾ ನಿಯಂತ್ರಣ ಕಳೆದುಕೊಂಡ ರಸ್ತೆ ಪಕ್ಕದ ಗುಂಡಿಗೆ ಇಳಿದು ನಿಂತಿದೆ. ಲಾರಿ ಚಾಲಕನಿಗೂ ಗಾಯಗಳಾಗಿವೆ.

ಇದನ್ನೂ ಓದಿ : Road accident : ಸವದತ್ತಿ ಪಟ್ಟಣದಲ್ಲಿ ಲಾರಿ ಬ್ರೇಕ್‌ ಫೇಲ್‌ ಆಗಿ ಸರಣಿ ಅಪಘಾತ; ಸ್ಥಳದಲ್ಲೇ ಇಬ್ಬರು ಮೃತ್ಯು

Exit mobile version