ನವ ದೆಹಲಿ: ಕರ್ನಾಟಕದಲ್ಲಿ ಅದಿರು ಉತ್ಪಾದನೆಗೆ ಇದ್ದ ವಾರ್ಷಿಕ ಮಿತಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಹೆಚ್ಚಿಸಿದೆ. ಇದರಿಂದ ಸಹಜವಾಗಿಯೇ ರಾಜ್ಯದಲ್ಲಿ ಕಬ್ಬಿಣದ ಅದಿರು ಉತ್ಪಾದನೆ ಚಟುವಟಿಕೆಗಳು ಇನ್ನಷ್ಟು ಬಿರುಸುಗೊಳ್ಳಲಿವೆ. ಸುಪ್ರೀಂ ಕೋರ್ಟ್‌ನ ಈ ಆದೇಶವು ಷೇರುಪೇಟೆಯಲ್ಲಿ ಲೋಹ ವಲಯದ ಷೇರುಗಳ ಮೌಲ್ಯ ಹೆಚ್ಚಳಕ್ಕೂ ಕಾರಣವಾಗಿದೆ. ಈ ಹಿಂದೆ, ಅಕ್ರಮ ಗಣಿಗಾರಿಕೆ ಮತ್ತು ಪರಿಸರ ಸಂರಕ್ಷಣೆಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಅದಿರು ಉತ್ಪಾದನೆ ಮೇಲೆ ಮಿತಿ ಹೇರಿತ್ತು. ನ್ಯಾಯಾಲಯದ ಈ ಆದೇಶವು ಕಬ್ಬಿಣ ಅದಿರು ಗಣಿಗಾರಿಕೆ (Iron Ore Mining)ಗೆ ಮತ್ತಷ್ಟು ಇಂಬು ನೀಡಲಿದೆ.
ಈ ಮೊದಲ ಬಳ್ಳಾರಿ ಜಿಲ್ಲೆಯ ಗಣಿಗಾರಿಕೆಗಳಿಂದ ವರ್ಷಕ್ಕೆ 2.8 ಕೋಟಿ ಮೆಟ್ರಿಕ್ ಟನ್ ಉತ್ಪಾದನೆಗೆ ಅವಕಾಶವಿತ್ತು. ಸುಪ್ರೀಂ ಕೋರ್ಟ್ ಈಗ ಉತ್ಪಾದನೆಯ ಮಿತಿಯನ್ನು ವಾರ್ಷಿಕ 3.5 ಕೋಟಿ ಮೆಟ್ರಿಕ್ ಟನ್‌ಗೆ ಏರಿಸಲು ಅನುಮತಿ ನೀಡಿದೆ. ಅದೇ ರೀತಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಗಣಿಗಳಿಂದಲೂ ಅದಿರು ಉತ್ಪಾದನೆಯನ್ನು ಹೆಚ್ಚಿಸಬಹುದಾಗಿದೆ. ಈ ಎರಡೂ ಜಿಲ್ಲೆಗಳಲ್ಲಿ ಮೊದಲಿಗೆ ವಾರ್ಷಿಕವಾಗಿ 70 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಗೆ ಅವಕಾಶವಿತ್ತು. ಅದೀಗ ವಾರ್ಷಿಕ 1.5 ಕೋಟಿ ಮೆಟ್ರಿಕ್ ಟನ್ನಗಳಿಗೆ ಏರಿಕೆಯಾಗಿದೆ.
ಗಣಿಗಾರಿಕೆ ಚಟುವಟಿಕೆಗಳಿಗೆ ಇಂಬು ನೀಡುವಂಥ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್ ಅದೇ ವೇಳೆ, ಪರಿಸರ ಸಂರಕ್ಷಣೆಯ ಬಗ್ಗೆಯೂ ತಿಳಿಸಿದೆ. ”ಆರ್ಥಿಕ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಏಕಕಾಲಕ್ಕೆ ನಡೆದುಕೊಂಡು ಹೋಗಬೇಕು” ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಕರ್ನಾಟಕದ ಹಲವು ಜಿಲ್ಲೆಗಳ ಗಣಿಗಳಲ್ಲಿ ಉತ್ಪಾದನೆಯಾಗುವ ಅದಿರನ್ನು ವಿದೇಶಗಳಿಗೆ ರಫ್ತು ಮಾಡಲು ಈ ಹಿಂದೆ ನಿಷೇಧಿಸಲಾಗಿತ್ತು. ಸುಪ್ರೀಂ ಕೋರ್ಟ್ ಈ ವರ್ಷದ ಮೇ ತಿಂಗಳಲ್ಲಿ ಆದೇಶ ನೀಡಿ, ರಫ್ತು ಮೇಲಿನ ನಿಷೇಧವನ್ನು ತೆಗೆದುಹಾಕಿತ್ತು.
ಉತ್ಖನನ ಮಾಡಿದ ಗಣಿಗಳನ್ನು ನೇರವಾಗಿ ಮಾರಾಟ ಮಾಡಲು ಮಾಲೀಕರಿಗೆ ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿದೆ. ಈ ಮೊದಲು ಇ-ಹರಾಜು ಮೂಲಕವೇ ಮಾರಾಟಬೇಕಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಅಕ್ರಮ ಗಣಿಗಾರಿಕೆ ಮತ್ತು ಗಣಿಗಾರಿಕೆಯಿಂದ ಪರಿಸರ ಮೇಲಾಗುತ್ತಿರುವ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ 2011ರಲ್ಲಿ ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅದಿರು ಗಣಿಗಾರಿಕೆಗೆ ನಿಷೇಧ ಹೇರಿತ್ತು. ಜತೆಗೇ, ವಿದೇಶಗಳಿಗೆ ಅದಿರು ರಫ್ತು ಮಾಡದಂತೆ ನಿರ್ಬಂಧಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಉತ್ಪಾದನೆ ಹೆಚ್ಚಳಕ್ಕೆ ಅವಕಾಶ ನೀಡಿದ್ದರಿಂದ ರಾಜ್ಯದಲ್ಲೆ ಮತ್ತೆ ಗಣಿಗಾರಿಕೆ ಚಟುವಟಿಕೆಗಳು ಹೆಚ್ಚಾಗುವ ನಿರೀಕ್ಷೆ ಇದೆ.
ಇದನ್ನು ಓದಿ | ಅದಿರು ಉತ್ಪಾದನೆಗೆ ಮೂಗುದಾರ, ಏಕಸ್ವಾಮ್ಯಕ್ಕೆ ಕಡಿವಾಣ