ಬಳ್ಳಾರಿ: ಗಣಿ ಉದ್ಯಮಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ಕ್ಕೆ ಕಾರ್ಯಕರ್ತರು (Karnataka Election) ಸೇರ್ಪಡೆಯಾಗುವ ಸಿಂಧನೂರು ಸಮಾರಂಭಕ್ಕೆ ಆಗಮಿಸುವಂತೆ ಜನರಿಗೆ ಆಹ್ವಾನ ನೀಡಿ ಸಮಾಜ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು ಅವರು ಮಾಡಿದ್ದಾರೆಂಬ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಕಾಂಗ್ರೆಸ್ ಮಂಗಳವಾರ ಹಂಚಿಕೊಂಡಿದೆ.
ʻʻಜನಾರ್ದನ ರೆಡ್ಡಿಯವರ ಪಕ್ಷಕ್ಕೆ ಕಾರ್ಯಕರ್ತರನ್ನು ಆಹ್ವಾನಿಸುವ ಟ್ವೀಟ್ ಮಾಡಿ ಡಿಲೀಟ್ ಮಾಡಿದ ಶ್ರೀರಾಮುಲು ಅವರೇ, ತಮ್ಮ ಆಪ್ತರ ಮೇಲಿನ ಐಟಿ ದಾಳಿಗೂ, ಈ ಟ್ವೀಟ್‌ಗೂ ಸಂಬಂಧವಿರುವಂತಿದೆ ಅಲ್ಲವೇ? ಡಿಲೀಟ್ ಮಾಡಿದ್ದೇಕೆ? ದೆಹಲಿಯಿಂದ ನಿಮ್ಮ ಮೇಲೂ ಐಟಿ ದಾಳಿ ಮಾಡುವ ಬೆದರಿಕೆ ಬಂತೇ? ರಾಮುಲು ಪಕ್ಷ ಬಿಡುವರೇ?ʼʼ ಎಂದು ಕಾಂಗ್ರೆಸ್ ಗೇಲಿ ಮಾಡಿದೆ.
‘ಜನವರಿ 17ನೇ 2023ರಂದು ಗಾಲಿ ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮಕ್ಕೆ ಸಿಂಧನೂರಿನ ಮಹಾ ಜನತೆಯನ್ನು ಹೃದಯಪೂರ್ವಕವಾಗಿ ಆಹ್ವಾನಿಸುತ್ತೇನೆ’ ಎಂದು ಕಾಂಗ್ರೆಸ್ ಹಂಚಿಕೊಂಡಿರುವ ಟ್ವೀಟ್ ಸ್ಕ್ರೀನ್ ಶಾಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಟ್ವೀಟ್ ಅನ್ನು ನಂತರ ಡಿಲೀಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಶ್ರೀರಾಮುಲು- ರೆಡ್ಡಿ ಸಂಬಂಧ ಈಗ ಹೇಗಿದೆ?
ಜನಾರ್ದನ ರೆಡ್ಡಿ ಅವರು ಬಿಜೆಪಿ ಜತೆ ಮುನಿಸಿಕೊಂಡು ಹೊಸ ಪಕ್ಷ ಸ್ಥಾಪನೆ ಮಾಡುವ ಚಿಂತನೆ ನಡೆಸಲು ಆರಂಭಿಸಿದ ಕ್ಷಣದಿಂದಲೂ ಶ್ರೀರಾಮುಲು ಅವರಿಂದ ದೂರವಿದ್ದಾರೆ. ಒಂದು ಹಂತದಲ್ಲಿ ಜನಾರ್ದನ ರೆಡ್ಡಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಮತ್ತು ಯಾವುದಾದರೂ ಸ್ಥಾನಮಾನ ನೀಡುವ ವಿಚಾರದಲ್ಲಿ ಹಿರಿಯ ನಾಯಕರ ಜತೆ ಚರ್ಚೆ ನಡೆಸಿದ್ದ ರಾಮುಲು ಅದು ಸಾಧ್ಯವಿಲ್ಲ ಎಂಬ ಸೂಚನೆ ಸಿಕ್ಕಿದಾಗ ರೆಡ್ಡಿ ಅವರ ಮನವೊಲಿಕೆಗೆ ಮುಂದಾಗಿದ್ದರು. ಆದರೆ, ಯಾವಾಗ ರೆಡ್ಡಿ ಹಠ ಬಿಡದೆ ಇದ್ದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆಗೆ ಮುಂದಾದರೋ ಅಲ್ಲಿಂದ ಅಂತರವನ್ನು ಕಾಪಾಡಿಕೊಳ್ಳಲು ಶುರು ಮಾಡಿದರು.
ಶ್ರೀರಾಮುಲು ಮಾತ್ರವಲ್ಲ, ಜನಾರ್ದನ ರೆಡ್ಡಿ ಅವರ ಸೋದರರಾದ ಸೋಮಶೇಖರ ರೆಡ್ಡಿ, ಕರುಣಾಕರ ರೆಡ್ಡಿಯೂ ಜತೆ ನಿಂತಿಲ್ಲ. ಈ ನಡುವೆ ಶ್ರೀರಾಮುಲು ಅವರ ಆಪ್ತರ ಮೇಲೆ ಐಟಿ ದಾಳಿ ನಡೆದಿದೆ.
ಶ್ರೀರಾಮುಲು ಅವರು ಹೊರಗಿನಿಂದ ದೂರ ಇದ್ದರೂ ಆಂತರ್ಯದಲ್ಲಿ ಜನಾರ್ಧನ ರೆಡ್ಡಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಸಂಶಯ ಬಂದಿದೆಯೋ ಗೊತ್ತಿಲ್ಲ. ಇದೇ ಕಾರಣಕ್ಕಾಗಿ ದಾಳಿ ನಡೆದಿದೆ ಎಂಬ ವದಂತಿಗಳು ಹರಡುತ್ತಿವೆ. ತಮ್ಮ ಆಪ್ತರ ಮೇಲೆ ದಾಳಿ ಮಾಡಿದ್ದಕ್ಕೆ ಪ್ರತಿಯಾಗಿ ಶ್ರೀರಾಮುಲು ಸಿಟ್ಟಿನಿಂದ ಇಂಥಹುದೊಂದು ಟ್ವೀಟ್ ಮಾಡಿದರೇ? ತಾನು ಜನಾರ್ಧನ ರೆಡ್ಡಿ ಜತೆಗೆ ಸೇರಿಕೊಳ್ಳಬಲ್ಲೆ, ಇದರಿಂದ ಬಿಜೆಪಿ ದೊಡ್ಡ ಮಟ್ಟದ ಹೊಡೆತ ಬೀಳಲಿದೆ ಎಂಬ ಎಚ್ಚರಿಕೆ ಸಂದೇಶವನ್ನು ರವಾನಿಸಿದರೇ ಎಂಬ ಚರ್ಚೆಯೂ ಇದೆ. ಕಾಂಗ್ರೆಸ್ ಈ ಚರ್ಚೆಯನ್ನು ಸಾರ್ವತ್ರಿಕಗೊಳಿಸಿದೆ.
ಇದನ್ನೂ ಓದಿ | Janardhana Reddy | ಒಂಟಿಯಾದ ರೆಡ್ಡಿ ಬೆನ್ನಿಗೆ ನಿಂತು ಧೈರ್ಯ ಹೇಳಿದ ಪತ್ನಿ, ಮಗಳು: ನಾನಿದ್ದೀನಿ ಅಪ್ಪ ಅಂದ್ರು ಬ್ರಹ್ಮಣಿ