ರಾಯಚೂರು: ರಾಜ್ಯ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರ ನಡುವೆ ಅಪಸ್ವರಗಳ ಕುರಿತು ಆಗಿಂದಾಗ್ಗೆ ಮಾತುಗಳು ಕೇಳಿಬರುತ್ತಿದ್ದವು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಮುನಿಸು ಇದೆಯೇ ಎಂಬ ಪ್ರಶ್ನೆ ಈಗ ಮತ್ತೊಮ್ಮೆ ಉದ್ಭವವಾಗಿದೆ. ಮಸ್ಕಿ ಶಾಸಕ ಬಸವನಗೌಡ ತುರವಿಹಾಳ್ ಪುತ್ರಿಯ ಮದುವೆ ಸಂದರ್ಭದಲ್ಲಿ ಇಬ್ಬರೂ ಪ್ರತ್ಯೇಕವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಈ ಅನುಮಾನಕ್ಕೆ ಕಾರಣವಾಗಿದೆ.
ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಸೋಮವಾರ (ಜೂನ್ 27) ರಂದು ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಆಗಮಿಸಿದರು. ಬೆಂಗಳೂರಿನಿಂದ ಕೊಪ್ಪಳ ತಾಲೂಕಿನ ಬಸಾಪುರ ಬಳಿ ಇರುವ ಖಾಸಗಿ ಏರ್ಪೋರ್ಟ್‌ಗೆ ಆಗಮಿಸಿ ನಂತರ ಸಿಂಧನೂರಿಗೆ ರಸ್ತೆ ಮೂಲಕ ಸಾಗಿದರು.
ಇದನ್ನೂ ಓದಿ | ಮುಂದಿನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಚಲುವರಾಯಸ್ವಾಮಿ ; ಮಂಡ್ಯದಲ್ಲಿ ಅಭಿಮಾನಿಗಳ ಜೈಕಾರ
ಇಬ್ಬರೂ ಒಂದೇ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದ್ದರೂ ಪ್ರತ್ಯೇಕ ವಿಮಾನದಲ್ಲಿ ಸಂಚರಿಸಿದರು. ವಿಮಾನ ನಿಲ್ದಾಣಕ್ಕೆ ಸಿದ್ದರಾಮಯ್ಯ ಮೊದಲು ಬಂದು, ಮದುವೆ ಮುಗಿಸಿ ಅಲ್ಲಿಂದ ಹೊರಟರು. ಸಿದ್ದರಾಮಯ್ಯ ವಿಮಾನ ಟೇಕಾಫ್ ಆಗುವ ವೇಳೆಗೇ ಡಿ.ಕೆ. ಶಿವಕುಮಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಆಗಮಿಸಿತು.
ಈ ಕುರಿತು ನಂತರ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, “ನನ್ನ ಕಾರ್ಯಕ್ರಮ, ಅಜೆಂಡಾ ಬೇರೆ ಇರುತ್ತದೆ, ಅವರ ಕಾರ್ಯಕ್ರಮಗಳು ಬೇರೆ ಇರುತ್ತವೆ. ನಾವು ಬೇರೆಬೇರೆ ಕಡೆ ಓಡಾಡಬೇಕಾಗುತ್ತದೆ. ನಾವು ಎಲ್ಲಿ ಒಂದಾಗಬೇಕು, ಎಲ್ಲಿ ಕೆಲಸ ಮಾಡಬೇಕು ನಮಗೆ ತಿಳಿದಿದೆ. ದಿನವೂ ಒಟ್ಟಿಗೆ ಕೂರುತ್ತಿದ್ದೇವೆ, ಒಟ್ಟಿಗೆ ಊಟ ಮಾಡುತ್ತೇವೆʼʼ ಎಂದರು.
ಇದನ್ನೂ ಓದಿ | ಕೈ ಪಕ್ಷದಿಂದ ಒಂದು ಕಾಲು ಹೊರಗಿಟ್ಟ ಎಂ.ಆರ್. ಸೀತಾರಾಮ್: ಡಿಕೆಶಿ ವಿರುದ್ಧ ಆಕ್ರೋಶ