Site icon Vistara News

ತೇಪೆ ಹಾಕಿದ ಬಟ್ಟೆ ಅಸಲಿಯಾಗದು: ಪಠ್ಯ ತಿದ್ದೋಲೆಗೆ ನಿರಂಜನಾರಾಧ್ಯ ಆಕ್ರೋಶ

niranjanaradhya

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಾದ-ಪ್ರತಿವಾದ ಮುಂದುವರೆದಿದ್ದು, ಈ ಶೈಕ್ಷಣಿಕ ವರ್ಷವೆಲ್ಲವೂ ಪಠ್ಯ ಪುಸ್ತಕ ದೋಷಗಳನ್ನು ತಿದ್ದುವ ಕೆಲಸದಲ್ಲಿಯೇ ಮುಗಿದು ಹೋಗಲಿದೆ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ತೇಪೆ ಹಾಕಿದ ಬಟ್ಟೆ ಎಂದಿಗೂ ಅಸಲಿಯಾಗದು ಎಂದು ಕುಟುಕಿದ್ದಾರೆ.

ಇದನ್ನೂ ಓದಿ | ಪಠ್ಯಪುಸ್ತಕ ವಿವಾದ: ಲಿಂಗಾಯತ, ಒಕ್ಕಲಿಗ ಆಯಿತು, ಈಗ ಕುರುಬ ಸಮುದಾಯದಿಂದಲೂ ಆಕ್ಷೇಪ

ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾ ಪೋಷಕರೂ ಆಗಿರುವ ನಿರಂಜನಾರಾಧ್ಯ ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸರ್ಕಾರವು ಜೂನ್‌ 23ರಂದು ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿದೆ. ಆದರೆ ನಿಯಮಾನುಸಾರ ಒಪ್ಪಿತ ಪಠ್ಯಕ್ರಮ ಚೌಕಟ್ಟಿನಲ್ಲಿ ನಡೆಯದ ಅಪಾರದರ್ಶಕ ಹಾಗೂ ಅಪ್ರಜಾಸತ್ತಾತ್ತ್ಮಕ, ನಿಯಮ ಬಾಹಿರ ಪ್ರಕ್ರಿಯೆಯನ್ನು ತಿದ್ದೋಲೆ ಹೊರಡಿಸುವ ಮೂಲಕ ಮತ್ತೊಮ್ಮೆ ಸಮರ್ಥಿಸಿಕೊಳ್ಳುವ ಜನವಿರೋಧಿ ನಡೆ ಪ್ರದರ್ಶಿಸಿದೆ.

ಇದು ಮಕ್ಕಳ ಕಲಿಕೆಯನ್ನು ಮತ್ತಷ್ಟು ಗೊಂದಲಕ್ಕೆ ದೂಡಲಿದೆ. ಶಾಲಾ ಹಂತದಲ್ಲಿ ಶಿಕ್ಷಕರು ಮಕ್ಕಳಿಗೆ ಕಲಿಸುವ ಬದಲು, ತಿದ್ದೋಲೆ ಆದೇಶದ ಅನ್ವಯ ಪುಸ್ತಕಗಳಲ್ಲಿರುವ ದೋಷಗಳನ್ನು ತಿದ್ದುವ ಕೆಲಸದಲ್ಲಿಯೇ ಈ ಶೈಕ್ಷಣಿಕ ವರ್ಷ ಮುಗಿದು ಹೋಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ ಎಂದು ದೂರಿದ್ದಾರೆ.

ಸರ್ಕಾರಿ ಯಂತ್ರ ದುರ್ಬಳಕೆ

ಪಠ್ಯಪುಸ್ತಕ ತಿದ್ದುಪಡಿಯು, ವಿಷವುಣಿಸಿದ ವ್ಯಕ್ತಿ ಸಾಯುವ ಮುನ್ನ ನೀರು ಕೊಡಲು ಕರುಣಿಸಿದಂತಿದೆ. ಈ ಮೂಲಕ ವಿಷವುಣಿಸಿದ ಘೋರ ಅಪರಾಧವನ್ನು ಮುಚ್ಚಿ ಹಾಕಿ, ಅಪರಾಧವೇ ನಡೆದಿಲ್ಲವೇನೋ ಎಂಬಂತೆ ಬಿಂಬಿಸಲು ಹೊರಟಿರುವುದು, ಇಡೀ ಪ್ರಕ್ರಿಯೆಯ ಹಿಂದಿರುವ ಕುತಂತ್ರ ಹಾಗೂ ಹುನ್ನಾರಗಳನ್ನು ಬೆತ್ತಲೆಗೊಳಿಸಿದೆ. ಪಠ್ಯ ಪರಿಷ್ಕರಣೆ ಹೆಸರಲ್ಲಿ ಮಕ್ಕಳಿಗೆ ವಿಷಪ್ರಾಶನ ಮಾಡುವ ಈ ಕೆಲಸದಲ್ಲಿ ಸರ್ಕಾರವನ್ನು ಬಾಹ್ಯವಾಗಿ ನಿಯಂತ್ರಿಸುತ್ತಿರುವ ಸಂವಿಧಾನಕ್ಕೂ ಮೀರಿದ ಶಕ್ತಿಗಳು ಸರ್ಕಾರಿ ಯಂತ್ರವನ್ನು ದುರ್ಬಳಕೆ ಮಾಡಿಕೊಂಡಿದ್ದಲ್ಲದೆ, ಈಗ ಸರ್ಕಾರದ ಮೂಲಕವೇ ತಿದ್ದೋಲೆ ಕೊಡಿಸಲು ಹೊರಟಿರುವುದು ಸಂವಿಧಾನವನ್ನು ಅಣಕಿಸುವಂತಿದೆ ಎಂದಿದ್ದಾರೆ.

ಪರಿಷ್ಕರಣೆಯ ಮೂಲ ಚಿಂತನೆಯೇ ದುರುದ್ದೇಶಪೂರಿತ ಹಾಗು ಅಪ್ರಜಾಸತ್ತಾತ್ಮಕ ಎಂದಾದರೆ, ಅದನ್ನು ಆಧರಿಸಿ ಪರಿಷ್ಕರಿಸಿರುವ ಎಲ್ಲ ಪ್ರಕ್ರಿಯೆಗಳೂ ಅಕ್ರಮವೆಂದಲ್ಲವೇ?. ತಿದ್ದೋಲೆ ಮೂಲಕ ಪದ, ವಾಕ್ಯ, ಪ್ಯಾರಾ, ಪೋಟೋಗಳನ್ನು ಸರಿಪಡಿಸಿದರೆ ಅದು ಸಕ್ರಮವಾಗುವುದೇ? ತೇಪೆ ಹಾಕಿದ ಬಟ್ಟೆ ಎಂದಿಗೂ ಅಸಲಿಯಾಗಲಾರದು ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಸರ್ಕಾರವು ತಿದ್ದೋಲೆ ಆದೇಶವನ್ನು ಹೊರಡಿಸುವ ಮೂಲಕ ಪಠ್ಯ ಪರಿಷ್ಕರಣೆ ಪ್ರಕ್ರಿಯೆಲ್ಲಿ ಆಗಿರುವ ಲೋಪಗಳನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ. ತಪ್ಪಾಗಿರುವುದನ್ನು ಸರ್ಕಾರ ಒಪ್ಪಿದ ಮೇಲೆ , ತಿದ್ದೋಲೆ ಮೂಲಕ ತಿಪ್ಪೆ ಸಾರಿಸುವ ನ್ಯಾಯವನ್ನು ಕೈಬಿಟ್ಟು ಈ ಪ್ರಕ್ರಿಯೆಯನ್ನು ಪೂರ್ಣವಾಗಿ ಸ್ಥಗಿತಗೊಳಿಸಬೇಕು. ಸಾಧಕ ಬಾಧಕಗಳನ್ನು ಅಧ್ಯಯನ ಮಾಡಲು ಒಂದು ಸ್ವತಂತ್ರ ತಜ್ಞರ ಸಮಿತಿ ಅಥವಾ ಸದನ ಸಮಿತಿಯನ್ನು ರಚಿಸಬೇಕು. ಮುಖ್ಯ ಮಂತ್ರಿಗಳು ಈ ಎಲ್ಲ ಕುತಂತ್ರಗಳನ್ನು ಅರಿತು, ಸಂವಿಧಾನ ವಿರೋಧಿಗಳ ಕೈಗೊಂಬೆಯಾಗದೆ ಇದಕ್ಕೆಲ್ಲ ಮೂಲ ಕಾರಣರಾದ ಶಿಕ್ಷಣ ಸಚಿವರನ್ನು ವಜಾಗೊಳಿಸುವಂತೆ ನಿರಂಜನಾರಾಧ್ಯ ಒತ್ತಾಯಿಸಿದ್ದಾರೆ.

ಇದನ್ನೂ ಓದಿ | ಪಠ್ಯಪುಸ್ತಕ ವಿಚಾರದಲ್ಲಿ ಆತ್ಮರಕ್ಷಣೆಗೆ ʼಒಕ್ಕಲಿಗʼ ಕಾರ್ಡ್‌ ಬಳಸಿದ ಬೊಮ್ಮಾಯಿ

Exit mobile version