ಮಂಗಳೂರು/ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್ (Shivamogga trial blast) ಮತ್ತು ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್ (Mangalore blast) ಪ್ರಕರಣಗಳಲ್ಲಿ ಭಾಗಿಯಾಗಿದ್ದ ಯುವಕರನ್ನು ಬಳಸಿಕೊಂಡು ರೊಬೋಟ್‌ಗಳ ಮೂಲಕ ಉಗ್ರ ಕೃತ್ಯ ನಡೆಸಲು ಐಸಿಸ್ ಸಂಚು (ISIS Terror) ನಡೆಸಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ದಳ (National Investigation Agency) ಬಹಿರಂಗಪಡಿಸಿದೆ.
ಶಿವಮೊಗ್ಗ ತುಂಗಾ ತೀರದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್ ಮತ್ತು ಮಂಗಳೂರು ಬ್ಲಾಸ್ಟ್‌ನಲ್ಲಿ ಭಾಗಿಯಾಗಿದ್ದ ಒಂಬತ್ತು ಮಂದಿ ಶಂಕಿತ ಉಗ್ರರ ವಿರುದ್ಧ ಎನ್‌ಐಎ (NIA) ಸಲ್ಲಿಸಿದ ಪೂರಕ ಚಾರ್ಜ್‌ಶೀಟ್‌ನಲ್ಲಿ ಈ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಈ ಮಾಹಿತಿಯನ್ನು ಶಂಕಿತ ಉಗ್ರರು ವಿಚಾರಣೆಯ ಸಂದರ್ಭದಲ್ಲಿ ಬಾಯಿ ಬಿಟ್ಟಿದ್ದಾರೆ ಎಂದು ಎನ್‌ಐಎ ತಿಳಿಸಿದೆ.
ಮಂಗಳೂರಿನಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಪ್ರಕರಣದ ಪ್ರಧಾನ ರೂವಾರಿ ಮೊಹಮ್ಮದ್ ಶಾರಿಕ್ (25), ಆತನ ಜತೆ ಸಹವರ್ತಿಗಳಾಗಿ ತುಂಗಾ ನದಿ ತೀರದ ಟ್ರಯಲ್ ಬ್ಲಾಸ್ಟ್ ಮತ್ತು ಗೋಡೆ ಬರಹ ಪ್ರಕರಣಗಳಲ್ಲಿ ಭಾಗಿಯಾದ ಮಾಜ್ ಮುನೀರ್ ಅಹ್ಮದ್ (23), ಸೈಯದ್ ಯಾಸಿನ್ (22), ರೀಶಾನ್ ತಾಜುದ್ದೀನ್ ಶೇಖ್ (22), ಹುಜೈರ್ ಫರ್ಹಾನ್ ಬೇಗ್ (22), ಮಜಿನ್ ಅಬ್ದುಲ್ ರಹಮಾನ್ (22), ನದೀಮ್ ಅಹ್ಮದ್, ಕೆ ಎ (22), ಜಬೀವುಲ್ಲಾ (32) ಮತ್ತು ನದೀಮ್ ಫೈಝಲ್ ಎನ್ (27) ಎಂಬವರ ಮೇಲೆ ಸಲ್ಲಿಸಲಾದ ಪೂರಕ ಚಾರ್ಜ್‌ಶೀಟ್‌ನಲ್ಲಿ ಈ ಸ್ಫೋಟಕ ಮಾಹಿತಿಗಳಿವೆ. ಯುಎಪಿಎ, ಐಪಿಸಿ, ಕೆಪಿ ಆಕ್ಟ್ ಅಡಿಯಲ್ಲಿ ಎನ್ಐಎ ಚಾರ್ಜ್ ಶೀಟ್ ಸಿದ್ಧಪಡಿಸಿದೆ.
ಬಂಧಿತ ಶಂಕಿತ ಉಗ್ರರಲ್ಲಿ ಹೆಚ್ಚಿನವರು ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದಾರೆ. ಇವರನ್ನು ವಿಚಾರಣೆಗ ಒಳಪಡಿಸುವ ಸಂದರ್ಭದಲ್ಲಿ ತಮ್ಮ ಮೇಲೆ ಯಾರ್ಯಾರು ಪ್ರಭಾವ ಬೀರುತ್ತಿದ್ದಾರೆ ಮತ್ತು ಏನೇನು ಟಾಸ್ಕ್ ನೀಡಿದ್ದಾರೆ ಎಂಬ ವಿಷಯವನ್ನು ಬಾಯಿ ಬಿಟ್ಟಿದ್ದಾರೆ.
ರೊಬೋಟಿಕ್ ಕೋರ್ಸ್ ಸೇರುವಂತೆ ಸಲಹೆ
ಬಂಧಿತರನ್ನು ರೊಬೋಟಿಕ್ ಕೋರ್ಸ್ ಓದುವಂತೆ ಐಸೀಸ್ ಹ್ಯಾಂಡ್ಲರ್‌ಗಳು ಸೂಚನೆ ನೀಡಿದ್ದರು. ಈ ಮೂಲಕ ಭವಿಷ್ಯದ ಭಯೋತ್ಪಾದಕ ಚಟುವಟಿಕೆಗಳಿಗೆ ತಯಾರಾಗುವಂತೆ ತಿಳಿಸಿದ್ದರು ಎನ್ನಲಾಗಿದೆ. ಬಂಧಿತರಲ್ಲಿ ಹೆಚ್ಚಿನವರು ವಿದೇಶದಲ್ಲಿರುವ ಐಸಿಸ್ ಭಯೋತ್ಪಾದಕರೊಂದಿಗೆ ನೇರ ಸಂಪರ್ಕದಲ್ಲಿದ್ದರು ಎನ್ನುವುದು ಎನ್‌ಐಎ ಪಡೆದುಕೊಂಡಿರುವ ಮಾಹಿತಿ.
ಬಂಧಿತರಲ್ಲಿ ಮಾಜ್ ಮುನೀರ್ ಅಹ್ಮದ್, ಸೈಯದ್ ಯಾಸೀನ್, ರಿಶಾನ್ ತಾಜುದ್ದೀನ್ ಶೇಕ್, ಮಜೀನ್ ಅಬ್ದುಲ್ ರೆಹಮಾನ್ ಹಾಗೂ ನದೀಂ ಅಹ್ಮದ್ ತಾಂತ್ರಿಕ ವಿದ್ಯಾಭ್ಯಾಸ ಮಾಡಿದ್ದಾರೆ. ಅದರಲ್ಲೂ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದವರು. ಈ ಐವರಿಗೂ ರೋಬೋಟಿಕ್ ಕೋರ್ಸ್ ವ್ಯಾಸಂಗ ಮಾಡಲು ಐಸಿಸ್ ಹ್ಯಾಂಡ್ಲರ್‌ಗಳು ಟಾಸ್ಕ್ ನೀಡಿದ್ದರು.
ಭವಿಷ್ಯದಲ್ಲಿ ಭಾರತದಲ್ಲಿ ಉಗ್ರ ಕೃತ್ಯ ಎಸಗಲು ತಾಂತ್ರಿಕ ನೈಪುಣ್ಯ ಮತ್ತು ಹೊಸ ಕೌಶಲ್ಯ ಬೆಳೆಸಿಕೊಳ್ಳುವಂತೆ ಅವರನ್ನು ಪ್ರೇರೇಪಿಸಲಾಗಿತ್ತು.
ಇದನ್ನೂ ಓದಿ: PFI terrorist: ಸುಳ್ಳು ಹೆಸರಿನಲ್ಲಿ ಬಳ್ಳಾರಿಯಲ್ಲಿ ತಲೆಮರೆಸಿಕೊಂಡಿದ್ದ ಪಿಎಫ್ಐಯ ಪ್ರಮುಖ ಶಸ್ತ್ರಾಸ್ತ್ರ ತರಬೇತುದಾರ
ಈ ಶಂಕಿತರು ವಿದೇಶಿ ಮೂಲದ ಐಸಿಸ್ ಆಪರೇಟರ್ ಗಳ ಅಣತಿಯಂತೆ ಕಾರ್ಯ ಮಾಡುತ್ತಿದ್ದು, ಒಂದೊಮ್ಮೆ ಬಂಧನವಾಗದೆ ಇದ್ದರೆ ಅವರು ರೊಬೊಟಿಕ್ಸ್ ಕೂಡಾ ಕಲಿತು ತಮ್ಮ ಉಗ್ರ ಪ್ರಾವೀಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಅಪಾಯವಿತ್ತು.
ಐಸಿಸ್ ಸೂಚನೆಯಂತೆ ಉಗ್ರ ಚಟುವಟಿಕೆ ಹಾಗೂ ವಿಧ್ವಂಸಕ ಕೃತ್ಯ ಎಸಗಲು ಸಂಚು ನಡೆಸುತ್ತಿದ್ದ ಇವರು ದೇಶದ ಅಂತರಿಕ ಭದ್ರತೆ, ಘನತೆ, ಸಾರ್ವಭೌಮತ್ವಕ್ಕೆ ದಕ್ಕೆ ತರಲು ಪ್ಲ್ಯಾನ್ ಮಾಡಿದ್ದರು.