Site icon Vistara News

ISKCON Temple : ಬೆಂಗಳೂರಿನಲ್ಲಿದೆ ಇಸ್ಕಾನ್‌ ಎಂಬ ಅದ್ಭುತ!

ISKCON Temple

ಬೆಂಗಳೂರಿನ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದು ಇಸ್ಕಾನ್‌(ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್) ದೇಗುಲ(ISKCON Temple). ಈ ದೇಗುಲವನ್ನು ಮಾಜಿ ರಾಷ್ಟ್ರಪತಿಗಳಾದ ಶಂಕರ್‌ ದಯಾಳ್‌ ಶರ್ಮಾ ಅವರು 1997ರಲ್ಲಿ ಲೋಕಾರ್ಪಣೆ ಮಾಡಿದರು. ಬೆಂಗಳೂರಿನ ರಾಜಾಜಿನಗರ ಬಳಿಯ ಬೆಟ್ಟವೊಂದರ ಮೇಲೆ ಈ ದೇಗುಲವನ್ನು ಗ್ರಾನೈಟ್, ಮಾರ್ಬಲ್ ಮತ್ತು ಕೊರಿಯನ್ ಗಾಜಿನಿಂದ ನಿರ್ಮಿಸಲಾಯಿತು. ಈ ದೇವಾಲಯದಲ್ಲಿ ವಾರ್ಷಿಕವಾಗಿ ರಥೋತ್ಸವವನ್ನು ನಡೆಸಲಾಗುತ್ತದೆ. ಆ ರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುತ್ತಾರೆ.

ಅಂದ ಹಾಗೆ ಈ ಇಸ್ಕಾನ್‌ ದೇವಾಲಯದಲ್ಲಿ ರಾಧಾ ಕೃಷ್ಣ ದೇವರನ್ನು ಮುಖ್ಯ ದೇವರನ್ನಾಗಿ ಪೂಜಿಸಲಾಗುತ್ತದೆ. ಅದಲ್ಲದೆ ಇಲ್ಲಿ ಬಲರಾಮ, ಚೈತನ್ಯ ಮಹಾಪ್ರಭು, ನಿತ್ಯಾನಂದ ಪ್ರಭು, ಪ್ರಹ್ಲಾದ ನರಸಿಂಹ, ಶ್ರೀಲ ಮಹಾಪ್ರಭು ಮತ್ತು ಶ್ರೀನಿವಾಸ ಗೋವಿಂದ ದೇವತೆಗಳನ್ನೂ ಪೂಜಿಸಲಾಗುತ್ತದೆ.


ಇಸ್ಕಾನ್‌ ಆಧ್ಯಾತ್ಮದತ್ತ ಒಲವಿರುವವರಿಗೆ ಹಾಗೂ ಭಕ್ತರಿಗೆ ಹಲವಾರು ಆಧ್ಯಾತ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಗಾಗ ನಡೆಸುತ್ತಿರುತ್ತದೆ. ದೇಶಾದ್ಯಂತ ಇರುವ 1350 ಶಾಲೆಗಳ 16 ಲಕ್ಷ ವಿದ್ಯಾರ್ಥಿಗಳಿಗೆ ಅಕ್ಷಯ ಪಾತ್ರಾ ಯೋಜನೆ ಮೂಲಕ ಪೌಷ್ಟಿಕ ಆಹಾರವನ್ನು ಈ ಸಂಸ್ಥೆ ನೀಡುತ್ತಿದೆ. ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಸಂಸ್ಥೆಯ ವತಿಯಿಂದ ಮಾಡಲಾಗುವ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಲಾಗಿದೆ.

ಪ್ರತಿ ಧಾರ್ಮಿಕ ವಿಶೇಷ ದಿನಗಳಂದು ಇಲ್ಲಿ ಪೂಜಾ ವಿಧಿಗಳು ಆಕರ್ಷಕವಾಗಿ ಮತ್ತು ಭಕ್ತಿಪೂರ್ವಕವಾಗಿ ನಡೆಯುತ್ತವೆ. ದೇವಸ್ಥಾನದ ಆವರಣದೊಳಗೆ ಇರುವ ಅಪರೂಪದ ವಸ್ತುಗಳ ಶಾಪಿಂಗ್‌ ಇಲ್ಲಿಯ ಮತ್ತೊಂದು ಆಕರ್ಷಣೆ.

ಇಸ್ಕಾನ್‌ ಬಳಿ ಭೇಟಿ ನೀಡಬಹುದಾದ ಇತರ ಸ್ಥಳಗಳು

ಬೆಂಗಳೂರಿನಲ್ಲಿ ಇಸ್ಕಾನ್‌ ಸನಿಹದಲ್ಲಿ ಹಲವಾರು ಪ್ರವಾಸಿ ತಾಣಗಳು ಇವೆ. ಇಲ್ಲಿಂದ ಫ್ರೀಡಂ ಪಾರ್ಕ್‌ 7 ಕಿ.ಮೀ ದೂರದಲ್ಲಿದೆ. ಹಾಗೆಯೇ ಬೆಂಗಳೂರು ಅರಮನೆ 8 ಕಿ.ಮೀ ದೂರದಲ್ಲಿ, ಲುಂಬಿನಿ ಗಾರ್ಡನ್ಸ್‌ 11 ಕಿಲೋ ಮೀಟರ್‌ ದೂರದಲ್ಲಿ ಮತ್ತು ಲಾಲ್‌ಬಾಗ್‌ 12 ಕಿಲೋಮೀಟರ್‌ ದೂರದಲ್ಲಿದೆ.

ದೇವಾಲಯದ ಭೇಟಿಯ ಸಮಯ

ಈ ದೇವಸ್ಥಾನಕ್ಕೆ ವಾರದ ದಿನಗಳಲ್ಲಿ ಬೆಳಗ್ಗೆ 7.15ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಸಂಜೆ 4.15ರಿಂದ ರಾತ್ರಿ 8.20ರವರೆಗೆ ಭೇಟಿ ನೀಡಬಹುದು.
ವಾರಾಂತ್ಯಗಳಲ್ಲಿ ದೇವಸ್ಥಾನ ಬೆಳಗ್ಗೆ 7.15ರಿಂದ ರಾತ್ರಿ 8.30ರವರೆಗೆ ತೆರೆದಿರುತ್ತದೆ.

ಇಸ್ಕಾನ್‌ ತಲುಪುವುದು ಹೇಗೆ?

ಇಸ್ಕಾನ್‌ ದೇವಸ್ಥಾನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 33 ಕಿ.ಮೀ. ದೂರದಲ್ಲಿದೆ. ಹಾಗೆಯೇ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಮತ್ತು ಬೆಂಗಳೂರು ನಗರ ರೈಲು ನಿಲ್ದಾಣದಿಂದ 7 ಕಿಲೋಮೀಟರ್‌ ದೂರದಲ್ಲಿದೆ. ಇಲ್ಲಿಂದ ಮೆಟ್ರೋ ರೈಲು ಹತ್ತಿ ರಾಜಾಜಿನಗರದಲ್ಲಿ ಇಳಿದು, ಅಲ್ಲಿಂದ ಕೇವಲ 700 ಮೀಟರ್‌ ದೂರದಲ್ಲಿರುವ ದೇಗುಲಕ್ಕೆ ಕಾಲ್ನಡಿಗೆಯಲ್ಲಿ ತಲುಪಬಹುದು.

ಇಸ್ಕಾನ್ ಬಳಿ ಉಳಿದುಕೊಳ್ಳಲು ಸ್ಥಳಗಳಿವೆಯೆ?

ಇಸ್ಕಾನ್ ದೇವಾಲಯದ ಆಡಳಿತವು ಯಾತ್ರಿ ನಿವಾಸ್ ಹೆಸರಿನ 70 ಕೊಠಡಿಗಳ ಅತಿಥಿ ಗೃಹವನ್ನು ನಡೆಸುತ್ತಿದೆ. ಅದರಲ್ಲಿ ನೀವು ವಾಸ ಹೂಡಬಹುದು. ಅದಲ್ಲದಿದ್ದರೆ ರಾಜಾಜಿನಗರ ಪ್ರದೇಶದಲ್ಲಿ ಹಲವಾರು ಐಷಾರಾಮಿ ಹೋಟೆಲ್‌ಗಳಿದ್ದು, ಅಲ್ಲಿಯೂ ನೀವು ಉಳಿದುಕೊಳ್ಳಬಹುದು.

ಈ ಸಂಗತಿ ಗಮನದಲ್ಲಿರಲಿ…

– ಇಸ್ಕಾನ್‌ ದೇಗುಲದ ಒಳಗೆ ಛಾಯಾಗ್ರಹಣವನ್ನು ನಿಷೇಧಿಸಲಾಗಿದೆ.
– ದೇವಸ್ಥಾನಕ್ಕೆ ಹೋಗುವಾಗ ಸಾಂಪ್ರದಾಯಿಕ ಉಡುಗೆ ತೊಡುವುದು ಒಳ್ಳೆಯದು.
– ಈ ದೇಗುಲದಲ್ಲಿ ಲಾಕರ್‌ ಕೊಠಡಿಯಿದ್ದು, ನಿಮ್ಮ ಅಮೂಲ್ಯ ವಸ್ತುಗಳನ್ನು ಅಲ್ಲಿಟ್ಟು, ದೇವರ ದರ್ಶನ ಮಾಡಬಹುದು.

ಅಧಿಕೃತ ವೆಬ್‌ಸೈಟ್: https://www.iskconbangalore.org/

Exit mobile version