ಬೆಂಗಳೂರು: ಚಂದ್ರನ ದಕ್ಷಿಣ ಧ್ರುವಕ್ಕೆ ನೌಕೆಯನ್ನು ಇಳಿಸುವ ದಿಸೆಯಲ್ಲಿ ಇಸ್ರೋ ಕೈಗೊಂಡ ಚಂದ್ರಯಾನ-3 ಮಿಷನ್ (Chandrayaan 3) ಯಶಸ್ವಿಯಾಗಲು ಕೆಲವೇ ದಿನಗಳು ಬಾಕಿ ಇವೆ. ಆಗಸ್ಟ್ 23 ಅಥವಾ 24ರಂದು ಚಂದ್ರಯಾನ-3 ನೌಕೆಯು ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆದರೆ, ಇಸ್ರೋ (ISRO) ಇತಿಹಾಸ ಸೃಷ್ಟಿಸಲಿದೆ. ಇಂತಹ ಕುತೂಹಲ, ನಿರೀಕ್ಷೆಯ ಮಧ್ಯೆಯೇ ದೇಶದ ಮೊದಲ ಸೂರ್ಯಯಾನ (Aditya L1 Mission) ಕೈಗೊಳ್ಳಲು ಇಸ್ರೋ ಸಜ್ಜಾಗಿದೆ.
ಹೌದು, ಸೂರ್ಯನ ಕುರಿತ ಅಧ್ಯಯನಕ್ಕಾಗಿ ಇಸ್ರೋ ಆದಿತ್ಯ ಎಲ್ 1 ಮಿಷನ್ ಸಿದ್ಧಪಡಿಸಿದೆ. ಬೆಂಗಳೂರಿನ ಯು.ಆರ್.ರಾವ್ ಸ್ಯಾಟಲೈಟ್ ಸೆಂಟರ್‌ನಲ್ಲಿ (URSC) ಉಪಗ್ರಹವನ್ನು ಅಭಿವೃದ್ಧಿಪಡಿಸಲಾಗಿದೆ. ಸದ್ಯ ಇದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಇರಿಸಲಾಗಿದೆ. ಪಿಎಸ್‌ಎಲ್‌ವಿ-ಸಿ 57 (PSLV-C57 ) ರಾಕೆಟ್ ಇದನ್ನು ಹೊತ್ತುಕೊಂಡು ಸಾಗಲಿದೆ. ಅಲ್ಲದೆ, ಸೂರ್ಯಯಾನ ಮಿಷನ್‌ನ ಕೆಲವು ಫೋಟೊಗಳನ್ನು ಇಸ್ರೋ ಬಿಡುಗಡೆ ಮಾಡಿದೆ.
ಸೂರ್ಯಯಾನ ಮಿಷನ್ ಫೋಟೊಗಳು
ಏನಿದು ಆದಿತ್ಯ ಎಲ್ 1 ಮಿಷನ್?
ಆದಿತ್ಯ ಎಲ್ 1 ಮಿಷನ್ ಸೂರ್ಯನ ಕುರಿತು ಅಧ್ಯಯನ ಮಾಡಲಿರುವ ದೇಶದ ಮೊದಲ ಬಾಹ್ಯಾಕಾಶ ಆಧಾರಿತ ಮಿಷನ್ ಆಗಿದೆ. ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದಲ್ಲಿ ಇದು ಅಧ್ಯಯನ ಮಾಡಲಿದೆ. ಗ್ರಹಣ ಸೇರಿ ಯಾವುದೇ ಸಂದರ್ಭದಲ್ಲಿಯೂ ಮಿಷನ್ ಸೂರ್ಯನ ಕುರಿತು ಅಧ್ಯಯನ ನಡೆಸಲಿದೆ ಎಂಬುದಾಗಿ ಇಸ್ರೋ ಮಾಹಿತಿ ನೀಡಿದೆ.
ಇದನ್ನೂ ಓದಿ: Russia Moon Mission: ಭಾರತ ಬೆನ್ನಲ್ಲೇ ರಷ್ಯಾದಿಂದಲೂ ಚಂದ್ರಯಾನ; ಮೊದಲು ತಲುಪುವವರು ಯಾರು?
ಏನು ಅಧ್ಯಯನ? ಉಡಾವಣೆ ಯಾವಾಗ?
ಸೂರ್ಯನ ಮೇಲ್ಮೈ ವಾತಾವರಣ, ಸೂರ್ಯನ ಪ್ರಭಾವಲಯದ ಭೌತವಿಜ್ಞಾನ (Physics Of Solar Corona), ಉಷ್ಣವಲಯದ ಪ್ರಭಾವ ಸೇರಿ ಹಲವು ಅಂಶಗಳ ಕುರಿತು ಉಪಗ್ರಹವು ಅಧ್ಯಯನ ನಡೆಸಲಿದೆ. ಆದರೆ, ಸೂರ್ಯಯಾನ ಮಿಷನ್ ಉಡಾವಣೆ ದಿನಾಂಕದ ಕುರಿತು ಇಸ್ರೋ ಇದುವರೆಗೆ ಮಾಹಿತಿ ನೀಡಿಲ್ಲ. ಸೆಪ್ಟೆಂಬರ್ ಮೊದಲ ವಾರದಲ್ಲಿ ಉಡಾವಣೆ ಮಾಡಬಹುದು ಎಂದು ಇಸ್ರೋ ಮೂಲಗಳು ತಿಳಿಸಿವೆ.