ಬೆಂಗಳೂರು: ಏಳನೇ ವೇತನ ಆಯೋಗದ ಶಿಫಾರಸು ಜಾರಿಗಾಗಿ ರಾಜ್ಯ ಸರ್ಕಾರಿ ನೌಕರರು ಮುಷ್ಕರ (Govt Employees Strike) ನಡೆಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ಅವರ ಜತೆ ವಿಸ್ತಾರ ನ್ಯೂಸ್ ನಡೆಸಿರುವ ವಿಶೇಷ ಸಂದರ್ಶನ ಇಲ್ಲಿದೆ.
ವಿಸ್ತಾರ: ಇಡೀ ರಾಜ್ಯದ ಆಡಳಿತ ಯಂತ್ರ ಸ್ತಬ್ಧ ಮಾಡಲು ಹೊರಟಿದ್ದೀರಿ….ಏನು ನಿಮ್ಮ ಬೇಡಿಕೆ?
ಸಿ ಎಸ್ ಷಡಾಕ್ಷರಿ: ನಮ್ಮದು ನ್ಯಾಯಯುತ ಬೇಡಿಕೆ. 10 ಲಕ್ಷ ಸರ್ಕಾರಿ ನೌಕರರು ಮತ್ತು 5 ಲಕ್ಷ ನಿವೃತ್ತರ ಬದುಕಿನ ಪ್ರಶ್ನೆ ಇದು. ನಮ್ಮ ಮುಖ್ಯ ಬೇಡಿಕೆ ಎರಡೇ ಎರಡು. ಒಂದು- 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಬೇಕು. ಇನ್ನೊಂದು- ಎನ್ ಪಿ ಎಸ್ ಪದ್ಧತಿ ರದ್ದುಪಡಿಸಿ ಹಳೇ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕು.
ಹಿಂದಿನ ಆಯೋಗದ ಶಿಫಾರಸು ಅವಧಿಯು 2022ರ ಜೂನ್ 1ರಂದೇ ಮುಗಿದಿದೆ. 9 ತಿಂಗಳ ಹಿಂದೆಯೇ ವೇತನ ಪರಿಷ್ಕರಣೆ ಆಗಬೇಕಿತ್ತು. ಇಷ್ಟು ದಿನ ನಾವು ತಾಳ್ಮೆಯಿಂದ ಕಾದಿದ್ದೇವೆ. ಈಗ ಅನಿವಾರ್ಯವಾಗಿ ಮುಷ್ಕರದ ಹಾದಿ ಹಿಡಿದಿದ್ದೇವೆ. ಸರ್ಕಾರ ವೇತನ ಆಯೋಗ ರಚಿಸಿ ಮೂರು ತಿಂಗಳು ಕಳೆದಿದೆ. ಇನ್ನೂ ಸರ್ಕಾರ ಅಂತಿಮ ನಿರ್ಣಯಕ್ಕೆ ಬಂದಿಲ್ಲ. ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪ ಮಾಡದಿರುವುದು ನಮಗೆ ಬೇಸರ ತರಿಸಿದೆ. ನಾವು ಸರ್ಕಾರವನ್ನು ನಂಬಿಕೊಂಡಿದ್ದೇವು. ಆದರೆ ಸರ್ಕಾರ ನಮಗೆ ಕೈಕೊಟ್ಟಿದೆ. ಹಾಗಾಗಿ ಮುಷ್ಕರ ಅನಿವಾರ್ಯ
ವಿಸ್ತಾರ: ನೀವು ಈಗ ಚುನಾವಣೆಯ ಹೊಸ್ತಿಲಲ್ಲಿ ಹೋರಾಟಕ್ಕೆ ಇಳಿದಿದ್ದು ಸರಿಯೇ? ಕೆಲವು ತಿಂಗಳು ಮೊದಲೇ ಹೋರಾಟಕ್ಕೆ ಧುಮುಕಬೇಕಿತ್ತಲ್ಲವೆ?
ಸಿ ಎಸ್ ಷಡಾಕ್ಷರಿ: ಇಲ್ಲ, ನಾವು ಇದ್ದಕ್ಕಿದ್ದಂತೆ ಮುಷ್ಕರಕ್ಕೆ ಇಳಿದಿಲ್ಲ. ಒಂದು ವರ್ಷದಿಂದ ಈ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತ ಬಂದಿದ್ದೇವೆ. ಈ ಸರ್ಕಾರ ತನ್ನ ಅವಧಿಯಲ್ಲೇ ವೇತನ ಪರಿಷ್ಕರಣೆ ಮಾಡುತ್ತದೆ ಎಂದುಕೊಂಡಿದ್ದೇವು. ಆದರೆ ನಮ್ಮ ನಿರೀಕ್ಷೆ ಹುಸಿಯಾಯಿತು.
ವಿಸ್ತಾರ: ಸರ್ಕಾರಿ ನೌಕರರು ಭ್ರಷ್ಟರು, ಸೋಮಾರಿಗಳು, ಜನರ ಕೆಲಸ ಬೇಗ ಮಾಡುವುದಿಲ್ಲ. ಇವರಿಗೇಕೆ ವೇತನ ಏರಿಕೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರಲ್ಲ?
ಸಿ ಎಸ್ ಷಡಾಕ್ಷರಿ: ಭ್ರಷ್ಟಾಚಾರ ಎಲ್ಲಿಲ್ಲ ಹೇಳಿ? ಆದರೆ ನಮ್ಮ ರಾಜ್ಯದ ಸರ್ಕಾರಿ ನೌಕರರು ಇತರ ರಾಜ್ಯಗಳಿಗೆ ಹೋಲಿಸಿದರೆ ಅತಿ ಕಡಿಮೆ ಸಂಬಳ ಪಡೆಯುತ್ತಿದ್ದಾರೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ನಮ್ಮ ರಾಜ್ಯ ದೇಶದಲ್ಲೇ 5ನೇ ಸ್ಥಾನದಲ್ಲಿದೆ. ಇದು ನಮ್ಮ ನೌಕರರ ಕಾರ್ಯಕ್ಷಮತೆಗೆ ಸಾಕ್ಞಿ ಅಲ್ಲವೆ?
ನಮ್ಮ ರಾಜ್ಯದಲ್ಲಿ ಶೇ.39ರಷ್ಟು ಹುದ್ದೆಗಳು ಖಾಲಿ ಇವೆ. ಅಂದರೆ ಇಷ್ಟು ಮಂದಿಯ ಕೆಲಸವನ್ನು ಶೇ.61ರಷ್ಟು ನೌಕರರು ಮಾಡುತ್ತಿದ್ದಾರೆ. ಒಬ್ಬ ಪಿಡಿಒ ನಾಲ್ಕು ಗ್ರಾ.ಪಂಗಳ ಹೊಣೆಗಾರಿಕೆ ನಿಭಾಯಿಸುತ್ತಿದ್ದಾರೆ. ಅಧಿಕಾರಿಗಳ ಮೇಲೂ ಕೆಲಸದ ಒತ್ತಡ ಇದೆ. ಇಷ್ಟೆಲ್ಲರ ನಡುವೆಯೂ ನಮ್ಮ ನೌಕರರು ಶ್ರಮ ವಹಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಎಲ್ಲ ನೌಕರರೂ ಭ್ರಷ್ಟರು, ಎಲ್ಲರೂ ಸೋಮಾರಿಗಳು ಎಂದು ಹೇಳುವುದು ಸರಿಯಲ್ಲ. ಆತ್ಮಸಾಕ್ಷಿಯಂತೆ ಕೆಲಸ ಮಾಡಿ, ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಎಂದು ನಮ್ಮ ಸಂಘಟನೆ ಮೂಲಕವೂ ನಾವು ನೌಕರರನ್ನು ಉತ್ತೇಜಿಸುತ್ತಿದ್ದೇವೆ.
ವಿಸ್ತಾರ: 7ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಿದರೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭಾರಿ ಹೊರೆ ಬೀಳುತ್ತದೆ ಎಂಬ ಅಭಿಪ್ರಾಯ ಇದೆಯಲ್ಲ?
ಸಿ ಎಸ್ ಷಡಾಕ್ಷರಿ: ಒಟ್ಟು 3 ಲಕ್ಷ ಕೋಟಿ ರೂ. ವೆಚ್ಚದ ಬಜೆಟ್‌ನಲ್ಲಿ ಸರ್ಕಾರಿ ನೌಕರರಿಗೆ ವ್ಯಯಿಸುವುದು 13 ಸಾವಿರ ಕೋಟಿ ರೂ. ಮಾತ್ರ. ಇದು ಶೇ.15ರಷ್ಟು ಮಾತ್ರ. ಹಾಗಂತ ನೌಕರರು ಸರ್ಕಾರಕ್ಕೆ ಆದಾಯ ತಂದು ಕೊಡೋದಿಲ್ಲವಾ? ಖಾಲಿ ಹುದ್ದೆ ಭರ್ತಿ ಮಾಡದೆ ಸರ್ಕಾರ ತಿಂಗಳಿಗೆ ಒಂದು ಸಾವಿರ ರೂ. ಉಳಿಸುತ್ತಿದೆ. ಸರ್ಕಾರ ನೌಕರರಿಂದ ಕೆಲಸ ತೆಗೆಸಲಿ. ಟಾರ್ಗೆಟ್ದ್ ಕೊಡಲಿ. ಈ ಮೂಲಕ ಹೆಚ್ಚು ಹೆಚ್ಚು ಆದಾಯ ಗಳಿಸಲಿ. ನೌಕರರು ಶ್ರಮ ವಹಿಸಿ ಕೆಲಸ ಮಾಡಲು ಸಿದ್ಧರಿದ್ದಾರೆ.
ವಿಸ್ತಾರ: 21 ದಿನಗಳ ಕಾಲ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಎನ್‌ಪಿಎಸ್ ವಿರೋಧಿ ಹೋರಾಟ ನಡೆಯಿತು. ಆದರೆ ನೀವು ಅವರಿಗೆ ಬೆಂಬಲ ನೀಡಲಿಲ್ಲ. ಎನ್‌ಪಿಎಸ್ ಬಗ್ಗೆ ನಿಮ್ಮ ನಿಲುವೇನು?
ಸಿ ಎಸ್ ಷಡಾಕ್ಷರಿ: ಮುಷ್ಕರವನ್ನು ಸಮಯ, ಸಂದರ್ಭ ನೋಡಿ ಮಾಡಬೇಕಾಗುತ್ತದೆ. ಎನ್‌ಪಿಎಸ್ ಮುಷ್ಕರಕ್ಕೆ ಬೆಂಬಲ 9ನೀಡದಿರಲು ನಿರ್ಧರಿಸಿದ್ದು ನನ್ನೊಬ್ಬನ ನಿರ್ಧಾರ ಅಲ್ಲ. ಅದು 9 ಸಾವಿರ ಪ್ರತಿನಿಧಿಗಳ ತೀರ್ಮಾನ. ಹಾಗಂತ ನಾವು ಆ ಸಂಘಟನೆಯ ಮುಷ್ಕರವನ್ನು ವಿರೋಧಿಸಲಿಲ್ಲ. ಭಾಗಿಯಾಗಿಲ್ಲ ಅಷ್ಟೆ.
ನಮ್ಮ ಸರ್ಕಾರಿ ನೌಕರರ ಸಂಘಟನೆ 103 ವರ್ಷಗಳ ಇತಿಹಾಸ ಇದೆ. ನಾವು ಮುಷ್ಕರಕ್ಕೆ ಕರೆ ನೀಡಿದರೆ ಇಡೀ ರಾಜ್ಯದ ಆಡಳಿತ ಯಂತ್ರ ನಿಂತು ಹೋಗುತ್ತದೆ. ಎನ್‌ಪಿಎಸ್ ವಿರೋಧಿ ಹೋರಾಟಗಾರರೂ ನಮಗೆ ಬೆಂಬಲ ನೀಡಿದ್ದಾರೆ.
ಇದನ್ನೂ ಓದಿ: Govt Employees Strike : ಸರ್ಕಾರಿ ನೌಕರರ ಮುಷ್ಕರ ಹೇಗಿರಲಿದೆ? ನೌಕರರು ಪ್ರತಿಭಟನೆ ವೇಳೆ ಏನು ಮಾಡಲಿದ್ದಾರೆ?
ವಿಸ್ತಾರ: ಷಡಾಕ್ಷರಿ ಅವರಿಗೆ ಬಿಜೆಪಿ ಬಗ್ಗೆ ಸಹಾನುಭೂತಿ ಇದೆ. ಹಾಗಾಗಿ ಅವರು ಸರ್ಕಾರದ ಪರ ಮೆದು ಧೋರಣೆ ತಾಳುತ್ತಿದ್ದಾರೆ ಎಂಬ ಆಪಾದನೆ ಇದೆಯಲ್ಲ?
ಸಿ ಎಸ್ ಷಡಾಕ್ಷರಿ: ಯಾವುದೇ ಪಕ್ಷದ ಸರ್ಕಾರ ಬಂದರೂ ನೌಕರರು ಅವರೇ ಇರುತ್ತಾರೆ. ನಾವು ಯಾವುದೇ ಪಕ್ಷದ ಮಕ್ಕಳಲ್ಲ. ಸರ್ಕಾರದ ಮಕ್ಕಳು. ಸಹಾನುಭೂತಿ ಇದ್ದರೆ ಷಡಾಕ್ಷರಿ ಏಕೆ ಮುಷ್ಕರಕ್ಕೆ ಕರೆ ನೀಡುತ್ತಿದ್ದರು? ನೌಕರರ ಹಿತಾಸಕ್ತಿ ಕಾಪಾಡುವ ವಿಚಾರದಲ್ಲಿ ನಮಗೆ ಯಾವ, ಯಾರ ಮುಲಾಜೂ ಇಲ್ಲ.
ವಿಸ್ತಾರ: ಈಗ ಪರೀಕ್ಷಾ ಸಮಯ. ನಿಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಹಿತ ಬಲಿ ಕೊಡುವುದು ಸರಿಯೆ?
ಸಿ ಎಸ್ ಷಡಾಕ್ಷರಿ: ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರ ಹಿತ ಕಾಪಾಡುವ ಹೊಣೆ ಸರ್ಕಾರದ್ದು. ಇದಕ್ಕೆ ನಾವು ಕಾರಣ ಅಲ್ಲ. ಜನಪರ ಕೆಲಸದ ವಿಚಾರದಲ್ಲಿ ಸರ್ಕಾರದ ಜತೆ ನಾವು ಸದಾ ಇದ್ದೇವೆ. ಕೋವಿಡ್ ದುರಂತ ಆದಾಗ ನಾವು ಸರ್ಕಾರಕ್ಕೆ 200 ಕೋಟಿ ರೂ. ಕೊಡುಗೆ ನೀಡಿದ್ದೇವೆ. ಭೀಕರ ಪ್ರವಾಹ ಉಂಟಾದಾಗ 400 ಕೋಟಿ ರೂ. ದೇಣಿಗೆ ನೀಡಿದ್ದೇವೆ. ಹೀಗೆ ನಾವು ಸದಾ ಜನರ ಪರ ಇದ್ದೇವೆ.