Site icon Vistara News

Mahila Yakshagana: ಯಕ್ಷಗಾನ ಮಹಿಳಾ ತಂಡ ದೇಶದೆಲ್ಲೆಡೆ ಕಲೆ ಪಸರಿಸುತ್ತಿರುವುದು ಅಭಿಮಾನದ ಸಂಗತಿ: ಯು.ಟಿ.‌ಖಾದರ್

Karnataka Mahila Yakshagana silver jubilee

ಬೆಂಗಳೂರು: ಯಕ್ಷಗಾನ (Mahila Yakshagana) ಕರಾವಳಿ ಭಾಗದ‌ ಕಣ್ಣಿದ್ದಂತೆ. ಈ ಕಲೆಯಲ್ಲಿ‌ ಮಹಿಳೆಯರು ತೊಡಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.‌ಖಾದರ್ ಹೇಳಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ಮಹಿಳಾ ಯಕ್ಷಗಾನ (ಯಕ್ಷಗಾನ ಮಹಿಳಾ ತಂಡ) ಸಂಸ್ಥೆಯ ಬೆಳ್ಳಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿ,‌‌ ಯಕ್ಷಗಾನದಲ್ಲಿ ಮಹಿಳಾ ತಂಡ‌ ತೊಡಗಿಸಿಕೊಂಡಿರುವುದಲ್ಲದೆ, ಕಲೆಯನ್ನು ದೇಶದೆಲ್ಲೆಡೆ ಪಸರಿಸುತ್ತಿರುವುದು ಅಭಿಮಾನದ ಸಂಗತಿ. ಹೆಣ್ಣುಮಕ್ಕಳಿಗೆ ಯಕ್ಷಗಾನ ಕಲಿಸುತ್ತಾ 25 ವರ್ಷ ಸಾಗಿ ಬಂದಿರುವುದು ಸ್ತುತ್ಯರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ‌ ಭಾಗವಹಿಸಿದ್ದ ಕನ್ನಡಪ್ರಭ‌ ಮತ್ತು ಏಷಿಯಾನೆಟ್ ಸುವರ್ಣ ಪ್ರಧಾನ ಸಂಪಾದಕ ರವಿ ಹೆಗಡೆಯವರು ಯಕ್ಷಗಾನ ತಂಡದ‌ ಕೊಡುಗೆಯನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ಮೀಡಿಯಾ ಅಲೂಮ್ನಿ ಅಸೋಸಿಯೇಷನ್ ಅವರ ವತಿಯಿಂದ ಚಿಂತನ-ಮಂಥನ ಕಾರ್ಯಕ್ರಮ ನಡೆಯಿತು. ನಂತರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕೋಟ ಶಿವರಾಮ ಕಾರಂತರು ನಿರ್ದೇಶಿಸಿದ ಯಕ್ಷಗಾನ ಬ್ಯಾಲೆ ಪ್ರದರ್ಶನ ಎಲ್ಲರ ಮನಸೂರೆಗೊಳಿಸಿತು. ತಂಡದ ಗುರುಗಳಾದ ಶ್ರೀನಿವಾಸ ಸಾಸ್ತಾನ ಅವರಿಗೆ ಮಹಿಳಾ ತಂಡದಿಂದ‌ ಗುರುವಂದನೆ ಆಕರ್ಷಕವಾಗಿ ‌ಮೂಡಿಬಂತು.

ಕನ್ನಡ ಭಾಷೆಯಲ್ಲೇ ನಡೆಯುವ ಯಕ್ಷಗಾನವನ್ನು ವಿಶೇಷವಾಗಿ ಸಂಸ್ಥೆಯ ಮಕ್ಕಳಿಂದ ಆಂಗ್ಲಭಾಷೆಯಲ್ಲಿ ಕಂಸವಧೆ ಎನ್ನುವ ಯಕ್ಷಗಾನ, ತೆಂಕುತಿಟ್ಟಿನಲ್ಲಿ ಖ್ಯಾತ ಮಹಿಳಾ ಭಾಗವತರಾದ ಅಮೃತಾ ಅಡಿಗ ಇವರ ಸಿರಿಕಂಠದಲ್ಲಿ ‘ಸುದರ್ಶನ ವಿಜಯ’ ಪ್ರಸಂಗ, ಬಡಗುತಿಟ್ಟಿನ ಖ್ಯಾತ ಮಹಿಳಾ ಭಾಗವತರಾದ ಚಿಂತನಾ ಹೆಗಡೆ ಇವರ ಸಿರಿಕಂಠದಲ್ಲಿ ‘ವೀರ ಅಭಿಮನ್ಯು’ ಯಕ್ಷಗಾನ ಯಕ್ಷಪ್ರೇಮಿಗಳನ್ನು ರಂಜಿಸಿತು. ಎಲ್ಲಾ ಕಾರ್ಯಕ್ರಮ ಮಹಿಳೆಯರಿಂದ ನಡೆದದ್ದು ವಿಶೇಷ ಆಕರ್ಷಣೆಯಾಗಿತ್ತು.

ಇದನ್ನೂ ಓದಿ | P.S. Sreedharan Pillai : ಗೋವಾ ರಾಜ್ಯಪಾಲರ ಕಥಾ ಸಂಕಲನದ ಕನ್ನಡ ಅನುವಾದ ಬಿಡುಗಡೆ

ಸಭಾ ಕಾರ್ಯಕ್ರಮದಲ್ಲಿ ದೂರದರ್ಶನ, ಆಕಾಶವಾಣಿಯ ನಿರ್ದೇಶಕರಾದ ನಿರ್ಮಲ ಎಲಿಗಾರ್, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತ್ ಕುಮಾರ್, ಹಿರಿಯ ಪತ್ರಕರ್ತ ಡಾ.ಈಶ್ವರ್ ದೈತೋಟ, ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾದ ರಾಮಚಂದ್ರ ಉಪಾಧ್ಯ, ವಿಕಾಸ್ ಗ್ಲೋಬಲ್ ಸೋಲ್ಯುಷನ್ಸ್‌ನ ಅಧ್ಯಕ್ಷರಾದ ಡಿ.ವಿ ವೆಂಕಟಾಚಲಪತಿ, ಜಿ. ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ 14 ಯಕ್ಷಗಾನ ಗುರುಗಳಿಗೆ ‘ಕರ್ನಾಟಕ ಯಕ್ಷ ಗುರು ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಸಂಸ್ಥೆಯ ಸ್ಥಾಪಕರಾದ ಗೌರಿ.ಕೆ ಸ್ವಾಗತಿಸಿದರು, ಸುಪ್ರೀತಾ ಗೌತಮ್ ಮತ್ತು ಚೈತ್ರ ಕೋಟ ಕಾರ್ಯಕ್ರಮ ನಿರೂಪಿಸಿದರು.

Exit mobile version