ಬೆಂಗಳೂರು: ತರಕಾರಿ, ಸೊಪ್ಪು ಬೆಲೆ ಜಾಸ್ತಿಯಾಗಿದೆ ಎಂದು ಸಿಂಪಲ್ ಆಗಿ ಬೇಳೆ ಸಾರು ಮಾಡೋಣ ಅಂತ ಯೋಚನೆ ಮಾಡುತ್ತಾ ಇದ್ದೀರಾ? ಹಾಗಾದರೆ ಇನ್ನು ಮುಂದೆ ಬರೀ ಬೇಳೆ ಸಾರು ಮಾಡುವುದಕ್ಕೂ ಹಿಂದೆ ಮುಂದೆ ನೋಡಬೇಕಾದ ಕಾಲ ಬಂದಿದೆ. ಯಾಕೆಂದರೆ ಕೇವಲ 2 ತಿಂಗಳಲ್ಲಿ ಒಂದಲ್ಲ, ಎರಡೆರಡು ಬಾರಿ ಬೇಳೆ ಕಾಳುಗಳ ಬೆಲೆ ದಿಢೀರ್ ಏರಿಕೆ ಆಗಿರುವುದು ಕಂಡುಬಂದಿದ್ದು, ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿಯಾಗಿದೆ.
ಹೌದು, ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿಯಿಂದ ಸಾಮಾನ್ಯ ಜನರು ಜೀವನ ಮಾಡುವುದೇ ಕಷ್ಟವಾಗಿದೆ. ದಿನಕ್ಕೊಂದು ರೇಟ್ ಹೆಚ್ಚಳದ ಬಿಸಿಯಿಂದ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿದೆ. ವಿದ್ಯುತ್ ದರ ಹೆಚ್ಚಳದ ಬೆನ್ನಲ್ಲೇ ಜನರಿಗೆ ಈಗ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಿದೆ. ಕೇವಲ ಎರಡು ತಿಂಗಳಲ್ಲಿ ಎರಡೆರಡು ಬಾರಿ ಬೇಳೆ ಕಾಳುಗಳ ಬೆಲೆ ಏರಿಕೆ ಆಗಿದ್ದು, ಪ್ರತಿ ಕೆಜಿ ಬೇಳೆ ಕಾಳುಗಳ ಬೆಲೆ ಸರಾಸರಿ 10 ರಿಂದ 20 ರೂ.ವರೆಗೆ ಏರಿಕೆಯಾಗಿರುವುದು ಕಂಡುಬಂದಿದೆ.
ಇದನ್ನೂ ಓದಿ | Pakistan inflation : ಹಣದುಬ್ಬರದಲ್ಲಿ ಶ್ರೀಲಂಕಾವನ್ನು ಹಿಂದಿಕ್ಕಿದ ಪಾಕಿಸ್ತಾನ, ಎಷ್ಟಿದೆ ನೋಡಿ ಬೆಲೆ ಏರಿಕೆ?
ಮಳೆಯಿಂದ ಬೆಳೆ ಹಾನಿ ಆಗಿರುವುದು ಬೆಲೆ ಹೆಚ್ಚಳಕ್ಕೆ ಒಂದು ಕಾರಣವಾದರೆ, ವಿದೇಶಗಳಿಗೆ ಬೇಳೆ ಕಾಳುಗಳನ್ನು ರಫ್ತು ಮಾಡುವ ಕಾರಣದಿಂದ ದೇಶದಲ್ಲಿ ಪೂರೈಕೆ ಕೊರತೆಯಾಗಿ ಬೆಲೆ ಏರಿಕೆ ಆಗುತ್ತಿದೆ. ಏಪ್ರಿಲ್ ತಿಂಗಳಿನಲ್ಲಿ 10 ರಿಂದ 20 ರೂ. ವರೆಗೆ ಬೆಲೆ ಏರಿಕೆಯಾಗಿತ್ತು. ಮೇ ತಿಂಗಳಲ್ಲಿ ಮತ್ತೆ 20 ರಿಂದ 40 ರೂಪಾಯಿಯವರೆಗೂ ಪ್ರತಿ ಕೆ.ಜಿ.ಗೆ ಬೆಲೆ ಏರಿಕೆಯಾಗಿದೆ. ಹಾಗಾದರೆ ಯಾವೆಲ್ಲಾ ಬೇಳೆಗಳ ಬೆಲೆ ಎಷ್ಟಾಗಿದೆ ಎಂಬುವುದನ್ನು ಈ ಕೆಳಗೆ ನೀಡಲಾಗಿದೆ.
ಯಾವ ಬೇಳೆ, ಎಷ್ಟು ಏರಿಕೆ?
ಬೇಳೆ | ಏಪ್ರಿಲ್ | ಮೇ | ಚಿಲ್ಲರೆ ಬೆಲೆ |
ತೊಗರಿ ಬೇಳೆ | 120 ರೂ. | 140 ರೂ. | 160 ರೂ. |
ಉದ್ದಿನ ಬೇಳೆ | 120 ರೂ. | 140 ರೂ. | 160 ರೂ. |
ಕಡ್ಲೆ ಬೇಳೆ | 60 ರೂ. | 70 ರೂ. | 80 ರೂ. |
ಹೆಸರು ಬೇಳೆ | 90 ರೂ. | 110 ರೂ. | 120 ರೂ. |
ಹೆಸರು ಕಾಳು | 100 ರೂ. | 120 ರೂ. | 140 ರೂ. |
ಅವರೆ ಬೇಳೆ | 130 ರೂ. | 170 ರೂ. | 180 ರೂ. |
ಅವರೆ ಕಾಳು | 110 ರೂ. | 140 ರೂ. | 160 ರೂ. |
ಇದನ್ನೂ ಓದಿ | Edible oil prices : ಅಡುಗೆ ಎಣ್ಣೆ ದರದಲ್ಲಿ ಶೀಘ್ರ 8-12 ರೂ. ಇಳಿಕೆ
ಈ ಕಾಮರ್ಸ್ ಕಂಪನಿಗಳು ಸೇರಿ ದೊಡ್ಡ ದೊಡ್ಡ ಸಗಟು ವ್ಯಾಪಾರಿಗಳು ಬೇಳೆ ಕಾಳುಗಳನ್ನು ದಾಸ್ತಾನು ಮಾಡಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡ ಪ್ರಮುಖ ಬೇಳೆಕಾಳುಗಳಾದ ತೊಗರಿ ಹಾಗೂ ಉದ್ದಿನ ಬೇಳೆಯನ್ನು ನಿಗದಿತ ಮಿತಿಗಿಂತ ಹೆಚ್ಚು ದಾಸ್ತಾನು ಮಾಡುವಂತಿಲ್ಲ ಎಂದು ಈಗಾಗಲೇ ಆದೇಶ ಹೊರಡಿಸಿದೆ. ಒಟ್ಟಾರೆ ಬೆಲೆ ಏರಿಕೆ ಬಿಸಿ ಸಾಮಾನ್ಯ ಜನರ ಬದುಕಿನ ಮೇಲೆ ಬರೆ ಎಳೆದಿದೆ.