ವಿಜಯಪುರ: ಸಾಕಷ್ಟು ಜನರು ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರಿಕೊಳ್ಳುತ್ತಿದ್ದಾರೆ. ನನ್ನ ಮೂಲಕವೂ ಹಲವರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾನು ಪತ್ತೆ ಬಿಜೆಪಿ ಮರಳುತ್ತೇನೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ, ಇದು ಕೇವಲ ಅಲ್ಲಿರುವ ಜನರನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿದೆ. ನನಗಂತೂ ಬಿಜೆಪಿಯಿಂದ ಯಾರೂ ಆಹ್ವಾನ ಕೊಟ್ಟಿಲ್ಲ, ಆಹ್ವಾನ ಕೊಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಸ್ಪಷ್ಟನೆ ನೀಡಿದ್ದಾರೆ.
ಜಗದೀಶ ಶೆಟ್ಟರ್ ಮತ್ತೆ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ನನಗೆ ಹಾಗೂ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ತಪ್ಪಿಸಿದ ಪರಿಣಾಮ ಏನು ಎಂಬುವುದು ಅಸೆಂಬ್ಲಿ ಚುನಾವಣೆಯಲ್ಲಿ ಕರ್ನಾಟಕದ ಜನತೆ ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮತ್ತೆ ಹಿನ್ನಡೆಯಾಗಬಾರದು ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಜನಸಂಘದಿಂದ ಬಂದಂತವರಿಗೆ ಬಿಜೆಪಿಯವರು ಒಂದೂ ಟಿಕೆಟ್ ಕೊಡಲಿಲ್ಲ ಇದನ್ನು ಈಶ್ವರಪ್ಪನವರಿಗೆ ಪ್ರಶ್ನೆ ಮಾಡಿ? ಬಿಜೆಪಿಯವರು ಯಾವ ರೀತಿ ಜನಸಂಘದವರನ್ನು ಕಡೆಗಣಿಸಿದ್ದಾರೆ ನೀವೇ ನೋಡಿ ಎಂದು ಕಿಡಿಕಾರಿದರು.
ಇದನ್ನೂ ಓದಿ | Karnataka Drought : ಬರ ಸಂತ್ರಸ್ತ ರೈತರಿಗೆ ಗುಡ್ ನ್ಯೂಸ್; ಮೊದಲ ಕಂತಲ್ಲಿ 2 ಸಾವಿರ ರೂ.ವರೆಗೆ ಪರಿಹಾರ!
ಹಿಂದುತ್ವಕ್ಕೆ ರಾಜಕಾರಣ ಯಾಕೆ ಬೆರೆಸುತ್ತಿದ್ದಾರೆ ಗೊತ್ತಿಲ್ಲ. ಜನ ಸಂಘದಿಂದ ಬಂದವರು ಕಾಂಗ್ರೆಸ್‌ಗೆ ಹೋಗುವಂತೆ ಮಾಡಿದ್ದು ಯಾರು? ನನ್ನನ್ನು ಯಾವ ರೀತಿ ನಡೆಸಿಕೊಂಡು ಹೊರಗೆ ಹಾಕಿದರಲ್ಲ, ಆ ಕುರಿತು ಮೊದಲು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.
ಪಂಚಾರಾಜ್ಯ ಚುನಾವಣೆ ವಿಚಾರ ಪ್ರತಿಕ್ರಿಯಿಸಿ, ಎಕ್ಸಿಟ್ ಪೋಲ್‌ನಲ್ಲಿ ಕಾಂಗ್ರೆಸ್ ಬಲಯುತವಾಗಿದೆ. ಡಿ. 3ರ ಫಲಿತಾಂಶದಲ್ಲಿ ಹೆಚ್ಚು ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಪಡೆಯುವುದು ನಿಶ್ಚಿತ ಎಂದು ತಿಳಿಸಿದರು.
ಜಗದೀಶ್ ಶೆಟ್ಟರ್ ಡಿಎನ್‌ಎ ಪರಿವಾರದ್ದು, ಕಾಂಗ್ರೆಸ್ಸಿನದ್ದಲ್ಲ ಎಂದ ಸಿ.ಟಿ.ರವಿ
ಚಿಕ್ಕಮಗಳೂರು: ಜಗದೀಶ್ ಶೆಟ್ಟರ್ ಡಿಎನ್‌ಎ ಪರಿವಾರದ್ದು, ಕಾಂಗ್ರೆಸ್ಸಿನದ್ದಲ್ಲ. ಅವರ ಚಿಕ್ಕಪ್ಪ ಜನ ಸಂಘದಿಂದ ಗೆದ್ದಿದ್ದರು. ಬಿಜೆಪಿ ರಿಪೇರಿ ಮಾಡುವುದಕ್ಕೆ ಆಗದಿಲ್ಲ ಅನ್ನೋದು ಅವರಿಗೆ ಶೋಭೆ ತರಲ್ಲ. ಬಿಜೆಪಿ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಪಕ್ಷ ರೂಪುಗೊಂಡಂತಹ ಪಕ್ಷ. ಬಿಜೆಪಿಯ ಪ್ರೊಡಕ್ಷನ್ ಯೂನಿಟ್ ಚೆನ್ನಾಗಿದೆ. ಪ್ರಾಡಕ್ಟ್‌ಗಳು ಕೆಲವೊಮ್ಮೆ ಫಸ್ಟ್ ಕ್ವಾಲಿಟಿ, ಸೆಕೆಂಡ್ ಕ್ವಾಲಿಟಿಯಾಗಿ ರೂಪುಗೊಳ್ಳುತ್ತವೆ. ಪ್ರೊಡಕ್ಷನ್ ಯುನಿಟ್ ಎಲ್ಲಿವರೆಗೂ ಚೆನ್ನಾಗಿರುತ್ತೋ ಅಲ್ಲಿವರೆಗೂ ಯಾರೂ ಬಿಜೆಪಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದ್ದಾರೆ.
ಜಗದೀಶ್ ಶೆಟ್ಟರ್‌ಗೆ ಬಿಜೆಪಿ ಸೈದ್ಧಾಂತಿಕ ನೆಲೆಯಲ್ಲಿ ರೂಪುಗೊಂಡ ಪಕ್ಷವೆಂಬ ಅರಿವಿದೆ. ಹೊಸದಾಗಿ ಪಕ್ಷಾಂತರವಾಗಿರುವ ಕೆಲವರು ನಾವು ಕಟ್ಟರ್ ಎಂದು ತೋರಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ನನ್ನನ್ನು ನಂಬುತ್ತಾರೋ… ಇಲ್ಲವೋ.. ಎಂದು ಜಗದೀಶ್ ಶೆಟ್ಟರ್ ಬಿಜೆಪಿಗೆ ಬೈಯುತ್ತಿದ್ದಾರೆ. ಬಿಜೆಪಿಗೆ ಬೈದರೆ ಅವರನ್ನು ಕಾಂಗ್ರೆಸ್‌ನವರು ನಂಬುತ್ತಾರೆಂದು ಭಾವಿಸಿದ್ದಾರೆ. ಜಗದೀಶ್ ಶೆಟ್ಟರ್ ಸದ್ಯ ಅತಂತ್ರ ಪರಿಸ್ಥಿತಿಯಲ್ಲಿ ಒದ್ದಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ | ಮೊಗಸಾಲೆ ಅಂಕಣ: ಲೋಕಸಭೆ ಚುನಾವಣೆಗೆ ತಯಾರಿ ಮತ್ತು ರಾಜ್ಯ ಬಿಜೆಪಿಯ ತಳಮಳ
ನೀವು ಪಾರ್ಟಿ ಚೇಂಜ್ ಮಾಡಿರಬಹುದು, ಆದರೆ ನಿಮ್ಮ ಬ್ಲಡ್ ಚೇಂಜ್ ಮಾಡೋಕಾಗುತ್ತಾ? ಅದು ಜನಸಂಘದಿಂದ ಬಂದಂತಹ ಬಿಜೆಪಿ ಬ್ಲಡ್ ಎಂದು ಹೇಳಿದರು.