Site icon Vistara News

Women’s Day 2023: ಎರಡು-ಮೂರು ದಿನ ಮುಟ್ಟಿನ ರಜೆ ಕೊಡುವುದು ಅಗತ್ಯ

Menstrual Leave

Menstrual Leave

| ಡಾ. ಸುವರ್ಣಿನಿ ಕೊಣಲೆ, ಆಯುರ್ವೇದ ವೈದ್ಯೆ

ಋತುಸ್ರಾವದ ರಜೆಯನ್ನು‌ ನಿರಾಕರಿಸುವುದು ಎಂದರೆ ಮಹಿಳೆ, ಪ್ರಕೃತಿ, ಮತ್ತು ಮಾನವೀಯತೆಯನ್ನು ಅಗೌರವಿಸುವುದು. ಋತುಸ್ರಾವದ ಸಮಯದಲ್ಲಿ 2-3 ದಿನಗಳ ಸಂಪೂರ್ಣ ವಿಶ್ರಾಂತಿ ಅತೀ ಅಗತ್ಯ. ಇದಕ್ಕಾಗಿ ಶಾಲೆ, ಕಾಜೇಜು ಮತ್ತು ಕಚೇರಿಗಳಲ್ಲಿ ಸಂಬಳ ಸಹಿತ ರಜೆ ನೀಡುವ ನಿಯಮ ಕೂಡ ಮುಖ್ಯ. ಪ್ರಕೃತಿ ಗಂಡು ಹೆಣ್ಣು ಇಬ್ಬರನ್ನೂ ವಿಭಿನ್ನವಾಗಿ ಸೃಷ್ಟಿಸಿರುವುದರಿಂದ ಆ ವಿಭಿನ್ನತೆಯನ್ನು ಗೌರವಿಸಬೇಕಾದದ್ದು ಅಗತ್ಯ. ಗಂಡು ಮಾಡಿದಂತೆಯೇ ಮಾಡುವುದರಿಂದ ಮಾತ್ರ ಹೆಣ್ಣು ಆತನಿಗೆ ಸಮಾನಳಾಗುತ್ತಾಳೆ‌‌ ಎನ್ನುವುದು ಭ್ರಮೆ. ಇಲ್ಲಿ ಸಮಾನತೆ ಅಸಮಾನತೆಯ ಪ್ರಶ್ನೆ ಇಲ್ಲ. ಇಬ್ಬರೂ ಪರಸ್ಪರ ಪೂರಕ. ಹಾಗೂ ಆಯಾ ಸೃಷ್ಟಿಯ ವಿಶೇಷತೆಯನ್ನು ಗೌರವಿಸುವುದನ್ನು ನಾವು ಕಲಿಯಬೇಕು.

ಇದು ಮಹಿಳೆಯಿಂದ ಮಹಿಳೆಗೆ (Women’s Day 2023) ಭಿನ್ನ, ಹಾಗಾಗಿ ಅಗತ್ಯ ಇದ್ದವರು ಪಡೆಯಬಹುದು ಎನ್ನುವುದೂ ಒಂದು ವಾದ. ಆದರೆ ಸ್ವಾಸ್ಥ್ಯದ ದೃಷ್ಟಿಯಿಂದ ನೋಡುವಾಗ ಇದು ಹಾಗಲ್ಲ. ಎಲ್ಲರಿಗೂ ಈ ಸಮಯದಲ್ಲಿ ವಿಶ್ರಾಂತಿ ಅಗತ್ಯ. ಇದನ್ನು ಕೇವಲ ಭಾವನಾತ್ಮಕವಾಗಿ ಹೇಳುತ್ತಿರಲ್ಲ. ಇದು ಸಂಪುರ್ಣ ವೈಜ್ಞಾನಿಕ/ ವೈದ್ಯಕೀಯ ಕಾರಣಕ್ಕಾಗಿ….
ಇದನ್ನು ಎರಡು ದೃಷ್ಟಿಕೋನದಿಂದ ನೋಡಬಹುದು.

ಮೊದಲನೆಯದು:

ಈಗಿನ ಕಾಲದಲ್ಲಿ ಹೆಚ್ಚಿನ ಎಲ್ಲ ಹೆಣ್ಣುಮಕ್ಕಳು ಋತುಸ್ರಾವದ ಸಮಯದಲ್ಲಿ ಕೆಳ ಹೊಟ್ಟೆ ನೋವು, ಸೊಂಟನೋವು, ತೊಡೆ ಕಾಲುಗಳಲ್ಲಿ ಸೆಳೆತ, ತಲೆನೋವು, ತಲೆಸುತ್ತು, ವಾಂತಿ, ಸುಸ್ತು ಇತ್ಯಾದಿ ಸಮಸ್ಯೆಗಳಲ್ಲಿ ಒಂದನ್ನು, ಅಥವಾ ಕೆಲವನ್ನು ಹೊಂದಿರುವುದು ತುಂಬಾ ಸಹಜವಾಗಿದೆ. ಈ ಸಮಯದಲ್ಲಿ ಕೆಲಸ ಮಾಡಲು, ಹೆಚ್ಚು ಹೊತ್ತು ಕುಳಿತುಕೊಳ್ಳಲು, ಓಡಾಡಲು, ವಾಹನ ಚಲಾಯಿಸಲು, ಓದಲು ಬರೆಯಲು, ಪಾಠ ಕೇಳಲು ಇತ್ತಾದಿ ಯಾವುದೇ ದೈಹಿಕ ಮತ್ತು ಮಾನಸಿಕ ಕಾರ್ಯ ಆಕೆಯಿಂದ ಸಾಧ್ಯವಾಗುವುದಿಲ್ಲ.

ಆದರೆ ಅನಿವಾರ್ಯತೆಯ ಕಾರಣದಿಂದ ಕೆಲಸಗಳನ್ನು ಮಾಡುವುದು ಆಕೆಯ ದೈಹಿಕ‌ಮಾನಸಿಕ ಆರೋಗ್ಯವನ್ನು ಇನ್ನಷ್ಟು ಹಾಳುಮಾಡುತ್ತದೆ. ಆಕೆಗೆ ತನ್ನ ಮೇಲೆ, ಬದುಕಿನ ಮೇಲೆ‌ ಬೇಸರ, ತನ್ನ ಸಾಮರ್ಥ್ಯದ ಮೇಲೆ ಅನುಮಾನ, ಸಂಬಂಧಗಳಲ್ಲಿ ಅಸಾಮರಸ್ಯಕ್ಕೆ ಇದು ಕಾರಣವಾಗುತ್ತದೆ. ನೋವು ಇತ್ಯಾದಿ ಸಹಿಸುತ್ತಾ ಕೆಲಸ ಮಾಡುವುದು ಅಸಾಧ್ಯ. ವಿಶ್ರಾಂತಿ ಬೇಕೇಬೇಕು. ಅದಕ್ಕಾಗಿ menstrual leave ಬೇಕು.

ಎರಡನೆಯದಾಗಿ

ಆ ಸಮಯದಲ್ಲಿ ಆಕೆ‌ ಸಂಪೂರ್ಣವಾಗಿ, ದೈಹಿಕ ಹಾಗೂ ಮಾನಸಿಕ, ದುರ್ಬಲಳಾಗಿ ಇರುತ್ತಾಳೆ. ಈ ಸಮಯದಲ್ಲಿ ಈಸ್ಟ್ರೋಜನ್, ಪ್ರೊಜೆಸ್ಟೆರಾನ್ ಹಾರ್ಮೋನುಗಳ ಪ್ರಮಾಣ ಕಡಿಮೆ‌ ಇರುವುದು ಇದಕ್ಕೆ‌ ಕಾರಣ. ಈ ಸಮಯದಲ್ಲಿ ಆಕೆಗೆ ವಿಶ್ರಾಂತಿ ಅಗತ್ಯ. ಆ ಎರಡುಮೂರು ದಿನಗಳು ಆಕೆ ವಿಶ್ರಾಂತಿ ಪಡೆಯುವುದರಿಂದ ಸಹಜವಾಗಿ ಉಳಿದ ದಿನಗಳ ಅವಳ productivity ಹೆಚ್ಚಾಗುತ್ತದೆ. ಇದು ಖಂಡಿತವಾಗಿಯೂ ಆಕೆಯ ದೌರ್ಬಲ್ಯವಲ್ಲ. ಇದು ಸೃಷ್ಟಿ ಮುನ್ನಡೆಸುವ ಅತಿ ದೊಡ್ಡ ಸಾಮರ್ಥ್ಯ ತಾನೇ!

ಋತುಸ್ರಾವ ಎನ್ನುವುದು ಹೆಣ್ಣು ತಿಂಗಳಿಗೊಮ್ಮೆ ಪುನರ್ನವಗೊಳ್ಳುವ ಸಮಯ. ಇದು ಆಕೆಯ ಆರೋಗ್ಯಕ್ಕೂ, ಆಕೆಯ ಮೂಲಕ‌ ಜನಿಸುವ ಮಕ್ಕಳ (ಎಂದರೆ ಮುಂದಿನ ಜನಾಂಗ) ಸ್ವಾಸ್ಥ್ಯಕ್ಕೂ ತುಂಬಾ ಅಗತ್ಯವಾದ ಅಂಶ.

ಆ ಸಮಯದಲ್ಲಿ ಆಕೆ ವಿಶ್ರಾಂತಿ ಪಡೆಯದೇ ಇರುವುದರಿಂದ ಋತುಚಕ್ರಕ್ಕೆ, ಗರ್ಭಧಾರಣೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳು ತುಂಬಾ ಹೆಚ್ಚು. ಅಲ್ಲದೇ ಈಗಾಗಲೇ ಇರುವ ಸಮಸ್ಯೆಗಳೂ ಉಲ್ಬಣಿಸುತ್ತವೆ. ಇದು ನಿಧಾನಕ್ಕೆ ದೇಹದ ಬೇರೆ ಅಂಗಗಳ ಸಮಸ್ಯೆಗಳಿಗೆ ಕಾರಣವಾಗಬಹುದು, ಅಲ್ಲದೇ ಆಕೆಯ ಮಾನಸಿಕ, ಕೌಟುಂಬಿಕ ಅನಾರೋಗ್ಯಕ್ಕೂ ಕಾರಣವಾಗಬಹುದು.

ಇದನ್ನೂ ಓದಿ: Women’s Day 2023 : ಮುಟ್ಟಿನ ರಜೆ ನಮ್ಮ ಸಂವೇದನೆಯ ಸಂಕೇತ

ಈ ಎಲ್ಲ ಕಾರಣಗಳಿಂದ ಪ್ರತಿ ಸಲವೂ 2-3 ದಿನಗಳ ರಜೆ ಕಡ್ಡಾಯವಾಗಿ ನೀಡುವುದು ಸರ್ಕಾರದ ಕರ್ತವ್ಯ.

ಆ ಸಮಯದಲ್ಲಿ ವಿಶ್ರಾಂತಿಯ ಜೊತೆಗೇ ಅನುಸರಿಸಬೇಕಾದ ಆಹಾರ ವಿಹಾರಗಳ‌ ನಿಯಮಗಳೂ ಇವೆ. ಅವುಗಳನ್ನು ಅನುಸರಿಸುವುದರಿಂದ ಮಹಿಳೆಯ ಆರೋಗ್ಯದಲ್ಲಿ ಉತ್ತಮ ಬದಲಾವಣೆ ಗಮನಿಸಬಹುದು. ಹಲವಾರು ಅನಾರೋಗ್ಯಗಳನ್ನೂ ತಡೆಗಟ್ಟಬಹುದು.

Exit mobile version