ಧಾರವಾಡ: ಎಸಿಬಿ ಸೃಷ್ಟಿ ಮಾಡಿದ್ದೇ ಭ್ರಷ್ಟಾಚಾರ ವಿರುದ್ಧದ ಹೋರಾಟ ಅಂತ್ಯ ಮಾಡಲು. ಈಗ ಎಸಿಬಿ ಹೋಗಿ ಪುನಃ ಲೋಕಾಯುಕ್ತ ಬಂದಿದೆ. ಲೋಕಾಯುಕ್ತಕ್ಕೆ ಅಧಿಕಾರ ಕೊಟ್ಟರೆ ಸಾಲದು. ಬೇಕಾದ ಸಿಬ್ಬಂದಿ ಕೊಡಬೇಕು. ಸಿಬ್ಬಂದಿ ಕೊಟ್ಟರೆ ಸರ್ಕಾರಕ್ಕೆ ಸಲಾಂ ಮಾಡುವೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಹೇಳಿದರು.
ಲೋಕಾಯುಕ್ತಕ್ಕೆ ಮಾತ್ರ ಈಗ ಭಷ್ಟಾಚಾರ ವಿರುದ್ಧದ ವಿಚಾರಣೆಗೆ ಅಧಿಕಾರ ಇದೆ. ಆದರೆ, ಅದಕ್ಕೆ ಬೇಕಾದ ಸಿಬ್ಬಂದಿಯನ್ನು ಸರ್ಕಾರ ಕೊಡಬೇಕು. ಅಲ್ಲದೆ, ಕೆಲವು ಲೋಕಾಯುಕ್ತ ಕಾಯಿದೆಗಳಿಗೆ ತಿದ್ದುಪಡಿಯಾಗಬೇಕು. ಈ ಹಿಂದೆ ಇದ್ದ ಅಧಿಕಾರಗಳನ್ನು ಪುನಃ ನಿಯೋಜಿಸಬೇಕು ಎಂದು ಸುದ್ದಿಗಾರರಿಗೆ ತಿಳಿಸಿದರು.
ನಾನು ಪುನಃ ಲೋಕಾಯುಕ್ತಕ್ಕೆ ಬರುವುದಿಲ್ಲ. ನಾನು ಐದು ವರ್ಷ ನನ್ನ ಕರ್ತವ್ಯವನ್ನು ನಿಭಾಯಿಸಿದ್ದೇನೆ. ನನಗೆ ಈಗ 83 ವರ್ಷ ವಯಸ್ಸಾಯಿತು. ಹೀಗಾಗಿ ನನಗೆ ಈಗ ಯಾವುದೇ ಅಧಿಕಾರ ಬೇಡ. ಯಾವ ಹುದ್ದೆ, ಅಧಿಕಾರಕ್ಕೆ ನಾನು ಈಗ ಕಾಯುವುದಿಲ್ಲ. ಲೋಕಾಯುಕ್ತ ತಿದ್ದುಪಡಿಗೆ ಸಲಹೆ ಕೇಳಿದರೆ ಕೊಡುವೆ. ಆದರೆ, ಅವರು ಕೇಳುವುದಿಲ್ಲ ಎಂಬುದು ನನಗೆ ಗೊತ್ತಿದೆ ಎಂದು ನ್ಯಾ. ಸಂತೋಷ್ ಹೆಗ್ಡೆ ಹೇಳಿದರು.
1983ರಲ್ಲಿ ಜನತಾ ಪಕ್ಷ ಲೋಕಾಯುಕ್ತವನ್ನು ಪ್ರಣಾಳಿಕೆಯಲ್ಲಿ ಸೇರಿಸಿತ್ತು. ಬಲಿಷ್ಠವಾದ ಲೋಕಾಯುಕ್ತ ಸಂಸ್ಥೆಯನ್ನು ಕಟ್ಟಿದ್ದರು. ಆದರೆ ಮೊದಲಿನ ಹತ್ತು ವರ್ಷ ಏನೂ ನಡೆದಿರಲಿಲ್ಲ. ಎನ್. ವೆಂಕಟಾಚಲಯ್ಯ ಅವರು ಲೋಕಾಯುಕ್ತದ ಶಕ್ತಿ ತೋರಿಸಿದ್ದರು. ಆ ಬಳಿಕ ನಾನು ಅವರ ಕೆಲಸ ಮುಂದುವರಿಸಿಕೊಂಡು ಹೋಗಿದ್ದೆ. ಅದರ ಪರಿಣಾಮ ಬಹಳವೇ ಆಯಿತು. ಹೀಗಾಗಿ ಲೋಕಾಯುಕ್ತದ ಅಧಿಕಾರವನ್ನು ಕಿತ್ತುಕೊಂಡರು. ಆದರೆ, ಮುಚ್ಚುವ ಧೈರ್ಯ ಸರ್ಕಾರಕ್ಕೆ ಇರಲಿಲ್ಲ. ಹೀಗಾಗಿ ದುರ್ಬಲಗೊಳಿಸುವ ಪ್ರಯತ್ನವನ್ನು ಮಾಡಿದರು. ಆದರೆ ಈಗ ಅದೂ ಸಫಲವಾಗಲಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ | BJP ಜನಸ್ಪಂದನ | ವಿಪಕ್ಷ ನಾಯಕರ ಮೇಲೆ CBI, IT, ED, ಲೋಕಾಯುಕ್ತ ದಾಳಿ: ಸಿಎಂ ಬೊಮ್ಮಾಯಿ ಮುನ್ಸೂಚನೆ?