ಬೆಂಗಳೂರು: ಕಾಂಗ್ರೆಸ್ ನಾಯಕ ಕೆಜಿಎಫ್ ಬಾಬು ಸೇರಿದಂತೆ ಸುಮಾರು 50ಕ್ಕೂ ಅಧಿಕ ಕಾಂಗ್ರೆಸ್ ನಾಯಕರ ನಿವಾಸಗಳ ಮೇಲೆ ಐಟಿ ದಾಳಿ (IT Raid) ನಡೆದಿದೆ. ಬುಧವಾರ ಬೆಳಗ್ಗಿನ ಜಾವವೇ ಈ ದಾಳಿ ನಡೆದಿದ್ದು, ಎಲ್ಲ ನಿವಾಸಗಳಲ್ಲಿ ತಪಾಸಣೆ ನಡೆಯುತ್ತಿದೆ.
ಹೈಗ್ರೌಂಡ್ಸ್ ಬಳಿಯಿರುವ ಕೆ ಜಿ ಎಫ್ ಬಾಬು ನಿವಾಸದ ಮೇಲೆ ಪ್ರಮುಖ ದಾಳಿ ನಡೆದಿದೆ. ಇಲ್ಲಿನ ರುಕ್ಸಾನಾ ಪ್ಯಾಲೇಸ್‌ಗೆ ಅಧಿಕಾರಿಗಳು ಲಗ್ಗೆ ಇಟ್ಟಿದ್ದಾರೆ. ಕೆಜಿಎಫ್ ಬಾಬು ಅವರು ಇದೇ ಮನೆಯಲ್ಲಿದ್ದಾರೆ ಎನ್ನಲಾಗಿದ್ದು, ಅವರಿಂದ ಮಾಹಿತಿ ಪಡೆಯಲಾಗುತ್ತಿದೆ. ಕೆಜಿಎಫ್ ಬಾಬು ಅವರಲ್ಲದೆ ಕಾಂಗ್ರೆಸ್‌ನ ಎರಡನೇ ಹಂತದ ಸುಮಾರು 50 ನಾಯಕರ ಮನೆಗೆ ಲಗ್ಗೆ ಇಟ್ಟಿದ್ದಾರೆ. ಕೆಜಿಎಫ್ ಬಾಬು ಅವರ ಮನೆ ಮೇಲೆ 2022ರಲ್ಲೂ ಒಮ್ಮೆ ದಾಳಿ ನಡೆದಿತ್ತು.
ಕೆಜಿಎಫ್ ಬಾಬು ಮನೆಯಲ್ಲಿ ಏನೇನು ಸಿಕ್ತು?
ಐಟಿ ದಾಳಿ ವೇಳೆ 2,000ಕ್ಕೂ ಹೆಚ್ಚು ಡಿ.ಡಿಗಳು, 5 ಸಾವಿರ ರೇಷ್ಮೆ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ. ಉಮ್ರಾ ಫೌಂಡೇಷನ್ ಹೆಸರಿನಲ್ಲಿ ತಲಾ ₹1,105 ಮೌಲ್ಯದ ಡಿಡಿಗಳು ಪತ್ತೆಯಾಗಿವೆ. ತಲಾ ₹5,000 ಮೌಲ್ಯದ 5,000 ಕಂಚಿ ರೇಷ್ಮೆ ಸೀರೆಗಳು ಸಿಕ್ಕಿವೆ.
ಸೀರೆ ಮತ್ತಿತರ ಸಾಮಗ್ರಿಗಳ ಪ್ಯಾಕಿಂಗ್ ಮೇಲೆ ಕೆಜಿಎಫ್ ಬಾಬು ಭಾವಚಿತ್ರವಿದೆ. ಇವೆಲ್ಲವನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇವರ ಜತೆಗೆ ಜಿಎಸ್‌ಟಿ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದ್ದು, ಪ್ರಾದೇಶಿಕ ಅಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಕೆಜಿಎಫ್ ಮನೆಗೆ ಭೇಟಿ ನೀಡಿದ್ದಾರೆ.
1621 ಕೋಟಿ ಆಸ್ತಿಯ ಒಡೆಯ ಕೆಜಿಎಫ್ ಬಾಬು
ಕೆಜಿಎಫ್ ಬಾಬು ಅವರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆರ್.ವಿ ದೇವರಾಜ್ ಬದಲು ತನಗೆ ಟಿಕೆಟ್ ಕೊಡಬೇಕು ಎಂದು ಕೇಳಿಕೊಂಡಿದ್ದರು. ಚುನಾವಣೆಗೆ ಮೊದಲೇ ಎಲ್ಲ ಕಡೆ ಹಣ ಹಂಚಿಯೂ ಇದ್ದರು. ಆದರೆ, ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಅವರು ತಮ್ಮ ಎರಡನೇ ಪತ್ನಿ ಶಾಝಿಯಾ ತರನ್ನುಮ್ ಅವರನ್ನು ಪಕ್ಷೇತರರಾಗಿ ಕಣಕ್ಕೆ ಇಳಿಸಿದ್ದಾರೆ.
ಶಾಝಿಯಾ ತರನ್ನುಮ್ ಅವರ ನಾಮಪತ್ರದ ಜತೆಗೆ ಸಲ್ಲಿಸಲಾದ ಅಫಿಡವಿಟ್‌ನಲ್ಲಿ ಕೆಜಿಎಫ್ ಬಾಬು ಅವರ ಆಸ್ತಿ ಮೌಲ್ಯ 1621 ಕೋಟಿ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಕೆಜಿಎಫ್ ಬಾಬು ಹೆಸರಿನಲ್ಲಿ 83.56 ಕೋಟಿ ರೂ.ಗಳ ಚರಾಸ್ತಿ ಮತ್ತು 1,538.15 ಕೋಟಿ ರೂ. ಬೆಲೆ ಬಾಳುವ ಸ್ಥಿರಾಸ್ತಿ ಇದೆ.
ಐದು ಕಾರುಗಳ ಖರೀದಿಗೆ ಕೊಟ್ಟ ಮುಂಗಡವೇ 2.67 ಕೋಟಿ ರೂ.
ಸಾಮಾನ್ಯ ಜನರು ಕಾರು ಖರೀದಿಸಲು ಮುಂದಾದರೆ ಅದರ ರೇಂಜ್ ಐದರಿಂದ 10 ಲಕ್ಷ ಇರುತ್ತದೆ. ಅದೂ ಬ್ಯಾಂಕ್ ಲೋನ್! ಆದರೆ, ಕೆಜಿಎಫ್ ಬಾಬು ಅವರು ಕಾರು ಖರೀದಿಗೆ ಕೊಟ್ಟಿರುವ ಎಡ್ವಾನ್ಸ್ ಹಣವೇ 2.67 ಕೋಟಿ ರೂ! ಅವರು ಬೇರೆ ಬೇರೆಯವರಿಗೆ ಕೊಟ್ಟಿರುವ ಸಾಲವೇ 46 ಕೋಟಿ ರೂ.!
ಶಾಝಿಯಾ ಬಳಿ 38.58 ಲಕ್ಷ ರೂ. ಮೌಲ್ಯದ 643 ಗ್ರಾಂ ಚಿನ್ನವಿದ್ದರೆ, ಪತಿ ಬಳಿ 91.08 ಲಕ್ಷ ರೂ. ಮೌಲ್ಯದ 1.51 ಕೆಜಿ ಚಿನ್ನವಿದೆ. ಪತಿ ಬಳಿ ರೋಲ್ಸ್ ರಾಯ್ಸ್, ಫಾರ್ಚೂನರ್ ಕಾರುಗಳಿದ್ದು, ಇನ್ನೂ ಐದು ಕಾರುಗಳ ಖರೀದಿಗೆ 2.67 ಕೋಟಿ ರೂ. ಮುಂಗಡ ಹಣ ನೀಡಿದ್ದಾರೆ. ಇವುಗಳಲ್ಲಿ ಬೆಂಜ್ (ಸ್ಕಾಟ್), ಫೋರ್ಡ್ ಎಂಡೆವರ್, ನಿಸ್ಸಾನ್, ರೋಲ್ಸ್ ರಾಯ್ಸ್, ಟೊಯೋಟಾ ವೆಲ್‌ಫೈರ್ ಕಾರುಗಳು ಸೇರಿವೆ.
ಶಾಜಿಯಾ ಬಳಿ ಯಾವುದೇ ಸ್ಥಿರಾಸ್ತಿಯಿಲ್ಲ. ಆದರೆ, ಕೆಜಿಎಫ್ ಬಾಬು ಹೆಸರಿನಲ್ಲಿ 3 ಕೃಷಿ ಜಮೀನು, 24 ಕೃಷಿಯೇತರ ಭೂಮಿ ಇದ್ದು ಇದರ ಒಟ್ಟು ಮೌಲ್ಯ 1,538.15 ಕೋಟಿ ರೂ.!
ಈ ರೀತಿ ಅಧಿಕೃತವಾಗಿಯೇ ಇಷ್ಟೊಂದು ಆಸ್ತಿ ಇದೆ ಎಂದು ಹೇಳಿಕೊಂಡಿರುವ ಕೆಜಿಎಫ್ ಬಾಬು ಅವರ ಬಳಿ ಇನ್ನಷ್ಟು ಬೇರೆ ಆಸ್ತಿ ಇರಬಹುದು ಎನ್ನುವುದು ಲೆಕ್ಕಾಚಾರವಾಗಿದೆ. ಇದೆಲ್ಲದರ ದಾಖಲೆ ಪಡೆಯುವ ಉದ್ದೇಶದಿಂದ ಐಟಿ ದಾಳಿ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ : Karnataka Election: ಆಯನೂರು ಮಂಜುನಾಥ್ ಬಿಜೆಪಿಗೆ ರಾಜೀನಾಮೆ, ಜೆಡಿಎಸ್ ಸೇರ್ಪಡೆಗೆ ಕ್ಷಣಗಣನೆ