ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election 2023) ಮತದಾನಕ್ಕೆ ಕೇವಲ ನಾಲ್ಕು ದಿನ ಬಾಕಿ ಇದೆ. ಈ ವೇಳೆ ಹಣದ ವಹಿವಾಟು ಜಾಸ್ತಿಯಾಗುತ್ತದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಾಗೃತರಾಗಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಫೈನಾನ್ಶಿಯರ್‌ಗಳ ಮನೆಗಳ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ದಾಳಿ ನಡೆಸಿ 20 ಕೋಟಿ ರೂ. ಮೌಲ್ಯದ ನಗದು ಮತ್ತು ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಮೈಸೂರು ಮತ್ತು ಬೆಂಗಳೂರಿನ ಶಾಂತಿನಗರ, ಕಾಕ್ಸ್ ಟೌನ್, ಶಿವಾಜಿ ನಗರ, ಆರ್‌ಎಂವಿ ಬಡಾವಣೆ, ಕನಿಂಗ್ ಹ್ಯಾಮ್ ರಸ್ತೆ, ಸದಾಶಿವ ನಗರ, ಕುಮಾರಪಾರ್ಕ್ ವೆಸ್ಟ್ ಸೇರಿದಂತೆ ಹಲವು ಕಡೆಗಳಲ್ಲಿ ವಾಸವಾಗಿರುವ ದೊಡ್ಡ ದೊಡ್ಡ ಫೈನಾನ್ಸಿಯರ್‌ಗಳ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಟೀಂ ಮನೆಯಲ್ಲಿ ಹಾಗೂ ಕಚೇರಿಯಲ್ಲಿ ಲೆಕ್ಕಕ್ಕೆ ಸಿಗದೇ ಅಕ್ರಮವಾಗಿ ಸಂಗ್ರಹ ಮಾಡಿಕೊಂಡಿದ್ದ ಕಂತೆ ಕಂತೆ ಹಣ ವಶಪಡಿಸಿಕೊಂಡಿದ್ದಾರೆ.
ದಾಳಿಗೊಳಗಾದ ಫೈನಾನ್ಶಿಯರ್‌ಗಳಲ್ಲಿ ಕೆಲವರು ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಫಂಡ್ ಮಾಡಲು ಹಣ ಸಂಗ್ರಹ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ. ಇನ್ನು ಕೆಲವರು ನೆಪ ಮಾತ್ರಕ್ಕೆ ಫೈನಾನ್ಶಿಯರ್‌ಗಳಂತಿದ್ದು, ಅವರು ರಾಜಕಾರಣಿಗಳ ಬೇನಾಮಿ ವ್ಯವಹಾರ ನೋಡಿಕೊಳ್ಳುವವರು. ದಾಳಿ ವೇಳೆ ಪತ್ತೆಯಾದ ಕೆಲ ದಾಖಲೆಗಳು ಹಾಗೂ ಪೈನಾನ್ಶಿಯರ್‌ಗಳು ನಡೆಸಿರುವ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಯಿಂದ ಬೆಳಕಿಗೆ ಬಂದಿದೆ.
ರಾಜ್ಯ ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ನಡೆದ ದಾಳಿಯಲ್ಲಿ ಮೊದಲ ಬಾರಿಗೆ ಐಟಿ ಅಧಿಕಾರಿಗಳು ಇಷ್ಟು ದೊಡ್ಡ ಮಟ್ಟದಲ್ಲಿ 15 ಕೋಟಿ ನಗದು ಹಾಗೂ ಐದು ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದು, ಕೆಲ ಕಡತಗಳನ್ನು ವಶಕ್ಕೆ ಪಡೆದಿದ್ದಾರೆ. ಅದರ ಜೊತೆಯಲ್ಲಿ ಇನ್ನು ಮೂರು ದಿನ ಭಾರಿ ಪ್ರಮಾಣದಲ್ಲಿ ಅಭ್ಯರ್ಥಿಗಳು ಮತದಾರರ ಓಲೈಕೆಗೆ ಹಣದ ಹೊಳೆಯೇ ಹರಿಸುವ ಸಾಧ್ಯತೆಗಳಿರುವುದರಿಂದ ಐಟಿ ಅಧಿಕಾರಿಗಳು ಚುನಾವಣಾ ಅಭ್ಯರ್ಥಿಗಳು ಹಾಗೂ ಅವರ ಅತ್ಯಾಪ್ತರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ.
ಕಮ್ಮವಾರಿ ಸಂಘದ ಅಧ್ಯಕ್ಷರ ಮೇಲೆ ಐಟಿ ದಾಳಿ
ಈ ನಡುವೆ, ಬೆಂಗಳೂರಿನ ಕಮ್ಮವಾರಿ ಸಂಘದ ಅಧ್ಯಕ್ಷರಾದ ರಾಜಗೋಪಾಲ್ ನಾಯ್ಡು ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಸವನಗುಡಿ ಬಿಜೆಪಿ ನಾಯಕರ ಆಪ್ತರಾಗಿರುವ ರಾಜಗೋಪಾಲ್ ನಾಯ್ಡು ಅವರು ಚುನಾವಣೆ ಸಂದರ್ಭದಲ್ಲಿ ಜನರಿಗೆ ಹಂಚಲು ಹಣ ಸಂಗ್ರಹಿಸಿದ್ದಾರೆ ಎಂಬ ಮಾಹಿತಿ ಪಡೆದಿದ್ದ ಅಧಿಕಾರಿಗಳು ಶನಿವಾರ ಬೆಳಗ್ಗೆಯೇ ದಾಳಿ ನಡೆಸಿದರು.
9 ಮಂದಿ ಅಧಿಕಾರಿಗಳಿದ್ದ ತಂಡ ಎರಡು ಇನ್ನೋವಾ ಕಾರಿನಲ್ಲಿ ಬಂದು ಮನೆಗೆ ಲಗ್ಗೆ ಇಟ್ಟಿದೆ. ಸತತ ಒಂಬತ್ತು ಗಂಟೆಗಳಿಂದ ತಪಾಸಣೆ ನಡೆದಿದೆ.
ಇದನ್ನೂ ಓದಿ : Karnataka Election: ಜೆಡಿಎಸ್ ಅಭ್ಯರ್ಥಿ ಮನೆ ಮೇಲೆ ಐಟಿ ದಾಳಿ; ಕುತಂತ್ರದಿಂದ ಉತ್ಸಾಹ ಕುಗ್ಗಿಸಲಾಗದು ಎಂದು ಪಕ್ಷದ ಟಾಂಗ್