ಚಿಕ್ಕಮಗಳೂರು: ಕಾಫಿನಾಡಲ್ಲಿ ಸೋಮವಾರ (ಜ.೧೬) ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ (IT Raid) ನಡೆಸಿದ್ದು, ಕೆಪಿಸಿಸಿ ಕಿಸಾನ್ ಸೆಲ್ ರಾಜ್ಯ ಸಂಚಾಲಕ ಅಕ್ಮಲ್ ಅವರ ಮನೆಯಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ.
ನಗರದ ಷರಿಫ್ ಗಲ್ಲಿಯಲ್ಲಿರುವ ಅಕ್ಮಲ್ ಅವರ ನಿವಾಸಕ್ಕೆ ಐಟಿ ಅಧಿಕಾರಿಗಳು 8 ಕಾರಿನಲ್ಲಿ ಬಂದಿದ್ದಾರೆ. ಅಕ್ಮಲ್ ಒಡೆತನದ ಕಾಫಿ ಕ್ಯೂರಿಂಗ್ ಮೇಲೂ ದಾಳಿ ನಡೆಸಲಾಗಿದ್ದು, ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಮನೆ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಈ ಮೂಲಕ ಚಿಕ್ಕಮಗಳೂರಿನಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಇಬ್ಬರು ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ದಾಳಿಯಾದಂತೆ ಆಗಿದೆ. ಕಳೆದ ನವೆಂಬರ್ 17ರಂದು ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರ ಮನೆ ಮೇಲೂ ಐಟಿ ದಾಳಿಯಾಗಿತ್ತು. ಮದುವೆಗೆ ಹೋಗುವ ಸೋಗಿನಲ್ಲಿ 10ಕ್ಕೂ ಹೆಚ್ಚು ಕಾರಿನಲ್ಲಿ 50ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ಮಾಡಿದ್ದರು. ಇದು ಈಗ ಜಿಲ್ಲೆಯ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದೆ.
ಸೋಮವಾರ ಕೆಪಿಸಿಸಿ ಕಿಸಾನ್ ಸೆಲ್ ರಾಜ್ಯ ಸಂಚಾಲಕ ಅಕ್ಮಲ್ ಮನೆ ಮೇಲೆ ಐಟಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ಮಾಡಿದ್ದು, ಮನೆ, ಕಚೇರಿ, ಸಹೋದರನ ಮನೆ ಹಾಗೂ ಕಾಫಿ ಕ್ಯೂರಿಂಗ್‌ನಲ್ಲಿಯೂ ತಪಾಸಣೆ ನಡೆಸಲಾಗುತ್ತಿದೆ. ಪ್ರಸ್ತುತ ಅಕ್ಮಲ್ ಬೆಂಗಳೂರಿನಲ್ಲಿ ಇದ್ದು, ಅವರ ಅನುಪಸ್ಥಿತಿಯಲ್ಲಿ ಅವರ ಮನೆ-ಕಚೇರಿಯಲ್ಲಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಬಿಜೆಪಿಯಿಂದ ಸ್ಥೈರ್ಯ ಕುಗ್ಗಿಸುವ ಕೆಲಸ– ಕಾಂಗ್ರೆಸ್
ಚುನಾವಣೆ ಸಂದರ್ಭದಲ್ಲಿ ಹೀಗೆ ಮೇಲಿಂದ ಮೇಲೆ ಕಾಂಗ್ರೆಸ್ ಮುಖಂಡರ ಮೇಲೆ ಐಟಿ ದಾಳಿ ಮಾಡಿಸುತ್ತಿದ್ದು ಬಿಜೆಪಿಯು ಕಾಂಗ್ರೆಸ್ಸಿಗರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಐಟಿ ಅಧಿಕಾರಿಗಳು ಬಿಜೆಪಿಯ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಹಾಗೂ ಮುಖಂಡರ ಮನೆ ಮೇಲೆ ಈ ಹೊತ್ತಿನಲ್ಲಿ ಯಾವುದೇ ದಾಳಿ ನಡೆಯುವುದಿಲ್ಲ. ಕಾಂಗ್ರೆಸ್ ನಾಯಕರು ಹಾಗೂ ಮುಖಂಡರ ಮನೆ ಮೇಲೆ ಮಾತ್ರ ಅಧಿಕಾರಿಗಳು ದಾಳಿ ಮಾಡುತ್ತಿದ್ದಾರೆ ಎಂದು ಸರ್ಕಾರ ಹಾಗೂ ಐಟಿ ಅಧಿಕಾರಿಗಳ ವಿರುದ್ಧ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.
ಇದನ್ನೂ ಓದಿ | Santro Ravi Case | ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ ವರ್ಗ: ನ್ಯಾಯಾಂಗ ಬಂಧನ ಮುಂದುವರಿಕೆ