Site icon Vistara News

IT Raid : ಸಚಿವ ಶ್ರೀರಾಮುಲು, ಮಾಜಿ ಶಾಸಕ ಸುರೇಶ್ ಬಾಬು ಆಪ್ತರಿಗೆ ಐಟಿ ಶಾಕ್; 2 ದಿನದಿಂದ ಪರಿಶೀಲನೆ

IT Raid on bellary

ಬಳ್ಳಾರಿ: ಸಚಿವ ಶ್ರೀರಾಮುಲು ಹಾಗೂ ಮಾಜಿ ಶಾಸಕ ಸುರೇಶ್ ಬಾಬು ಆಪ್ತರೊಬ್ಬರ ಫ್ಯಾಕ್ಟರಿ, ಕಚೇರಿ ಹಾಗೂ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ (IT Raid) ನಡೆಸಿದ್ದಾರೆ. ಕಳೆದ ಎರಡು ದಿನಗಳಿಂದ ಖಾಸಗಿ ಹೋಟೆಲ್‌ನಲ್ಲಿ ತಂಗಿರುವ ಅಧಿಕಾರಿಗಳು, ಸದ್ದಿಲ್ಲದೆ ಪರಿಶೀಲನೆ ನಡೆಸುತ್ತಿದ್ದಾರೆ.

ಶ್ರೀರಾಮುಲು, ಸುರೇಶ್ ಬಾಬು ಆಪ್ತ, ಕೈಗಾರಿಕೋದ್ಯಮಿ ಕೈಲಾಸ್ ವ್ಯಾಸ್ ಒಡೆತನದ ಫ್ಯಾಕ್ಟರಿ, ಕಚೇರಿ ಹಾಗೂ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೆ, ಕೈಲಾಸ್ ವ್ಯಾಸ್ ಪಾಲುದಾರಿಕೆಯ ಕಂಪನಿಗಳ ಮೇಲೆಯೂ ದಾಳಿ ನಡೆಸಲಾಗಿದೆ.

IT Raid

ಬೆಂಗಳೂರು ಹಾಗೂ ಚೆನೈನಿಂದ ಹದಿನೈದು ಅಧಿಕಾರಿಗಳ ತಂಡವು ಬೆಂಗಳೂರು, ಬಳ್ಳಾರಿ ಮತ್ತು ಕೊಪ್ಪಳದಲ್ಲಿ ದಾಳಿ ನಡೆಸಿವೆ. ಬಳ್ಳಾರಿಯ ವಿದ್ಯಾನಗರದ ರಾಗಾಸ್ ಪೋರ್ಟ್ ಅಪಾರ್ಟ್ಮೆಂಟ್‌ನ ಎರಡು ಫ್ಲಾಟ್‌ನಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ದಾಖಲೆ ಪರಿಶೀಲನೆ ವೇಳೆ ಐಟಿ ಅಧಿಕಾರಿಗಳ ಕೈಗೆ ಮಹತ್ವದ ದಾಖಲೆಗಳು ಲಭ್ಯವಾಗಿವೆ ಎಂದು ಹೇಳಲಾಗಿದೆ. ಪ್ರಭಾವಿ ಸಚಿವರೊಂದಿಗೆ ಕೈಲಾಸ್ ವ್ಯಾಸ್ ಆಸ್ತಿ ಖರೀದಿ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಹರಿ ಇಸ್ಪಾತ್ ಫ್ಯಾಕ್ಟರಿ ಖರೀದಿಯ ಹಣದ ಮೂಲವನ್ನು ಅಧಿಕಾರಿಗಳು ಕೆದಕುತ್ತಿದ್ದಾರೆ ಎನ್ನಲಾಗಿದೆ. ಇದು ನೂರಾರು ಕೋಟಿ ಬೆಲೆ ಬಾಳುವ ಫ್ಯಾಕ್ಟರಿಯಾಗಿದ್ದರಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಕೊಪ್ಪಳದ ಸಿಮ್ಲಾ ಡಾಬ ಬಳಿಯ ವಾಷಿಂಗ್ ಪ್ಲಾಂಟ್, ಬಳ್ಳಾರಿಯ ವೆಂಕಟೇಶ್ವರ, ಶ್ರೀಹರಿ ಮತ್ತು ಪಿಜಿಎಂ ಪ್ಲಾಂಟ್‌ಗೆ ಸೇರಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ಕೈಗಾರಿಕೆಗಳು ತೆರಿಗೆ ವಂಚನೆ ಮಾಡಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ | Women Empowerment : ದುಡಿಯುವ ವರ್ಗ, ಮಹಿಳೆಯರಿಗೆ ಆರ್ಥಿಕ ಸಬಲತೆ; ಈ ಬಜೆಟ್‌ನಲ್ಲಿ ಘೋಷಣೆ: ಸಿಎಂ ಬೊಮ್ಮಾಯಿ

Exit mobile version