Site icon Vistara News

Suspicious Death | ತಬಸ್ಸುಮ್‌ಳನ್ನು ಆಸ್ಪತ್ರೆಗೆ ಸೇರಿಸಿದ್ದು ಅಪರಿಚಿತನಲ್ಲ, ಗೆಳೆಯ, ಯುವತಿ ಸಾವಿಗೆ ಹೊಸ ಟ್ವಿಸ್ಟ್‌

tabussam

ಬೆಳಗಾವಿ: ನಗರದಲ್ಲಿ 19 ವರ್ಷದ ಯುವತಿ ತಬಸ್ಸುಮ್‌ ಅನುಮಾನಾಸ್ಪದ ಸಾವು (Suspicious Death) ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಬೆಂಗಳೂರಿನಿಂದ ತಬ್ಬಸುಮ್‌ ಜತೆ ಬಂದು, ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಅಪರಿಚಿತನಲ್ಲ, ಬದಲಾಗಿ ಆಕೆಯ ಸ್ನೇಹಿತನೇ ದಾಖಲಿಸಿದ್ದಾನೆ ಎಂದು ತಿಳಿದುಬಂದಿದೆ. ಗಗನಸಖಿ ಆಗುವ ಕನಸು ಕಂಡು, ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದ ಯುವತಿಯ ಗೆಳೆಯನೇ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಅವರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಇದುವರೆಗೆ ಯುವತಿಯನ್ನು ಕರೆತಂದಿದ್ದು ಅಪರಚಿತ ಎಂದೇ ಹೇಳಲಾಗುತ್ತಿತ್ತು. ಆದರೆ, ಈಗ ಪ್ರಕರಣಕ್ಕೆ ತಿರುವು ಸಿಕ್ಕಿದೆ.

ಬೆಂಗಳೂರಿನ ಕಾಲ್‌ಸೆಂಟರ್‌‌ನಲ್ಲಿ ಕಳೆದ ತಿಂಗಳು ತಬಸ್ಸುಮ್ ಕೆಲಸಕ್ಕೆ ಸೇರಿದ್ದರು. ಅವರ ತಾಯಿಯೇ ಆಕೆಯನ್ನು ಬೆಂಗಳೂರಿಗೆ ಬಿಟ್ಟು ಬಂದಿದ್ದರು. ಆದರೆ, ಅಕ್ಟೋಬರ್‌ 6ರಂದು ಯುವತಿ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಅಕ್ಟೋಬರ್ 7ರಂದು ಗೋವಾದಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತ‌ನ ಭೇಟಿಗೆ ತೆರಳಿದ್ದ ತಬಸ್ಸುಮ್, ಅನಾರೋಗ್ಯದ ಹಿನ್ನೆಲೆಯಲ್ಲಿ ಗೋವಾ ಆಸ್ಪತ್ರೆಯಲ್ಲಿ ಚೆಕಪ್‌ ಮಾಡಿಸಿಕೊಂಡಿದ್ದರು.

ಅಕ್ಟೋಬರ್ 9ರಂದು ಪಣಜಿ ಬಸ್ ನಿಲ್ದಾಣದಲ್ಲಿ ಬಿದ್ದು ತಬಸ್ಸುಮ್ ತಲೆಗೆ ಬಲವಾದ ಗಾಯವಾಗಿತ್ತು. ಬಳಿಕ ಪಣಜಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆದಿದ್ದ ತಬಸ್ಸುಮ್, ಅ.11ರಂದು ಬೆಂಗಳೂರಿಗೆ ಬಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದರು. ಇದೇ ಅ.11ರ ರಾತ್ರಿ ತಬಸ್ಸುಮ್‌ಳನ್ನು ಬೆಂಗಳೂರಿನಿಂದ ಬೆಳಗಾವಿಗೆ ಆಕೆಯ ಸ್ನೇಹಿತ ಕರೆತಂದಿದ್ದ. ಜಿಲ್ಲಾಸ್ಪತ್ರೆಗೆ ದಾಖಲಿಸಿ, ಆಕೆಯ ಸಿಮ್‌ಕಾರ್ಡ್‌ ಜತೆಗೆ ಗೋವಾಗೆ ಮರಳಿದ್ದ ಎಂದು ತಿಳಿದುಬಂದಿದೆ.

ತಬಸ್ಸುಮ್‌ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾದ ಸುದ್ದಿ ತಿಳಿದ ಕುಟುಂಬಸ್ಥರು ಆಸ್ಪತ್ರೆಗೆ ದೌಡಾಯಿಸಿ, ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅದೇ ದಿನ ರಾತ್ರಿ ತಬಸ್ಸುಮ್ ನಂಬರ್‌ನಿಂದ ಆಕೆಯ ತಾಯಿಗೆ ಸ್ನೇಹಿತ ವಾಟ್ಸ್‌ಆ್ಯಪ್ ಮೆಸೇಜ್‌ ಮಾಡಿದ್ದ. “ತಬಸ್ಸುಮ್ ಳನ್ನು ಬಸ್‌ನಿಂದ ಇಳಿಸುವ ವೇಳೆ ಅವಳ ಮೊಬೈಲ್ ಒಡೆದು ಹೋಗಿದೆ. ನಿಮ್ಮ ನಂಬರ್ ನನ್ನ ಬಳಿ ಇರಲಿಲ್ಲ. ಹಾಗಾಗಿ ತಬಸ್ಸುಮ್ ಸಿಮ್ ನನ್ನ ಮೊಬೈಲ್‌ನಲ್ಲಿ ಹಾಕಿದ್ದೇನೆ. ತಬಸ್ಸುಮ್ ಫೋನ್ ಅವಳ ಚಿಕ್ಕ ಬ್ಯಾಗ್‌ನಲ್ಲಿದೆ, ಪೊಲೀಸ್ ಕಂಪ್ಲೆಂಟ್ ಆಗುತ್ತೆ ಎಂದು ಮರಳಿ ಬಂದೆ. ನಾನು ಅವರ ಸಿಮ್ ಮುರಿದು ಹಾಕುತ್ತಿದ್ದೇನೆ. ಬೇರೆ ಸಿಮ್ ತಗೆದುಕೊಂಡು ಬಿಡಿ. ನನಗೆ ತೊಂದರೆ ಕೊಡಬೇಡಿ” ಎಂದು ಸಂದೇಶ ಕಳುಹಿಸಿದ್ದ.

ಗುರುವಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ತಬಸ್ಸುಮ್‌ ಮೃತಪಟ್ಟಿದ್ದಾರೆ. ಮಾರ್ಕೆಟ್‌ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ಸಹ ದಾಖಲಾಗಿದೆ. ಅಲ್ಲದೆ, ಗೋವಾಗೆ ತೆರಳಿ ತಬಸ್ಸುಮ್ ಸ್ನೇಹಿತನ ವಶಕ್ಕೆ ಪಡೆದು, ಪೊಲೀಸರು ಬೆಳಗಾವಿಗೆ ಕರೆತಂದಿದ್ದಾರೆ. ಯುವತಿಯ ಗೆಳೆಯನನ್ನು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Suspicious death | ಗಗನಸಖಿ ಕನಸು ಹೊತ್ತ ಹುಡುಗಿ ನಿಗೂಢ ಸಾವು, ಬೆಂಗಳೂರಿಂದ ಬೆಳಗಾವಿಗೆ ಕರೆತಂದ ಯುವಕ ಯಾರು?

Exit mobile version