Site icon Vistara News

Gadag News: ಚಾಲಕನ ನಿರ್ಲಕ್ಷ್ಯವೇ ಬಸ್‌ನಿಂದ ಮಹಿಳೆ ಬಿದ್ದು ಗಾಯಗೊಳ್ಳಲು ಕಾರಣ; ಎಫ್‌ಐಆರ್‌ ದಾಖಲು

Gadag Traffic Police Station

ಗದಗ: ಸಾರಿಗೆ ಬಸ್‌ನಿಂದ ಮಹಿಳೆ ಬಿದ್ದು ಗಾಯಗೊಂಡ ಪ್ರಕರಣಕ್ಕೆ ಚಾಲಕ ಹಾಗೂ ನಿರ್ವಾಹಕನ ನಿರ್ಲಕ್ಷ್ಯವೇ ಕಾರಣ ಎಂದು ಮಹಿಳೆ ಸಂಬಂಧಿ ದೂರು ನೀಡಿದ ಹಿನ್ನೆಲೆಯಲ್ಲಿ ಗದಗ ಸಂಚಾರ ಪೊಲೀಸ್ ಠಾಣೆಯಲ್ಲಿ (Gadag News) ಎಫ್‌ಐಆರ್‌ ದಾಖಲಾಗಿದೆ.

ಸೋಮವಾರ ಗದಗದ ಹುಡ್ಕೋ ಕ್ರಾಸ್ ಬಳಿ ಬಸ್‌ನಿಂದ ಕೆಳಗೆ ಇಳಿಯುವಾಗ ಕವಿತಾ ಹೆಳವರ (35) ಎಂಬುವವರು ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಸದ್ಯ ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪರಿಸ್ಥಿತಿ ಚಿಂತಾಜನಕ‌ವಾಗಿದೆ.

ಮಹಿಳೆ‌ ಬಸ್‌ನಿಂದ ಇಳಿಯುತ್ತೇನೆ ಎಂದು ಹೇಳಿದಾಗ‌ ಕಂಡಕ್ಟರ್ ಸೀಟಿ‌ ಹೊಡೆದು, ಬಾಗಿಲು ತೆರೆದಿದ್ದ. ಆದರೆ, ಬಸ್ ಡ್ರೈವರ್ ಮಾತ್ರ ಬಸ್ ನಿಲ್ಲಿಸಿದಂತೆ ವೇಗ ಕಡಿಮೆ ಮಾಡಿ ಮತ್ತೆ ಜೋರಾಗಿ ಮುಂದಕ್ಕೆ ಚಲಾಯಿಸಿದ್ದಾರೆ. ಇದರಿಂದ ಮಹಿಳೆ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಸ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಮಹಿಳೆ ಕುಟುಂಬಸ್ಥರು ಬಡವರಾಗಿದ್ದಾರೆ. ಹೀಗಾಗಿ ಚಿಕಿತ್ಸೆಗಾಗಿ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ | Murder Case : ವಿದ್ಯಾರ್ಥಿಗೆ ಪೆಟ್ರೋಲ್‌ ಸುರಿದು ಬೆಂಕಿ; ರಕ್ತ ಸಂಬಂಧಿಗಳ ಕ್ರೌರ್ಯಕ್ಕೆ ಪ್ರಾಣ ಬಿಟ್ಟ

ಬೈಕ್‌ಗೆ ಡಿಕ್ಕಿ ಹೊಡೆದ ಟ್ರ್ಯಾಕ್ಟರ್‌; ಪ್ರಾಣ ಬಿಟ್ಟ ಸವಾರ

ಯಾದಗಿರಿ: ಯಾದಗಿರಿ ಜಿಲ್ಲೆಯ (yadagiri news) ಸುರಪುರ ತಾಲೂಕಿನ ಬಾದ್ಯಾಪುರ ಗ್ರಾಮದ ಬಳಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಬೈಕ್‌ಗೆ ಡಿಕ್ಕಿ (Road Accident) ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಹಾರಿ ಬಿದ್ದ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಶಿವರಾಜ (35) ಮೃತ ದುರ್ದೈವಿ.

ಶಿವರಾಜ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಚಾಲಕರಾಗಿದ್ದು, ಯಾದಗಿರಿ ಡಿಪೋದಲ್ಲಿ ಕೆಲಸ (Bus Driver) ಮಾಡುತ್ತಿದ್ದರು. ಬಾದ್ಯಾಪುರನಿಂದ ಸುರಪುರಗೆ ಕೆಲಸಕ್ಕೆ ಹಾಜರಾಗಲು ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಸ್ಥಳಕ್ಕೆ ಸುರಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Bike wheeling : ವೀಲಿಂಗ್‌ ಹುಚ್ಚಾಟಕ್ಕೆ ಮೈಸೂರಲ್ಲಿ ಬ್ರೇಕ್;‌ ನೋಡಿ Before – After!

ಕೃಷಿ ಹೊಂಡದಲ್ಲಿ ಯುವಕನ ಶವ ಪತ್ತೆ

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿಯ ಕೃಷಿ ಹೊಂಡದಲ್ಲಿ ಯುವಕನ ಶವ ಪತ್ತೆ ಆಗಿದೆ. ಚಲ್ದಿಗಾನಹಳ್ಳಿ ಗ್ರಾಮದ ರಾಕೇಶ್ (17) ಮೃತ ಎಂದು ತಿಳಿದು ಬಂದಿದೆ. ರಾಕೇಶ್‌ ಚಿಂತಾಮಣಿ ಕಾಲೇಜಿನಲ್ಲಿ ಡಿಪ್ಲೊಮಾ ಓದುತ್ತಿದ್ದ. ಯುವಕನ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಶ್ರೀನಿವಾಸಪುರ ಪಟ್ಟಣ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Exit mobile version