ಬೆಳಗಾವಿ: ಇಟಗಿ-ಸಾಸಲವಾಡ ಏತ ನೀರಾವರಿ ಯೋಜನೆಯ ಬಾಕಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM D.K. Shivakumar) ಅವರ ಪರವಾಗಿ ಸಚಿವ ರಾಮಲಿಂಗಾ ರೆಡ್ಡಿ, ವಿಧಾನಸಭೆಗೆ ಮಂಗಳವಾರ ತಿಳಿಸಿದರು.
ಪ್ರಶ್ನೋತ್ತರ ವೇಳೆ ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಅವರು, “ಇಟಗಿ- ಸಾಸಲವಾಡ ಏತ ನೀರಾವರಿ ಯೋಜನೆ ಕಳೆದ 3 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಕೆರೆಗಳಿಗೆ ನೀರು ತುಂಬುವ ಕೆಲಸ ಆಗುತ್ತಿಲ್ಲ, ಯಾವಾಗ ಪೂರೈಸುತ್ತೀರಿ ” ಎಂದು ಕೇಳಿದ ಪ್ರಶ್ನೆಗೆ ಜಲಸಂಪನ್ಮೂಲ ಸಚಿವರ ಪರವಾಗಿ ರಾಮಲಿಂಗಾರೆಡ್ಡಿ ಉತ್ತರಿಸಿದರು.
ಶಿರಹಟ್ಟಿ, ಮುಂಡರಗಿ ಹಾಗೂ ಹಾವೇರಿ ತಾಲೂಕುಗಳ 1983 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲು 2011 ರಲ್ಲಿ ಇಟಗಿ ಸಾಸಲವಾಡ ನೀರಾವರಿ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗಿದ್ದು, ಒಟ್ಟು 29.88 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಇದನ್ನೂ ಓದಿ: Money Guide: ಆನ್‌ಲೈನ್ ಸಾಲದ ವಂಚನೆಯ ಕೂಪಕ್ಕೆ ಬೀಳದಿರಲು ಏನು ಮಾಡಬೇಕು?
2015 ರಲ್ಲಿ ಇದರ ಉಸ್ತುವಾರಿ ಮತ್ತು ನಿರ್ವಹಣೆಯನ್ನು ಮುನಿರಾಬಾದ್ ನೀರಾವರಿ ವಲಯಕ್ಕೆ ಹಸ್ತಾಂತರಿಸಲಾಗಿತ್ತು. ನಿರ್ವಹಣೆ ಕಾರ್ಯ ಗುತ್ತಿಗೆ ಚಾಲ್ತಿಯಲ್ಲಿದ್ದ ಕಾರಣ ಹಸ್ತಾಂತರ ಪ್ರಕ್ರಿಯೆ ಸಂಪೂರ್ಣವಾಗಿಲ್ಲ ಎಂದ ಅವರು, ತುಂಗಾ ಮೇಲ್ದಂಡೆ ಯೋಜನೆಗೆ ಶಿವಮೊಗ್ಗ ವಲಯದ ರಾಣೆಬೆನ್ನೂರು ಭಾಗಕ್ಕೆ 2019-20 ರಲ್ಲಿ ನೀರು ಹರಿಸಲಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: BCCI : ಬಿಸಿಸಿಐಗೆ ದೊಡ್ಡ ಮೊತ್ತ ಬಾಕಿ, ಬೈಜೂಸ್ಗೆ ಮತ್ತೊಂದು ಸಂಕಷ್ಟ
2023 ರ ಆಗಸ್ಟ್ 14 ರಂದು ಮುನಿರಾಬಾದ್ ನೀರಾವರಿ ಕೇಂದ್ರಕ್ಕೆ ಮತ್ತೆ ಹಸ್ತಾಂತರಗೊಂಡಿದೆ. ಪ್ರಸ್ತುತ ಸ್ಥಳ ಮತ್ತು ಲಿಫ್ಟ್ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಪಂಪ್ ದುರಸ್ತಿ, ವಿದ್ಯುತ್ ಸಂಪರ್ಕ, ಹೂಳು ತುಂಬಿರುವ, ಕಾಲುವೆ ಜಂಗಲ್ ಮುಂತಾದ ನ್ಯೂನ್ಯತೆಗಳು ಕಂಡಿಬಂದಿದೆ. ಇದರ ಪುನಶ್ಚೇತನಕ್ಕೆ 5 ಕೋಟಿ ರೂ ವೆಚ್ಚವಾಗಲಿದೆ. ಇದಕ್ಕೆ ಅನುಮೋದನೆ ಪಡೆದು ಶೀಘ್ರವೇ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.