ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮಾರ್ಚ್ 29ರಿಂದ ನೀತಿ ಸಂಹಿತೆ ಜಾರಿಗೊಳಿಸಿದೆ. ಹೀಗಾಗಿ ಚುನಾವಣಾ (Karnataka Election 2023) ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ರಾಜ್ಯದಲ್ಲಿ ಕಳೆದ 6 ದಿನಗಳಲ್ಲಿ ಚುನಾವಣಾಧಿಕಾರಿಗಳು, ಪೊಲೀಸರು ಹಾಗೂ ಐಟಿ ಟೀಂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಗದು ಸೇರಿದಂತೆ ಬರೋಬ್ಬರಿ 47 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮೇ 10ಕ್ಕೆ ದಿನಾಂಕ ನಿಗದಿಯಾಗಿ ನೀತಿ ಸಂಹಿತೆಯೂ ಜಾರಿಯಾಗಿದೆ. ಹೀಗಾಗಿ ಅಭ್ಯರ್ಥಿಗಳು ಮತದಾರರ ಓಲೈಕೆಗೆ ನಾನಾ ರೀತಿಯ ಆಮಿಷೆಗಳನ್ನು ತೋರುತ್ತಿದ್ದಾರೆ. ಇದರಿಂದ ಉಡುಗೊರೆಗಳ ಮಹಾಪೂರವೇ ಹರಿಯುತ್ತದೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೂ ಮುನ್ನವೇ ಚುನಾವಣಾ ಅಕ್ರಮಗಳ ತಡೆಗೆ ಚುನಾವಣಾ ಆಯೋಗ ಸೂಚಿಸಿತ್ತು.
ನೀತಿ ಸಂಹಿತೆ ಮೊದಲೇ 10 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು, ನೀತಿ ಸಂಹಿತೆ ಜಾರಿಯಾದ 6 ದಿನಗಳಲ್ಲಿ ನಗದು, ಡ್ರಗ್ಸ್, ಚಿನ್ನ ಸೇರಿದಂತೆ 47 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾ.29ರಿಂದ ಚುನಾವಣಾ ನೀತಿ ಸಂಹಿತೆ ಜಾರಿ ಮಾಡಿದಾಗಿನಿಂದ ಫ್ಲೈಯಿಂಗ್ ಸ್ಕ್ವಾಡ್‌ಗಳು, ಎಸ್‌ಎಸ್‌ಟಿಗಳು, ಪೊಲೀಸ್ ಮತ್ತು ಐಟಿ ಅಧಿಕಾರಿಗಳು ನಡೆಸಿರುವ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿರುವ ವಸ್ತುಗಳ ಮಾಹಿತಿ ಇಲ್ಲಿದೆ.
- ದಾಖಲೆಗಳಿಲ್ಲದ 12,82,94,000 ರೂಪಾಯಿ ನಗದು ವಶ
- 16 ಕೋಟಿ ಮೌಲ್ಯದ 2,78,798 ಲೀಟರ್ ಮದ್ಯ ವಶ
- 41 ಲಕ್ಷ ಮೌಲ್ಯದ 79.44 ಕೆ.ಜಿ. ಮಾದಕ ವಸ್ತುಗಳ ವಶ
- 6 ಕೋಟಿ 72 ಲಕ್ಷ ಮೌಲ್ಯದ 13. 575 ಕೆ.ಜಿ ಚಿನ್ನ ವಶ
- 63 ಲಕ್ಷ 98 ಸಾವಿರ ಮೌಲ್ಯದ 88.763 ಕೆಜಿ ಬೆಳ್ಳಿ ವಶ
- ಕುಕ್ಕರ್, ಸೀರೆ, ಹೆಲ್ಮೆಟ್ ಹಾಗೂ ಕ್ರಿಕೆಟ್ ಕಿಟ್ಗಳು ಸೇರಿ 10 ಕೋಟಿ ರೂಪಾಯಿ ಮೌಲ್ಯದ ಅಧಿಕ ವಸ್ತುಗಳು
ವಿವಿಧ ಠಾಣೆಗಳಲ್ಲಿ 316 ಎಫ್‌ಐಆರ್
ವಿಶೇಷ ಕಾರ್ಯಾಚರಣೆಯಲ್ಲಿ ಪತ್ತೆಯಾದ ನಗದು, ಮದ್ಯ, ಡ್ರಗ್ಸ್ ವಶಪಡಿಸಿಕೊಂಡ ಬಗ್ಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ 316 ಎಫ್‌ಐಆರ್ ದಾಖಲಾಗಿವೆ. ಉಳಿದಂತೆ ಅಪರಾಧ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯಾದ್ಯಂತ 31,486 ಗನ್‌ಗಳನ್ನು ಠಾಣೆಗಳಲ್ಲಿ ಡೆಪಾಸಿಟ್ ಮಾಡಿಸಿಕೊಳ್ಳಲಾಗಿದ್ದು, 10 ಗನ್‌ಗಳನ್ನು ಮಾಲೀಕರು ಠೇವಣಿ ಮಾಡಿಲ್ಲ. ಅದರಲ್ಲಿ ಲೈಸೆನ್ಸ್ ಉಲ್ಲಂಘನೆ ಮಾಡಿದ 7 ಗನ್ ಲೈಸೆನ್ಸ್‌ಗಳನ್ನು ರದ್ದುಗೊಳಿಸಲಾಗಿದೆ.
ಒಟ್ಟಾರೆ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾದ 6 ದಿನಗಳಲ್ಲಿ ರಾಜ್ಯಾದ್ಯಂತ ನಡೆದ ಸರ್ಚಿಂಗ್ ಕಾರ್ಯಾಚರಣೆ ಚುನಾವಣಾ ಪ್ಲೈಯಿಂಗ್ ಸ್ಕ್ವಾಡ್, ಪೊಲೀಸರು, ಆದಾಯ ತೆರಿಗೆ ಅಧಿಕಾರಿಗಳು ಬರೋಬ್ಬರಿ ನಗದು, ವಸ್ತು, ಮದ್ಯ, ಮಾದಕ ದ್ರವ್ಯ ಸೇರಿದಂತೆ 47 ಕೋಟಿ 43 ಲಕ್ಷ 85 ಸಾವಿರ ಮೌಲ್ಯದ ವಸ್ತುಗಳ ವಶಪಡಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನೆಷ್ಟು ಮೌಲ್ಯದ ವಸ್ತುಗಳು ಜಪ್ತಿಯಾಗುತ್ತವೋ ನೋಡಬೇಕಿದೆ.