ಯಲ್ಲಾಪುರ: ಬರಿಗಾಲ ಸಂತನೋರ್ವ ವಿಧಾನಸೌಧದ ಮೆಟ್ಟಿಲೇರುವುದು ಸಾಮಾನ್ಯ ಸಂಗತಿಯಲ್ಲ. ಸಾಮಾನ್ಯ ವ್ಯಕ್ತಿಯ ವ್ಯಕ್ತಿತ್ವವೇ ಆತನಿಗೆ ಜನಮನ್ನಣೆ ನೀಡಲು ಸಾಧ್ಯ ಎಂಬುದಕ್ಕೆ ಗುರುರಾಜ್ ಗಂಟಿಹೊಳೆ 9Gururaj Gantihole) ಅವರು ಸಾಕ್ಷಿಯಾಗಿದ್ದಾರೆ ಎಂದು ಪಂಚಾಯತ್ ರಾಜ್ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ ಹೇಳಿದರು.
ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ನಡೆದ ಬೈಂದೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಗುರುರಾಜ ಗಂಟಿಹೊಳೆ ಅವರ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದ ಅವರು, ಕೇವಲ ಸಜ್ಜನಿಕೆ ಹಾಗೂ ದೇಶಕ್ಕಾಗಿ ಸಮರ್ಪಣಾ ಭಾವ ಅವರ ಗೆಲುವಿಗೆ ಕಾರಣವಾಗಿದೆ. ಶಾಸಕರಾಗಿ ಕಾರ್ಯ ನಿರ್ವಹಿಸುವುದು ಸುಲಭದ ವಿಷಯವಲ್ಲ. ಒಳ್ಳೆಯ ಶಾಸಕನಿಗೆ ಆಡಳಿತ ಪಕ್ಷ ವಿರೋಧ ಪಕ್ಷ ಎನ್ನುವುದು ಮುಖ್ಯವಾಗುವುದಿಲ್ಲ. ಅಂತಹ ದಾರಿಯಲ್ಲಿ ಗುರುರಾಜ ಅವರು ಸಾಗುತ್ತಾರೆ ಎಂಬ ಅಚಲ ನಂಬಿಕೆಯಿದೆ ಎಂದು ತಿಳಿಸಿದರು.
ಇದನ್ನೂ ಓದಿ | Savarkar Jayanti: ಭಾರತೀಯರನ್ನು ಸ್ವಸ್ವರೂಪದ ಅರಿವಿನೆಡೆಗೆ ನಡೆಸಿದ ವೀರ ಸಾವರ್ಕರ್
ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ರಾಜಕೀಯ ಎಂಬುದು ವಿಚಿತ್ರವಾದ ಜಾಗ. ಕೆಲವೊಮ್ಮೆ ಸರಿಯಲ್ಲೂ ತಪ್ಪನ್ನು ಕಾಣಬೇಕು, ತಪ್ಪನ್ನೂ ಸರಿ ಎನ್ನಬೇಕಾಗುತ್ತದೆ. ಹಾಗಾಗಿ ಅದರಿಂದ ದೂರವಿದ್ದ ನನ್ನನ್ನು ಪುನಃ ರಾಜಕೀಯಕ್ಕೆ ಕರೆ ತಂದು ಜವಾಬ್ದಾರಿ ನೀಡಿದ್ದಾರೆ ಎಂದು ಹೇಳಿದರು.
ಚುನಾವಣೆ ಎಂಬ ಯುದ್ಧದಲ್ಲಿ ಸೋಲುವ ಕುದುರೆಗೆ ಬೆಂಬಲ ನೀಡುವವರಿಲ್ಲದ ಸಂದರ್ಭದಲ್ಲಿ ನನ್ನವರೆಂಬವರು ನೀಡಿದ ಬೆಂಬಲ ನನ್ನ ಗೆಲುವಿಗೆ ಕಾರಣವಾಗಿದೆ. ಹರಿಪ್ರಕಾಶ್ ಕೋಣೆಮನೆ ಅವರು ನನಗೆ ರಾಮನಂತೆ, ನಾನು ಹನುಮನಂತೆ ಕಾರ್ಯ ನಿರ್ವಹಿಸುತ್ತಾ ಜೀವನದ ಒಂದು ದಾರಿಯಲ್ಲಿ ಸಾಗುತ್ತಿದ್ದೇನೆ. ಯಲ್ಲಾಪುರ ನನಗೆ ಅಪಾರವಾದ ಪ್ರೀತಿ ನೀಡಿದೆ. ಅವಕಾಶವಿದ್ದಲ್ಲಿ ಮತ್ತೊಮ್ಮೆ ಯಲ್ಲಾಪುರಕ್ಕೆ ಬಂದು ಇಲ್ಲಿಯೇ ಕೆಲಸ ಮಾಡಲು ಇಚ್ಛಿಸುತ್ತೇನೆ ಎಂದರು.
ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ವಿಸ್ತಾರ ನ್ಯೂಸ್ ಚಾನೆಲ್ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರು ಮಾತನಾಡಿ, ಗುರೂಜಿ ಅವರು ಸಂಸ್ಥೆಗಾಗಿ ಮಾಡಿದ ಕಾರ್ಯಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅವರ ಗುಣದ ಮೂಲಕ ಶಾಸಕರಾಗಿ ಯಶಸ್ಸನ್ನು ಸಾಧಿಸಲಿದ್ದಾರೆ. ಅಧಿಕಾರ ಎಂಬುದು ಪಾಚಿ ಕಟ್ಟಿದ ಬಚ್ಚಲಮನೆ ಇದ್ದಂತೆ. ಅದರಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ತಪ್ಪಿದ್ದಲ್ಲಿ ಜಾರಿ ಬೀಳುವ ಸಾಧ್ಯತೆ ಇರುತ್ತದೆ ಎಂಬ ವಾಜಪೇಯಿ ಅವರ ಮಾತನ್ನು ಗುರೂಜಿ ಅವರು ನೆನಪಿನಲ್ಲಿಟ್ಟುಕೊಂಡು ಸಾಗಬೇಕು. ಅಧಿಕಾರದ ವ್ಯಾಮೋಹವನ್ನು ತೊರೆದು, ಮುಂದಿನ ದಿನಗಳಲ್ಲಿ ಯುವ ಪೀಳಿಗೆಗೆ ದಾರಿ ಮಾಡಿಕೊಡುವ ಮೂಲಕ ಮಾದರಿಯಾಗಿ ಎಂದು ಸಲಹೆ ನೀಡಿದರು.
ಸಂಸ್ಥೆಯ ನಿರ್ದೇಶಕ ಶ್ರೀನಿವಾಸ ಹೆಬ್ಬಾರ್ ಅವರು ಮಾತನಾಡಿ, ನೀವು ಯಾವುದೇ ಪಕ್ಷದಿಂದ ಆಯ್ಕೆಯಾಗಿದ್ದರೂ ಎಲ್ಲಾ ಜನರ ಶಾಸಕರಾಗಿ ಕಾರ್ಯ ನಿರ್ವಹಿಸಬೇಕು. ಅಂದಾಗ ಮಾತ್ರ ಮತ್ತೊಮ್ಮೆ ಜನ ನಿಮ್ಮನ್ನು ಆಯ್ಕೆ ಮಾಡುತ್ತಾರೆ. ಬೆಟ್ಟದಷ್ಟು ಸವಾಲುಗಳು ನಿಮ್ಮ ಮುಂದೆ ಎದುರಾಗಲಿದೆ. ಅವುಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ನಿಮ್ಮಲ್ಲಿದೆ. ಜನರಿಗಾಗಿ ಕಾರ್ಯ ನಿರ್ವಹಿಸಿ ಎಂದರು.
ಹೈಕೋರ್ಟ್ ನ್ಯಾಯವಾದಿ ನಾರಾಯಣ ಯಾಜಿ ಅವರು ಮಾತನಾಡಿ, ಗುರುರಾಜ ಗಂಟಿಹೊಳೆ ಅವರನ್ನು ಹೊಗಳುವುದು ಮನೆ ಮಗನನ್ನು ಹೊಗಳಿದಂತೆ. ಸರಳತೆ, ಸಜ್ಜನಿಕೆ ಅವರ ವ್ಯಕ್ತಿತ್ವವಾಗಿದೆ. ಇದೇ ಅವರಿಗೆ ಆಡಳಿತಾವಧಿಯಲ್ಲಿ ದಾರಿ ದೀಪವಾಗಿ ಇರಲಿ. ಅವರ ಆದರ್ಶಗಳು ಇನ್ನಿತರ ಶಾಸಕರಿಗೆ ಮಾದರಿಯಾಗಲಿ ಎಂದರು.
ಇದೇ ಸಂದರ್ಭದಲ್ಲಿ ಗುರುರಾಜ ಗಂಟಿಹೊಳೆ ಅವರನ್ನು ಶಿಕ್ಷಣ ಸಂಸ್ಥೆಯ ವತಿಯಿಂದ ಪ್ರಮುಖರು, ಅಭಿಮಾನಿಗಳು ಸನ್ಮಾನಿಸಿದರು.
ಇದನ್ನೂ ಓದಿ | ತರುಣ ಪದ ಅಂಕಣ: ನಮ್ಮ ಗಡಿ ಕಾಯುವ ಮೊದಲ ಕಾವಲುಗಾರರ ಕಡೆ ಇರಲಿ ನಮ್ಮ ಕಾಳಜಿ
ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾವಂಕರ್, ನಿವೃತ್ತ ಪ್ರಾಂಶಪಾಲರಾದ ಬೀರಣ್ಣ ನಾಯಕ ಮೊಗಟಾ, ವಿಘ್ನೇಶ್ವರ ಗಾವಂಕರ್ ಮತ್ತಿತರರಿದ್ದರು. ಕುಮಾರಿ ದೀಕ್ಷಾ ಪ್ರಾರ್ಥಿಸಿದಳು. ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ಸ್ವಾಗತಿಸಿದರು. ಪ್ರಾಚಾರ್ಯರಾದ ಡಿ.ಕೆ. ಗಾಂವ್ಕರ್ ನಿರೂಪಿಸಿದರು. ಕೊನೆಯಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮುಕ್ತಾ ಶಂಕರ ವಂದಿಸಿದರು.