ನಾಗಮಂಗಲ : ಬಸ್ ಪ್ರಯಾಣಿಕೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಹಲ್ಲೆಗೆ ಯತ್ನಿಸಿದ ಆರೋಪದಡಿ ಚಿತ್ರನಟ ಜೈಜಗದೀಶ್ ವಿರುದ್ಧ ನಾಗಮಂಗಲ ತಾಲೂಕಿನ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಈ ಪ್ರಕರಣ ಸಂಬಂಧ ನಟ ಜೈಗದೀಶ್ ಭಾನುವಾರ ಬೆಳ್ಳೂರು ಪೊಲೀಸ್ ಠಾಣೆಗೆ ಹಾಜರಾಗಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ರಾಜಿ ಸಂಧಾನ ಮಾಡಿಕೊಳ್ಳುವ ಮೂಲಕ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಂಡಿದ್ದಾರೆ.
ಜೂನ್ 5 ರಂದು ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನಲ್ಲಿಗೆರೆ ಟೋಲ್ ಬಳಿ ಈ ಘಟನೆ ನಡೆದಿದ್ದು, ಜಯರಾಮೇಗೌಡ ಎಂಬುವವರು ಬಸ್ಸಿನಿಂದ ಕೆಳಕ್ಕೆ ಇಳಿಯುತ್ತಿರುವ ಸಂದರ್ಭದಲ್ಲಿ ಹಿಂದಿನಿಂದ ಜೈಜಗದೀಶ್ ಅವರ ಕಾರು ಬಂದಿದೆ. ಈ ವೇಳೆ ಜಯರಾಮೇಗೌಡರಿಗೆ ಬಸ್ಸಿನಿಂದ ಯಾಕೆ ಬಾಟಲಿ ಬಿಸಾಡುತ್ತಿಯಾ ಎಂದು ಪ್ರಶ್ನಿಸಿ , ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ ಹಲ್ಲೆ ನಡೆಸಿದ್ದರು.
ಇದನ್ನು ಓದಿ | ಹಿರಿಯ ನಟ ಜೈ ಜಗದೀಶ್ ವಿರುದ್ಧ ಹಲ್ಲೆ ಆರೋಪ
ಇದರಿಂದ ಬೆಸೆತ್ತ ಜಯರಾಮೇಗೌಡ ನಟ ಜೈಜಗದೀಶ್ ವಿರುದ್ಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತಾನು ಮಾಡದ ತಪ್ಪಿಗೆ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಠಾಣೆಗೆ ಭಾನುವಾರ ಆಗಮಿಸಿದ ನಟ ಜೈಗದೀಶ್ ಘಟನೆಗೆ ಸಂಬಂಧಿಸಿದಂತೆ ಕ್ಷಮೆ ಕೇಳಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು, ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.