ಬೆಂಗಳೂರು: ಜೈನ್ ಕಾಲೇಜಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ಗೆ ಅಪಮಾನ ಪ್ರಕರಣ ವಿರೋಧಿಸಿ ನಗರ ಸೇರಿ ರಾಜ್ಯದ ವಿವಿಧೆಡೆ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ವಿಶ್ವಜ್ಞಾನಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಸ್ಕಿಟ್ ಪ್ರದರ್ಶನ ಮಾಡಿದ ಲಾಲ್‌ಬಾಗ್ ರಸ್ತೆಯ ಜೈನ್ ಕಾಲೇಜು (Jain College) ವಿದ್ಯಾರ್ಥಿಗಳು, ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆ ಹಾಗೂ ದಲಿತ ಸಂಘಟನೆಗಳು ಹೋರಾಟ ನಡೆಸಿದವು.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದಿಂದ ಅನಿರ್ಧಿಷ್ಟಾವಧಿ ಸ್ವಯಂ ಪ್ರೇರಿತ ಬೆಂಗಳೂರು ವಿವಿ ಬಂದ್‌ಗೆ ಕರೆ ನೀಡಲಾಗಿತ್ತು. ನೂರಾರು ವಿದ್ಯಾರ್ಥಿಗಳು ಪ್ರತಿಭಟನಾ ಜಾಥಾ ನಡೆಸಿ, ಜೈನ್ ಕಾಲೇಜು ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಅಂಬೇಡ್ಕರ್ ಬಗ್ಗೆ ಸ್ಕಿಟ್ ಪ್ರದರ್ಶಿಸಿ ಅವಮಾನ ಮಾಡಿರುವ ಹಿನ್ನೆಲೆಯಲ್ಲಿ ಜೈನ್ ಡೀಮ್ಡ್ ವಿವಿ ಆಡಳಿತ ಮಂಡಳಿ, ನಾಟಕದ ನಿರ್ದೇಶಕ ಹಾಗೂ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ಹಕ್ಕೊತ್ತಾಯಗಳು
- ಜೈನ್ ಡೀಮ್ಡ್ ವಿವಿ ಸ್ಥಾನಮಾನವನ್ನು ರದ್ದುಗೊಳಿಸಬೇಕು.
- ಸ್ಕಿಟ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ ಜೈನ್ ಕಾಲೇಜಿನ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಸ್ಕಿಟ್ ನಿರ್ದೇಶಕ ಹಾಗೂ ಪಾತ್ರಧಾರಿಗಳ ವಿರುದ್ಧ ದೇಶದಾದ್ಯಂತ ದಾಖಲಾಗಿರುವ ವಿವಿಧ ದೂರಿನನ್ವಯ ಕಾನೂನು ಕ್ರಮ ಜರುಗಿಸಬೇಕು.
- ಘಟನೆಯನ್ನು ಆಧರಿಸಿ ಡಾ.ಬಿ.ಆರ್. ಅಂಬೇಡ್ಕರ್, ಭಾರತ ಸಂವಿಧಾನ, ರಾಷ್ಟ್ರಧ್ವಜ ಹಾಗೂ ಯಾವುದೇ ರಾಷ್ಟ್ರ ನಾಯಕರ ವಿರುದ್ಧ ಅವಮಾನಕರ, ಅಪಹಾಸ್ಯದಿಂದ ಕೂಡಿರುವ ಯಾವುದೇ ನಾಟಕ, ಬಿತ್ತಿಚಿತ್ರ, ಅಣಕು ಚಿತ್ರ, ಚಲನಚಿತ್ರ ಸೇರಿ ಸಾಮಾಜಿಕ ಜಾಲತಾಣಗಳನ್ನು ಒಳಗೊಂಡಂತೆ ಯಾವುದೇ ಮಾಧ್ಯಮ ಮುಖೇನ ಕಾರ್ಯಕ್ರಮಗಳನ್ನು ರೂಪಿಸಿದಲ್ಲಿ ಐಪಿಸಿ 124 (ಎ) ಅಡಿಯಲ್ಲಿ ದೂರು ದಾಖಲಿಸಿ ಕಾನೂನು ಕ್ರಮ ಜರುಗಿಸುವ ಬಗ್ಗೆ ರಾಜ್ಯ ಸರ್ಕಾರ ರಾಜ್ಯಪತ್ರ (ಗೆಜೆಟ್) ಹೊರಡಿಸಬೇಕು.
ಕನಕಪುರ ಜೈನ್ ಕಾಲೇಜು ಮುಂದೆ ದಲಿತ ಸಂಘಟನೆಗಳ ಪ್ರತಿಭಟನೆ
ರಾಮನಗರ: ಅಂಬೇಡ್ಕರ್‌ಗೆ ಅಪಮಾನ ಪ್ರಕರಣ ಖಂಡಿಸಿ ಜಿಲ್ಲೆಯ ಕನಕಪುರ ಜೈನ್ ಕಾಲೇಜು ಮುಂದೆ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಸ್ಕಿಟ್ ಪ್ರದರ್ಶಿಸಿ ಅಂಬೇಡ್ಕರ್‌ಗೆ ಅವಮಾನ ಮಾಡಿದವರ ವಿರುದ್ಧ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದನ್ನೂ ಓದಿ | ಬಿಎಂಟಿಸಿ ಬಸ್ ಧಾವಂತಕ್ಕೆ ಪಾದಚಾರಿ ಬಲಿ, ಐದು ಮಹಡಿಗಳ ಕಟ್ಟಡದಿಂದ ಧುಮುಕಿ ಮಾನಸಿಕ ಅಸ್ವಸ್ಥ ಸಾವು
ಬೆಂಗಳೂರಿನ ಲಾಲ್‌ಬಾಗ್ ರಸ್ತೆಯ ಜೈನ್ ಕಾಲೇಜಿನಲ್ಲಿ ಜಾತಿ ತಾರತಮ್ಯ ಕುರಿತು ಕಿರು ನಾಟಕ ಪ್ರದರ್ಶನ ಮಾಡಿ ದಲಿತ ಸಮುದಾಯ ಹಾಗೂ ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ. ಕಿರು ನಾಟಕ ಮಾಡಿದವರ ಮೇಲೆ ಪ್ರಕರಣ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳು ಆಗ್ರಹಿಸಿದವು.