ಬೆಂಗಳೂರು: ಈಗಿನ ಕಾಲದಲ್ಲಿ ತಂದೆಯಿಂದ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಬಂದರೆ ಯಾರು ಬೇಡವೆನ್ನುತ್ತಾರೆ ಹೇಳಿ? ಸಾಕಷ್ಟು ಹಣವಿದ್ದರೆ ಯಾವುದೇ ಕೆಲಸ, ಒತ್ತಡವಿಲ್ಲದೆ ಆರಾಮವಾಗಿ ಜೀವನ ಕಳೆಯಬಹುದು ಎಂದುಕೊಳ್ಳುವವರು ಹೆಚ್ಚಾಗಿದ್ದಾರೆ. ಆದರೆ, ಇಲ್ಲೊಂದು ಕುಟುಂಬದ ತಾಯಿ-ಮಗ ಮಾತ್ರ, ಕೋಟ್ಯಂತರ ರೂ. ಆಸ್ತಿ ತ್ಯಜಿಸಿ ಜೈನ ಸನ್ಯಾಸ ದೀಕ್ಷೆ ಪಡೆದಿರುವುದು ಕಂಡುಬಂದಿದೆ.
ಹೌದು, ಬೆಂಗಳೂರು ಮೂಲದ ಉದ್ಯಮಿ ಮನೀಶ್ ಎಂಬುವವರ ಪತ್ನಿ ಸ್ವೀಟಿ (30) ಹಾಗೂ 11 ವರ್ಷದ ಮಗ ಹೃಧನ್ ಇತ್ತೀಚೆಗೆ ಜೈನ ಸನ್ಯಾಸ ದೀಕ್ಷೆ ಪಡೆದಿದ್ದಾರೆ. ತಾಯಿ-ಮಗನ ದೀಕ್ಷಾ ಸಮಾರಂಭವು ಗುಜರಾತ್‌ನ ಸೂರತ್‌ನಲ್ಲಿ ಜನವರಿಯಲ್ಲಿ ಬಹಳ ವಿಜೃಂಭಣೆಯಿಂದ ನಡೆದಿದೆ. ಇವರಿಬ್ಬರೂ ಈಗ ಸೂರತ್‌ನಲ್ಲಿ ನೆಲೆಸಿದ್ದಾರೆ.
ಜೈನ ದೀಕ್ಷೆಯ ನಂತರ ತಾಯಿ ಸ್ವೀಟಿಗೆ ಭಾವಶುದ್ಧಿ ರೇಖಾ ಶ್ರೀ ಜಿ ಹಾಗೂ ಮಗ ಹೃದನ್‌ಗೆ ಹಿತಶಯ್ ರತನವಿಜಯ್ ಜಿ. ಎಂದು ಮರು ನಾಮಕರಣ ಮಾಡಲಾಗಿದೆ. ಇದೀಗ ತಾಯಿ-ಮಗ ದೀಕ್ಷೆ ಸ್ವೀಕಾರ ಮಾಡಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ಈ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ.
ಸನ್ಯಾಸ ದೀಕ್ಷೆ ಸ್ವೀಕರಿಸುವಾಗ ಮಗನ ತಲೆಯನ್ನು ತಾಯಿ ನೇವರಿಸುತ್ತಾ ಭಾವುಕರಾಗಿದ್ದಾರೆ. ಪರಸ್ಪರ ಹಣೆಗೆ ಕುಂಕುಮ ಇಟ್ಟುಕೊಂಡು, ಅಕ್ಷತೆ ಹಾಕಿಕೊಂಡಿದ್ದು, ನಂತರ ಇಬ್ಬರೂ ಶ್ವೇತ ವಸ್ತ್ರಗಳಲ್ಲಿ ಕಾಣಿಸಿಕೊಂಡಿರುವುದು ವಿಡಿಯೊದಲ್ಲಿದೆ.
ಕುಟುಂಬದ ಸಂಬಂಧಿ ವಿವೇಕ್ ಪ್ರತಿಕ್ರಿಯಿಸಿ, ಭಾವಶುದ್ಧಿ ರೇಖಾ ಶ್ರೀ ಜಿ ಅವರು ಗರ್ಭಿಣಿಯಾಗಿದ್ದಾಗಲೇ ಸನ್ಯಾಸಿಯಾಗಲು ಬಯಸಿದ್ದರು. ಅದೇ ಸಮಯದಲ್ಲಿ, ತನ್ನ ಮಗು ಕೂಡ ತನ್ನನ್ನು ಅನುಸರಿಸಿ ಜೈನ ಸನ್ಯಾಸಿಯಾಗಬೇಕೆಂದು ನಿರ್ಧರಿಸಿದ್ದರು. ನಂತರ ಮಗ ಕೂಡ ತಾಯಿ ಹಾದಿಯಲ್ಲೇ ನಡೆಯುವುದಾಗಿ ಹೇಳಿದ್ದ. ಭಾವಶುದ್ಧಿ ರೇಖಾ ಶ್ರೀ ಜಿ ಅವರ ಸಂಕಲ್ಪ ಕೇಳಿದ ನಂತರ ಅವರ ಪತಿ ಮನೀಶ್ ಕೂಡ ಬೆಂಬಲಿಸಿದರು. ಅವರು ದೀಕ್ಷೆ ಪಡೆದಿರುವುದು ಮನೀಶ್ ಮತ್ತು ಕುಟುಂಬದ ಇತರರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Akshay Kumar: ಜೈನ ಸನ್ಯಾಸಿಯ 180 ದಿನಗಳ ಉಪವಾಸ ಬ್ರೇಕ್ ಮಾಡಿದ ಅಕ್ಷಯ್ ಕುಮಾರ್!
ಈ ಹಿಂದೆ, ಗುಜರಾತ್‌ನ ಶ್ರೀಮಂತ ಜೈನ ದಂಪತಿ ಸುಮಾರು 200 ಕೋಟಿ ರೂ. ಆಸ್ತಿ ತ್ಯಜಿಸಿ ಸನ್ಯಾಸ ದೀಕ್ಷೆ ಪಡೆದಿದ್ದರು. ಭಾವೇಶ್ ಭಂಡಾರಿ ಮತ್ತು ಪತ್ನಿ ಫೆಬ್ರವರಿಯಲ್ಲಿ ಸನ್ಯಾಸ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ ಒಬ್ಬ ಮಗ ಮತ್ತು ಮಗಳಿದ್ದು, ಅವರು ಕೂಡ 2022ರಲ್ಲಿಯೇ ದೀಕ್ಷೆ ತೆಗೆದುಕೊಂಡಿದ್ದರು.