Site icon Vistara News

Literature Festival | ಜೈಪುರ ಸಾಹಿತ್ಯ ಉತ್ಸವ 2023ಕ್ಕೆ ವೇದಿಕೆ ಸಜ್ಜು; ಜ. 19ರಿಂದ ಪ್ರಾರಂಭ

jaipur fest

ಬೆಂಗಳೂರು: ವಿಶ್ವದ ದೊಡ್ಡ ಸಾಹಿತ್ಯ ಉತ್ಸವಗಳಲ್ಲಿ ಒಂದಾದ ಜೈಪುರ ಸಾಹಿತ್ಯ ಉತ್ಸವವು ೨೦೨೩ರ (Literature Festival) ಜ. ೧೯ರಿಂದ ೨೩ರವರೆಗೆ ನಡೆಯುತ್ತಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ಸಾಹಿತ್ಯ ಸಂಭ್ರಮಕ್ಕಾಗಿ ಬಿರುಸಿನ ಚಟುವಟಿಕೆ ನಡೆಯುತ್ತಿದ್ದು, ಹೆಸರಾಂತ ಲೇಖಕರು, ಪತ್ರಕರ್ತರು, ಭಾಷಾಂತರಕಾರರು, ಕವಿಗಳು ಪಾಲ್ಗೊಳ್ಳುತ್ತಿದ್ದಾರೆ. ಇದೀಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂಪನ್ಮೂಲ ವ್ಯಕ್ತಿಗಳ ೩ನೇ ಪಟ್ಟಿಯೂ ಬಿಡುಗಡೆಗೊಂಡಿದೆ.

ಕಳೆದ 15 ವರ್ಷಗಳಿಂದ ಜೈಪುರ ಸಾಹಿತ್ಯ ಉತ್ಸವವು ಭಾಷೆಗಳ ವೈವಿಧ್ಯತೆಯನ್ನು ಪ್ರತಿನಿಧಿಸುವ ಮತ್ತು ಅನುವಾದಿತ ಸಾಹಿತ್ಯ ಕೃತಿಗಳನ್ನು ಪರಿಚಯಿಸುವ ಒಂದು ಅತ್ಯುತ್ತಮ ವೇದಿಕೆಯಾಗಿ ಹೊರಹೊಮ್ಮಿದೆ. ಭಾಷಾಂತರವು ವಿಭಿನ್ನ ಸಂಸ್ಕೃತಿಗಳ ಸಂಪರ್ಕ, ಪರಿಚಯ, ಸಂಹವನಗಳಿಗೆ ಅನುಕೂಲವಾಗಿದ್ದು, ಒಂದು ಭಾಷೆಯ ಉತ್ಕೃಷ್ಟತೆಯನ್ನು ಸಾರುವ ಸಾಧನವೂ ಆಗಿದೆ.

ಪ್ರಸ್ತುತ ಜೈಪುರದ ಅಮೇರ್‌ನ ಹೋಟೆಲ್ ಕ್ಲಾರ್ಕ್ಸ್‌ನಲ್ಲಿ ನಡೆಯಲಿರುವ “ಜೈಪುರ ಸಾಹಿತ್ಯ ಉತ್ಸವ”ದಲ್ಲಿ ಜಾಗತಿಕ ಮಟ್ಟದ ಹಲವಾರು ಖ್ಯಾತನಾಮ ಭಾಷಾಂತರಕಾರರು ಪಾಲ್ಗೊಳ್ಳಲಿದ್ದಾರೆ. ಈ ಉತ್ಸವದಲ್ಲಿ ಪಾಲ್ಗೊಂಡು ವಿಷಯ ಮಂಡನೆ ಮಾಡಲಿರುವ ಸಂಪನ್ಮೂಲ ವ್ಯಕ್ತಿಗಳ ಮೂರನೇ ಪಟ್ಟಿಯು ಬಿಡುಗಡೆಗೊಂಡಿದ್ದು, ಅವರ ವಿವರ ಇಂತಿದೆ.

ಪ್ರಮುಖವಾಗಿ ಪೋರ್ಚುಗೀಸ್‌ ಲೇಖಕರಾದ ಅನಾ ಫಿಲೋಮಿನಾ ಅಮರಾಲಿ, ಖ್ಯಾತ ಪತ್ರಕರ್ತ, ಲೇಖಕ ಮತ್ತು ಭಾಷಾಂತರಕಾರ ಅರುನವ ಸಿನ್ಹಾ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಅರುಣ್‌ ಚಕ್ರವರ್ತಿ, ಕಾದಂಬರಿಕಾರ ದಿಬೇಕ್ ದೇಬ್ರಾಯ್, ಇಟಲಿಯ ಲೇಖಕ ಜಾರ್ಜಿಯೋ ಮೊಂಟೆಫೊಸ್ಚಿ, ಹೆಸರಾಂತ ದ್ವಿಭಾಷಾ ಸಂಪಾದಕ ಮಣಿ ರಾವ್, ಲೇಖಕ ಮತ್ತು ಭಾಷಾಂತರಕಾರರಾದ ಮನೀಷಾ ಚೌಧರಿ, ಭಾಷಾಂತರಕಾರ ಮತ್ತು ಅಂಕಣಕಾರರಾದ ಮಿನಿ ಕೃಷ್ಣನ್, ಪದ್ಮಭೂಷಣ ಪುರಸ್ಕೃತ ಮೃದಿ ಕೀರ್ತಿ, ಸಂಗೀತ ರಾಯಭಾರಿ & ಯುಎಇ ಮತ್ತು ಈಜಿಪ್ಟ್‌ನ ಭಾರತದ ರಾಯಭಾರಿ ನವದೀಪ್ ಸೂರಿ, ಪ್ರಕಾಶಕ ಮತ್ತು ಭಾಷಾಂತರಕಾರ ಆಸ್ಕರ್ ಪುಜೋಲ್, ಅನುವಾದಗಾರ್ತಿ ರಿಟಾ ಕೊಠಾರಿ, ಭಾರತೀಯ ಸಮಕಾಲೀನ ಬರಹಗಾರ ಮತ್ತು ಕಲಾವಿದ ಸಾಜ್ ಅಗರ್ವಾಲ್, ಕಾದಂಬರಿಕಾರರಾದ ಸಾಕ್ಷ್ಯಾ ಜೈನ್, ಖ್ಯಾತ ಮಹಿಳಾ ಲೇಖಕಿ ಊರ್ವಶಿ ಬುಟಾಲಿಯಾ, ಕಾದಂಬರಿಕಾರರಾದ ವಿನೀತ್ ಗಿಲ್ ಮತ್ತು ಖ್ಯಾತ ಕವಿ, ಸಂಗೀತಗಾರ ಹಾಗೂ ಸಿನಿಮಾ ತಜ್ಞ ಯತೀಂದ್ರ ಮಿಶ್ರಾ ಸೇರಿದಂತೆ ಇನ್ನೂ ಹಲವಾರು ಗಣ್ಯರು ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.

2013ರಲ್ಲಿ ದಕ್ಷಿಣ ಏಷ್ಯಾ ಕವಿಗೋಷ್ಠಿಯಲ್ಲಿ ಸಾರ್ಕ್ ಸಾಹಿತ್ಯ ಪ್ರಶಸ್ತಿ ಪಡೆದಿದ್ದ ಅಭಯ್ ಕೆ, ಕಾದಂಬರಿಕಾರ, ಸಾಹಿತ್ಯ ಪತ್ರಕರ್ತ ಮತ್ತು ಭಾಷಾಂತರಕಾರರಾದ ಅನುಪಮ ರಾಜು, ಎಸ್ಟೋನಿಯನ್ ಕವಿ ಡೊರಿಸ್ ಕರೆವಾ ಮತ್ತು ಪೆನ್ ಟ್ರಾನ್ಸ್‌ಲೇಟ್ಸ್ ಅವಾರ್ಡ್ ವಿಜೇತರಾದ ಕೊ ಕೊ ಥೆಟ್ ಸಹ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ | ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಅವಮಾನ ಅಕ್ಷಮ್ಯ: ಕಿಡಿಗೇಡಿಗಳ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್‌ ದೂರು

Exit mobile version