ಕೊಪ್ಪಳ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನನ್ನ ಆತ್ಮೀಯರು. ಅವರಿಂದಲೇ ನಾನು ರಾಜಕಾರಣಕ್ಕೆ ಬಂದಿದ್ದೇನೆ. ಆದರೆ, ಅವರು ಹೊಸ ಪಕ್ಷ ಸ್ಥಾಪಿಸಿರುವುದಕ್ಕೆ ನಾನು ಶುಭ ಕೋರಬಹುದು ಅಷ್ಟೇ. ಬಿಜೆಪಿಯಲ್ಲಿಯೇ ಮುಂದುವರಿಯಿರಿ ಎಂದು ನಾನು ಅವರನ್ನು (Janardhan Reddy) ಮನವೊಲಿಸುವಷ್ಟು ದೊಡ್ಡವನಲ್ಲ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಕಟ್ಟಿದ್ದಾರೆ ಎಂಬ ವಿಷಯ ಕೇಳಿದ್ದೇನೆ. ನಾನು ಇಂದು ರಾಜಕಾರಣದಲ್ಲಿ ಇದ್ದೇನೆ ಎಂದರೆ ಅದಕ್ಕೆ ಜನಾರ್ದನ ರೆಡ್ಡಿ ಅವರೇ ಕಾರಣ. ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದಾಗ ಅವರು ಚುನಾವಣೆಗೆ ನಿಲ್ಲಿ ಎಂದು ಪ್ರೋತ್ಸಾಹ ನೀಡಿದ್ದರು. ಅವರ ಹಾಗೂ ನನ್ನ ನಡುವಿನ ಆ ಸ್ನೇಹ ಇನ್ನೂ ಹಾಗೆಯೇ ಇದೆ ಎಂದು ತಿಳಿಸಿದರು.
ಬಿಜೆಪಿಯಲ್ಲಿಯೇ ಮುಂದುವರಿಯಿರಿ ಎಂದು ಜನಾರ್ದನ ರೆಡ್ಡಿ ಅವರನ್ನು ಮನವೊಲಿಸುವಷ್ಟು ನಾನು ದೊಡ್ಡವನಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಬರುವ ಚುನಾವಣೆಯಲ್ಲಿ ಕೆಆರ್‌ಎಸ್, ಆಮ್ ಆದ್ಮಿ ಪಕ್ಷ, ತೃಣಮೂಲ ಕಾಂಗ್ರೆಸ್ ಸಹ ಬರಬಹುದು. ಯಾವುದೇ ಪಕ್ಷ ಬರಲಿ. ಆದರೆ ಬಿಜೆಪಿ ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.
ಇದನ್ನೂ ಓದಿ | SCST Reservation | 90 ದಿನದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವುದಿಲ್ಲ ಎಂದ ಡಿ.ಕೆ. ಶಿವಕುಮಾರ್
ಇನ್ನು ಫೆಬ್ರವರಿ 15ರ ವೇಳೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಅಭಿವೃದ್ಧಿಗೆ ಅಡಿಗಲ್ಲು ಹಾಕಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಯಾರನ್ನು ಕರೆಸಬೇಕು ಎಂಬುದನ್ನು ರಾಜ್ಯದ ನಾಯಕರು ಚರ್ಚೆ ಮಾಡಿ ತೀರ್ಮಾನಿಸುತ್ತಾರೆ. ಅಂಜನಾದ್ರಿ ಅಭಿವೃದ್ಧಿ ವಿಷಯದಲ್ಲಿ ಕೆಲ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಿ ಅಭಿವೃದ್ಧಿಗೆ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಎಷ್ಟು ಮಂದಿ ಜನಾರ್ದನ ರೆಡ್ಡಿಗಳು ಬಂದರೂ ಬಿಜೆಪಿಗೆ ತೊಂದರೆಯಿಲ್ಲ: ಸಚಿವ ಮುನಿರತ್ನ
ಕೋಲಾರ: ಬಂಗಾರಪ್ಪ, ದೇವರಾಜ ಅರಸು ಸೇರಿದಂತೆ ಹಲವರು ಹೊಸ ಪಕ್ಷ ಕಟ್ಟಿದ್ದರು. ಅವುಗಳಲ್ಲಿ ಯಾವುದಾದರೂ ಈಗ ಇದೆಯಾ, ಕಣ್ಣಿಗೆ ಕಾಣಿಸುವುದಿಲ್ಲ. ಜನಾರ್ದನ ರೆಡ್ಡಿ ಅವರು ಗಂಗಾವತಿಗೆ ಮಾತ್ರ ಅಭ್ಯರ್ಥಿಯಾಗುತ್ತೇನೆ ಎಂದು ಹೇಳಿಕೊಂಡು ಬಂದಿದ್ದು, ಈಗ ಪಕ್ಷ ಕಟಿದ್ದಾರೆ. ಎಷ್ಟು ಮಂದಿ ಜನಾರ್ದನ ರೆಡ್ಡಿಗಳು ಬಂದರೂ ಬಿಜೆಪಿ ಪಕ್ಷಕ್ಕೆ ಸಣ್ಣ ತೊಂದರೆಯೂ ಆಗಲ್ಲ ಎಂದು ಸಚಿವ ಮುನಿರತ್ನ ಹೇಳಿದರು.
ಜನಾರ್ದನ ರೆಡ್ಡಿ ಹೊಸ ಪಕ್ಷ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ) ಸ್ಥಾಪಿಸಿರುವ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿ, ಇನ್ನೂ ಇಪ್ಪತ್ತು ಮಂದಿ ಪಕ್ಷ ಕಟ್ಟಿದ್ದರೂ ನಮ್ಮ ಪಕ್ಷಕ್ಕೆ ಏನೂ ಆಗಲಾರದು. ಅವರ ವಿಚಾರದಲ್ಲಿ ಕೇಂದ್ರದ ನಾಯಕರ ತೀರ್ಮಾನ ಇರುತ್ತದೆ. ರೆಡ್ಡಿ ಅವರು ಆತುರದ ತೀರ್ಮಾನ ತೆಗೆದುಕೊಂಡಿದ್ದಾರೆ, ರಾಜಕಾರಣಿಗಳಿಗೆ ತಾಳ್ಮೆ ಬಹಳ ಮುಖ್ಯ. ಕೇಂದ್ರದ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಮಾಡಬೇಕಿತ್ತು. ಏಕಾಏಕಿ ಪಕ್ಷ ಕಟ್ಟಿದ್ದರಿಂದ ನಮ್ಮ ಪಕ್ಷಕ್ಕೆ ಯಾವುದೇ ನಷ್ಟ ಇಲ್ಲ ಎಂದು ತಿಳಿಸಿದರು.
ಇದನ್ನೂ ಓದಿ | Karnataka Election | ಶಿವಾಜಿನಗರದಲ್ಲಿ ಬಿಜೆಪಿ ಗೆದ್ದರೆ ರಾಜ್ಯದಲ್ಲಿ 130 ಸ್ಥಾನ ಖಚಿತ: ಸಿಎಂ ಬಸವರಾಜ ಬೊಮ್ಮಾಯಿ