ಶಶಿಧರ್ ಮೇಟಿ, ವಿಸ್ತಾರ ನ್ಯೂಸ್ ಬಳ್ಳಾರಿ
ಕೊನೆಗೂ ಗಾಲಿ ಜನಾರ್ದನ ರೆಡ್ಡಿ (Janardhan Reddy) ಅವರು ಹೊಸ ಪಕ್ಷ ಹುಟ್ಟು ಹಾಕಲು ನಿರ್ಧರಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಅವರು ಸೋಮವಾರವೇ (ಡಿ.12) ಚುನಾವಣೆ ಆಯೋಗಕ್ಕೆ ಹೊಸ ಪಕ್ಷದ ಹೆಸರು ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರ ಆಪ್ತರು ಸೋಮವಾರ ದೆಹಲಿಗೆ ತೆರಳಿ ಪಕ್ಷದ ಹೆಸರು ನೊಂದಾಯಿಸುವ ಸಿದ್ಧತೆಯಲ್ಲಿದ್ದಾರೆ. ಹೊಸ ಪಕ್ಷಕ್ಕೆ ʼಕಲ್ಯಾಣ ರಾಜ್ಯ ಪ್ರಗತಿ ಪಕ್ಷʼ ಎಂಬ ಹೆಸರಿಡಲು ನಿರ್ಧಾರಿಸಿದ್ದಾರೆಂದು ಹೇಳಲಾಗುತ್ತಿದೆ.
ಒಂದು ಕಾಲದಲ್ಲಿ ಬಿಜೆಪಿಯಲ್ಲಿ ಅತ್ಯಂತ ಪ್ರಭಾವಿ ಆಗಿದ್ದ, ಪ್ರಮುಖ ಖಾತೆಗಳನ್ನು ಹೊಂದಿರುವ ಸಚಿವರೂ ಆಗಿದ್ದ ಗಾಲಿ ಜನಾರ್ದನ ರೆಡ್ಡಿ ಗಣಿ ಹಗರಣದಲ್ಲಿ ಸಿಲುಕಿ ಜೈಲು ಪಾಲಾಗಿದ್ದರು. ಆ ಬಳಿಕ ಅವರಿಂದ ಬಿಜೆಪಿ ಅಂತರ ಕಾಯ್ದುಕೊಂಡಿತ್ತು. ನಂತರ ರೆಡ್ಡಿ ರಾಜಕೀಯವಾಗಿ ಅಜ್ಞಾತವಾಸದಲ್ಲಿದ್ದರು. ಈಗಲೂ ಬಿಜೆಪಿ ತಮ್ಮನ್ನು ಹತ್ತಿರದಿಂದ ಸೇರಿಸಿಕೊಳ್ಳುತ್ತಿಲ್ಲ ಎಂದು ಕುದಿಯುತ್ತಿರುವ ರೆಡ್ಡಿ ಹೊಸ ಪಕ್ಷ ಕಟ್ಟುವ ಮೂಲಕ ಈ ಪಕ್ಷಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಹೊಸ ಪಕ್ಷದ ಅಸ್ತ್ರ ಮುಂದಿಟ್ಟು ಅವರು ಬಿಜೆಪಿಗೆ ಹತ್ತಿರವಾಗಲು ಯತ್ನಿಸುತ್ತಿದ್ದಾರೆ ಎಂಬ ಅಭಿಪ್ರಾಯವೂ ಇದೆ.
ಗಂಗಾವತಿಯಿಂದ ರೆಡ್ಡಿ, ಪತ್ನಿ ಗದಗದಿಂದ?
ಜನಾರ್ದನ ರೆಡ್ಡಿ ಅವರು ಗಂಗಾವತಿಯಿಂದ ಮತ್ತು ಅವರ ಪತ್ನಿ ಅರುಣಾ ಲಕ್ಷ್ಮಿ ಗದಗದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 30 ಕ್ಷೇತ್ರದಿಂದ ಅವರ ಪಕ್ಷ ಸ್ಪರ್ಧಿಸಲಿದೆ. ಬೇರೆ ಬೇರೆ ಪಕ್ಷದ ಟಿಕೆಟ್ ಆಕಾಂಕ್ಷಿಗಳು ರೆಡ್ಡಿ ಅವರನ್ನು ಸಂಪರ್ಕಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಗಂಗಾವತಿಯಲ್ಲಿ ಡಿ.14ರಂದು ಅವರ ಹೊಸ ಮನೆಯ ಗೃಹ ಪ್ರವೇಶ ನಡೆಯಲಿದೆ. ಆರಂಭದಲ್ಲಿ ಹೊಸ ಪಕ್ಷವನ್ನು ರೆಡ್ಡಿ ಆಪ್ತರು ಪದಾಧಿಕಾರಿಗಳಾಗಿ ಮುನ್ನಡೆಸಲಿದ್ದಾರೆ. ನಂತರದಲ್ಲಿ ರೆಡ್ಡಿ ಮುನ್ನೆಲೆಗೆ ಬರಲಿದ್ದಾರೆ ಎನ್ನಲಾಗಿದೆ.
ರೆಡ್ಡಿ ಈಗ ಬೆಂಗಳೂರಿನಲ್ಲಿಯೇ ಇದ್ದಾರೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಕೆಲವು ಮುಖಂಡರು ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಬೆಂಬಲಿಸುವ ಕುರಿತು ರೆಡ್ಡಿಯವರ ಸಂಪರ್ಕದಲ್ಲಿದ್ದಾರೆ ಎಂದು ರೆಡ್ಡಿ ಆಪ್ತರು ಹೇಳಿಕೊಂಡಿದ್ದಾರೆ.
ಬಿಜೆಪಿ ಹೇಳುವುದೇನು?
ಈ ಕುರಿತು ಸಚಿವ ಆರ್ ಅಶೋಕ್ ಅವರು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯಿಸಿ ʼʼಜನಾರ್ದನ ರೆಡ್ಡಿ ಅವರ ಜತೆ ನಾವು ಮಾತನಾಡಿದ್ದೇವೆ. ಯಾವುದೇ ಪಕ್ಷ ಸ್ಥಾಪಿಸುವ ಉದ್ದೇಶ ತಮಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆʼʼ ಎಂದಿದ್ದಾರೆ.
ರೆಡ್ಡಿ ಅವರ ಒಂದು ಕಾಲದ ಅತ್ಯಾಪ್ತ ಗೆಳೆಯ ಶ್ರೀರಾಮುಲು ಈ ಬಗ್ಗೆ ಮಾತನಾಡಿ ʼʼಜನಾರ್ದನ ರೆಡ್ಡಿ ಅವರ ಬೆಂಬಲ ಯಾವಾಗಲೂ ಬಿಜೆಪಿಗೇ ಇರುತ್ತದೆ. ಬಿಜೆಪಿಯನ್ನು ತಾಯಿ ಎಂದು ಅವರು ಪರಿಗಣಿಸಿದ್ದಾರೆ. ನಾನು ಅವರ ಜತೆ ಸಂಪರ್ಕದಲ್ಲಿದ್ದೇನೆ. ಅವರು ಹೊಸ ಪಕ್ಷ ಸ್ಥಾಪಿಸುತ್ತಾರೆ ಎನ್ನುವುದೆಲ್ಲ ಊಹಾಪೋಹʼʼ ಎಂದು ವಿವರಣೆ ನೀಡಿದ್ದಾರೆ.
ಹಿಂದೆಯೂ ಪಕ್ಷ ಕಟ್ಟಿ ನೆಲಕಚ್ಚಿದ್ದರು
ಡಿನೋಟಿಫಿಕೇಷನ್ ಹಗರಣದಲ್ಲಿ ಸಿಲುಕಿ ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿಯಲ್ಲಿ ಅಲ್ಲೋಲಕಲ್ಲೋಲ ಉಂಟಾಗಿತ್ತು. ಯಡಿಯೂರಪ್ಪ ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟಿದ್ದರು. ಅದೇ ವೇಳೆ ಜನಾರ್ದನ ರೆಡ್ಡಿ ಅವರ ಆಪ್ತ ಶ್ರೀರಾಮುಲು ಬಿ ಎಸ್ ಆರ್ ಹೆಸರಿನ ಪಕ್ಷ ಕಟ್ಟಿದ್ದರು. ಆಗ ಶ್ರೀರಾಮುಲು ಬೆಂಬಲಕ್ಕೆ ನಿಂತಿದ್ದರು ರೆಡ್ಡಿ. ಆದರೆ ಆ ಚುನಾವಣೆಯಲ್ಲಿ ಶ್ರೀರಾಮುಲು ಗೆದ್ದಿದ್ದರಾದರೂ ಒಟ್ಟಾರೆ ಬಿ ಎಸ್ ಆರ್ ಪಕ್ಷ ಹೀನಾಯವಾಗಿ ನೆಲಕಚ್ಚಿತ್ತು. ಆ ಬಳಿಕ ಶ್ರೀರಾಮುಲು ಮತ್ತೆ ಬಿಜೆಪಿಗೆ ಮರಳಿದ್ದರು.
ಬಳ್ಳಾರಿಯಲ್ಲಿ ನೋ ಎಂಟ್ರಿ
ಜನಾರ್ದನ ರೆಡ್ಡಿ ಅವರು ಬಳ್ಳಾರಿಗೆ ಕಾಲಿಡದಂತೆ ಕೋರ್ಟ್ ನಿರ್ಬಂಧ ವಿಧಿಸಿದೆ. ಹಾಗಾಗಿ ಕಳೆದ 7 ವರ್ಷಗಳಿಂದ ಅವರು ಬಳ್ಳಾರಿಗೆ ಕಾಲಿಟ್ಟಿಲ್ಲ. ಇದೀಗ ಗಂಗಾವತಿಯಲ್ಲಿ ಮನೆ ಖರೀದಿಸಿ ಗೃಹ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ಗೃಹ ಪ್ರವೇಶದ ಬಳಿಕ ಅವರ ರಾಜಕೀಯ ಪ್ರವೇಶದ ಕುರಿತು ಕುತೂಹಲ ಮೂಡಿದೆ.
ಇದನ್ನೂ ಓದಿ | Gali janardhan reddy | ಬಿಜೆಪಿಯೇ ನನ್ನ ಕುಟುಂಬ, ರಾಜಕೀಯ ಜೀವನ: ಗಾಲಿ ಜನಾರ್ದನ ರೆಡ್ಡಿ