Site icon Vistara News

Janardhana Reddy | ಒಂಟಿಯಾದ ರೆಡ್ಡಿ ಬೆನ್ನಿಗೆ ನಿಂತು ಧೈರ್ಯ ಹೇಳಿದ ಪತ್ನಿ, ಮಗಳು: ನಾನಿದ್ದೀನಿ ಅಪ್ಪ ಅಂದ್ರು ಬ್ರಹ್ಮಣಿ

Brahmani reddy

ಶಶಿಧರ ಮೇಟಿ, ವಿಸ್ತಾರ ನ್ಯೂಸ್, ಬಳ್ಳಾರಿ
ಹೊಸ ಪಕ್ಷ ಹುಟ್ಟು ಹಾಕಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ರಾಜಕೀಯದಲ್ಲಿ ಗೆಳೆಯರನ್ನು ಕಳೆದುಕೊಂಡು ಒಂಟಿಯಾದ ಅನುಭವ ಅನುಭವಿಸುತ್ತಿದ್ದಾರೆ. ಈ ಒಂಟಿತನ ದೂರ ಮಾಡಿ ಧೈರ್ಯ ತುಂಬಲು ಪಕ್ಕದಲ್ಲಿ ಬಂದು ನಿಂತಿದ್ದಾರೆ ಮಡದಿ ಅರುಣಾಲಕ್ಷ್ಮಿ ಮತ್ತು ಮಗಳು ಬ್ರಹ್ಮಣಿ ರೆಡ್ಡಿ. ಅಣ್ಣ ತಮ್ಮಂದಿರು, ಆಪ್ತಮಿತ್ರರು ಇಲ್ಲದಿದ್ದರೇನಂತೆ.. ನಾವಿದ್ದೇವೆ.. ಕೇವಲ ಬದುಕಿನಲ್ಲಿ ಮಾತ್ರವಲ್ಲ, ರಾಜಕೀಯದಲ್ಲಿ ಕೂಡಾ ನಿಮ್ಮ ಜೊತೆಗೆ ಕೊನೆ ತನಕ ಹೆಜ್ಜೆ ಹಾಕುತ್ತೇವೆ ಎಂದು ಕೈ ಜೋಡಿಸಿದ್ದಾರೆ. ಬುಧವಾರ ನಡೆದ ರೆಡ್ಡಿ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲೇ ಅರುಣಾ ಲಕ್ಷ್ಮಿ ಅವರು ಈ ಮಾತು ಹೇಳಿದರು.

ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಕಟ್ಟಿದಾಗ ಅವರ ಜೊತೆಗೆ ಸಹೋದರರಾದ ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ಮತ್ತು ಆಪ್ತ ಗೆಳೆಯ ಶ್ರೀರಾಮುಲು ಬಂದಿಲ್ಲ. ಸಿಂಧನೂರು ಸಮಾವೇಶದಲ್ಲಿ ಒಂಟಿಯಾಗಿದ್ದೇನೆಂದು ರೆಡ್ಡಿ ಅವರು ಹೇಳಿದ್ದು ಕೇಳಿ ನನ್ನ ಹೃದಯ ಬಡಿತ ಏರುಪೇರಾಗಿತ್ತು ಎಂದು ಸ್ವತಃ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಅವರು ಬುಧವಾರ ಬಳ್ಳಾರಿಯಲ್ಲಿ ನಡೆದ ರೆಡ್ಡಿ ಹುಟ್ಟು ಹಬ್ಬದ ಸಮಾವೇಶದಲ್ಲಿ ಹೇಳಿದರು. ಇದು ರೆಡ್ಡಿ ಅವರಿಗೆ ಒಂಟಿತನದ ಭಾವನೆ ಕಾಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಗುರುವಾರ ನಡೆದ ಜನಾರ್ದನ ರೆಡ್ಡಿ ಅವರ ಹುಟ್ಟುಹಬ್ಬ ಆಚರಣೆಯ ವೇಳೆ ಭಾಗವಹಿಸಿದ್ದ ಮಠಾಧೀಶರು, ರೆಡ್ಡಿ ಪತ್ನಿ ಮತ್ತು ಮಗಳು

ರಾಮುಲು ಮನೆಯ ಪಕ್ಕದಲ್ಲಿಯೇ ಸಮಾವೇಶ
ಜನಾರ್ದನ ರೆಡ್ಡಿ ಹುಟ್ಟು ಹಬ್ಬದ ಸಮಾವೇಶದ ವೇದಿಕೆಯನ್ನು ಶ್ರೀರಾಮುಲು ಮನೆಯ ಪಕ್ಕದಲ್ಲಿಯೇ ವ್ಯವಸ್ಥೆ ಮಾಡಲಾಗಿತ್ತು. ವೇದಿಕೆಯ ಮೇಲೆ ಬಸವೇಶ್ವರ ಮೂರ್ತಿ ಜೊತೆಗೆ ಸುಮಾರು ೧೦ಕ್ಕೂ ವೀರಶೈವ ಮಠಾಧೀಶರನ್ನು ಮತ್ತು ಮುಸ್ಲಿಂ ಸಮುದಾಯ ಮುಖಂಡರು ಭಾಗವಹಿಸಿದ್ದು ವಿಶೇಷವಾಗಿತ್ತು.

ರೆಡ್ಡಿ ಕುಟುಂಬವೇ ರಾಜಕೀಯಕ್ಕೆ ಎಂಟ್ರಿ!
ಬಳ್ಳಾರಿ ಪ್ರವೇಶಕ್ಕೆ ರೆಡ್ಡಿಗೆ ಸುಪ್ರೀಂಕೋರ್ಟ್ ನಿಷೇಧ ಏರಿರುವುದರಿಂದ ತವರು ಜಿಲ್ಲೆಯಲ್ಲಿ ರೆಡ್ಡಿಯವರ ಹೊಸ ಪಕ್ಷಕ್ಕೆ ಸಾರಥಿ ಕೊರತೆ ನೀಗಿಸಲು ಸ್ವತಃ ಪತ್ನಿ ಅರುಣಾ ಲಕ್ಷ್ಮಿಗೆ ಜವಾಬ್ದಾರಿ ನೀಡಿದರು. ಹೆಂಡತಿಗೂ ಒಂಟಿತನ ಕಾಡಬಾರದೆಂದು ಮಗಳು ಬ್ರಹ್ಮಣಿಯನ್ನು ತನ್ನ ಹುಟ್ಟು ಹಬ್ಬದಂದು ರಾಜಕೀಯ ವೇದಿಕೆಗೆ ಕರೆ ತಂದಿದ್ದಾರೆ.

ಇದರಿಂದಾಗಿ ರೆಡ್ಡಿ ಕುಟುಂಬವೇ ಹೊಸ ಪಕ್ಷದ ಮೂಲಕ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆ ಮಾಡಲು ಹೊರಟಂತಿದೆ. ಕಾರ್ಯಕ್ರಮದಲ್ಲಿ ಜನಾರ್ದನ ರೆಡ್ಡಿ ಗಣಿ ಉದ್ಯಮದ ಪಾಲುದಾರ ಶ್ರೀನಿವಾಸ ರೆಡ್ಡಿ ಭಾಗವಹಿಸಿದ್ದರು, ಇನ್ನು ರೆಡ್ಡಿ ಅವರು ಹೆಣ್ಣು ಕೊಟ್ಟ ಮಾವ ಪರಮೇಶ್ವರ ರೆಡ್ಡಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದರು, ವೇದಿಕೆ ಮುಂಭಾಗದಲ್ಲಿ ಕೆಳಗಡೆ ಕುಳಿತುಕೊಳ್ಳುವ ಮೂಲಕ ಮಗಳು ಮತ್ತು ಮೊಮ್ಮಗಳಿಗೆ ಸಾಥ್ ನೀಡಿದರು.

ರೆಡ್ಡಿಯ ಅನಿವಾರ್ಯತೆ ಸೃಷ್ಟಿಸುವ ಮಾತು
ಜನಾರ್ದನ ರೆಡ್ಡಿ ಅವರ ಮಗಳು ಮತ್ತು ಪತ್ನಿ ಸಮಾವೇಶದಲ್ಲಿ ಆಡಿದ ಪ್ರತಿಯೊಂದು ಮಾತು ಕೂಡ ರೆಡ್ಡಿ ಅವರ ಶಕ್ತಿಯನ್ನು ಬಿಂಬಿಸುವಂತಿತ್ತು ಮತ್ತು ಅಭಿವೃದ್ಧಿಗೆ ರೆಡ್ಡಿ ಅನಿವಾರ್ಯತೆಯನ್ನು ಸಾರಿ ಹೇಳಿತ್ತು. ಅವರ ಅವಧಿಯಲ್ಲಿ ಆರಂಭಿಸಿರುವ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳಬೇಕಾದರೆ ಜನಾರ್ದನ ರೆಡ್ಡಿ ಅಧಿಕಾರಕ್ಕೆ ಬರುವುದು ಅನಿವಾರ್ಯವಿದೆ, ಚುನಾವಣೆಗೆ ಸಜ್ಜಾಗಿ ಎಂದು ಪಕ್ಷದ ಕಾರ್ಯಕರ್ತರಿಗೆ ಹೆಂಡತಿ ಮತ್ತು ಮಗಳು ಕರೆ ನೀಡಿದರು.

ರೆಡ್ಡಿ ಅವರ ಪತ್ನಿ ಮತ್ತು ಮಗಳು ಹೇಳಿದ್ದೇನು?
ʻʻನಾನು ಕನಸಿನಲ್ಲಿಯೂ ಈ ರೀತಿ ವೇದಿಕೆಯಲ್ಲಿ ಮಾತನಾಡುತ್ತೇನೆಂದು ಅಂದುಕೊಂಡಿರಲಿಲ್ಲ. ನಾನು ಒಂಟಿ ಎಂದು ನನ್ನ ಪತಿ ಜನಾರ್ದನ ರೆಡ್ಡಿ ಸಿಂಧನೂರು ಕಾರ್ಯಕ್ರಮದಲ್ಲಿ ಹೇಳಿದಾಗ ನನ್ನ ಹೃದಯ ಬಡಿತ ಕಡಿಮೆಯಾಗಿತ್ತು. ನಮ್ಮ ಪತಿಯವರ ಅಭಿವೃದ್ಧಿ ಕೆಲಸ ನೋಡಿ ಅಸೂಯೆಪಟ್ಟು ಅವರನ್ನು ಜೈಲಿಗೆ ಕಳುಹಿಸಿದರು. ಇಷ್ಟು ಕೆಲಸ ಮಾಡುವ ಧೈರ್ಯ, ಬುದ್ಧಿವಂತಿಕೆ ನಮ್ಮ ಪತಿ ರೆಡ್ಡಿ ಅವರಿಗೆ ಮಾತ್ರ ಇದೆʼʼ ಎಂದು ಅರುಣಾಲಕ್ಷ್ಮಿ ಹೇಳಿದರು.

ʻʻಒಂದು ಕಡೆ ಸಂತೋಷ, ಇನ್ನೊಂದು ಕಡೆ ದುಃಖ, ಮಗದೊಂದು ಕಡೆ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಅವರು ಕಟ್ಟಿರುವ ಸಾಮ್ರಾಜ್ಯದಿಂದ ಅವರೇ ದೂರವಾಗುವ ದುಃಸ್ಥಿತಿ ನಮ್ಮ ತಂದೆಗೆ ಬಂದಿದೆ. ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡುವ ಬಳ್ಳಾರಿ ಜನ್ಮ, ಕರ್ಮ ಮತ್ತು ಪುಣ್ಯ ಭೂಮಿಯಿಂದ ದೂರ ಇರಬೇಕಾದ ವಿಧಿಯಾಟ ಇದೆ. ಜಿಲ್ಲೆಯಲ್ಲಿ ನಮ್ಮ ತಂದೆ ಸಚಿವರಾದಾಗ ಆರಂಭಿಸಿ ಅರ್ಧಕ್ಕೆ ನಿಂತಿರುವ ಅಭಿವೃದ್ಧಿ ಕೆಲಸಗಳು ರೆಡ್ಡಿ ಬೇಗನೆ ಬಾರಯ್ಯ ಎಂದು ಕೈ ಬೀಸಿ ಕರೆಯುತ್ತಿವೆ. ಕೆಲವೇ ದಿನಗಳಲ್ಲಿ ನಮ್ಮ ತಂದೆ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆʼʼ ಎಂದು ಜನಾರ್ದನ ರೆಡ್ಡಿ ಮಗಳು ಬ್ರಹ್ಮಣಿ ರೆಡ್ಡಿ ಹೇಳಿದರು.

ಇದನ್ನೂ ಓದಿ | Janardhana Reddy | ನಾನು ರಾಮುಲು ಫಾಲೋವರ್‌, ಜನಾರ್ದನ ರೆಡ್ಡಿಗೆ ಕೈಕೊಟ್ಟ ಸೋದರ ಸೋಮಶೇಖರ್‌ ರೆಡ್ಡಿ

Exit mobile version