ಬೆಂಗಳೂರು: ಹೃದ್ರೋಗ ಚಿಕಿತ್ಸೆಗೆ ರಾಜ್ಯದಲ್ಲೇ ಖ್ಯಾತಿಯಾಗಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಮಕ್ಕಳ ಆರೋಗ್ಯ ಸಂಬಂಧಿತ ಚಿಕಿತ್ಸೆಗೆ ಹೆಸರುವಾಸಿಯಾದ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ಸೇವೆಗಳು ಇನ್ನು ಮುಂದೆ ನಗರದ ಮಲ್ಲೇಶ್ವರದಲ್ಲೂ ದೊರೆಯಲಿವೆ. ಈ ಎರಡೂ ಆಸ್ಪತ್ರೆಗಳ ಉಪ ಘಟಕಗಳು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಆರಂಭವಾಗಲಿರುವುದರಿಂದ ಮಲ್ಲೇಶ್ವರ ಸೇರಿದಂತೆ ಬೆಂಗಳೂರು ಉತ್ತರ ಭಾಗದ ಜನರಿಗೆ ಹೆಚ್ಚಿನ (Good News) ಅನುಕೂಲವಾಗಲಿದೆ.
ಮಲ್ಲೇಶ್ವರದ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ಜಯದೇವ ಹೃದ್ರೋಗ ಸಂಸ್ಥೆಯ 50 ಹಾಸಿಗೆಗಳ ತುರ್ತು ಉಪಘಟಕ ಹಾಗೂ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ 50 ಹಾಸಿಗೆಗಳ ತುರ್ತು ನಿಗಾ ಘಟಕವನ್ನು ಸೋಮವಾರ ವೀಕ್ಷಿಸಿ ಮಾತನಾಡಿದ ಕ್ಷೇತ್ರದ ಶಾಸಕ ಹಾಗೂ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಎರಡೂ ಆಸ್ಪತ್ರೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಕ್ಟೋಬರ್ 4 ರಂದು ಉದ್ಘಾಟಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ | ಬೆಂಗಳೂರಿನ ಶ್ರೀ ವಿದ್ಯಾಮಾನ್ಯ ವಿದ್ಯಾ ಕೇಂದ್ರದಲ್ಲಿ ದಸರಾ ವೈಭವ; ಬೊಂಬೆ ಪ್ರದರ್ಶನದಲ್ಲಿ ಸಂಪೂರ್ಣ ರಾಮಾಯಣ
ಜಯದೇವ ಹೃದ್ರೋಗ ಆಸ್ಪತ್ರೆಯ ಉಪಘಟಕದಿಂದ ಬೆಂಗಳೂರು ಉತ್ತರ ಭಾಗದ ಜನರಿಗೆ ಸುಗಮವಾಗಿ ಮತ್ತು ಸುಲಭವಾಗಿ ಹೃದಯ ಚಿಕಿತ್ಸೆ ದೊರೆಯಲಿದೆ. ಇದಕ್ಕಾಗಿ 15 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ. ಕೊರೊನಾ ಸಂದರ್ಭದಲ್ಲಿ ಸರ್ಕಾರ, ಜಯದೇವ ಸಂಸ್ಥೆಗೆ ನೀಡಿದ ಅನುದಾನದಲ್ಲಿ ಉಳಿದ ಹಣವನ್ನು ಇದಕ್ಕೆ ಬಳಸಿಕೊಳ್ಳಲಾಗಿದೆ. ಉಪಕರಣಗಳಿಗೆ ಆಗುವ ವೆಚ್ಚವನ್ನು ಜಯದೇವ ಹೃದ್ರೋಗ ಸಂಸ್ಥೆಯೇ ಭರಿಸಿದೆ. ಈ ಉಪಘಟಕವನ್ನು ಆ ಸಂಸ್ಥೆಯೇ ನಿರ್ವಹಿಸಲಿದೆ ಎಂದು ತಿಳಿಸಿದರು.
ಈ ಉಪಘಟಕದಲ್ಲಿ ಹೃದ್ರೋಗಕ್ಕೆ ಸಂಬಂಧಿಸಿದ ಎಲ್ಲ ಚಿಕಿತ್ಸೆಗಳಿಗೆ ಅನುಕೂಲವಿದೆ. ಎಳೆಯ ಮಕ್ಕಳಿಗೆ ಕಂಡುಬರುವ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೂ ಇನ್ನು ಮುಂದೆ ಕೆ.ಸಿ. ಜನರಲ್ ಆಸ್ಪತ್ರೆಯ ಆವರಣದಲ್ಲೇ ಅತ್ಯುತ್ತಮ ಚಿಕಿತ್ಸೆ ಸಿಗಲಿದೆ. ಈ ನಿಟ್ಟಿನಲ್ಲಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ 50 ಹಾಸಿಗೆಗಳ ತುರ್ತು ನಿಗಾ ಆರಂಭವಾಗಲಿದೆ ಎಂದು ತಿಳಿಸಿದರು.
ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ ಎನ್ ಮಂಜುನಾಥ್, ಕೆಸಿಜಿ ಆಸ್ಪತ್ರೆಯ ಅಧೀಕ್ಷಕಿ ಡಾ.ಇಂದಿರಾ, ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ದೀಪಕ್ ಮತ್ತಿತರರು ಇದ್ದರು.
ಇದನ್ನೂ ಓದಿ | ದೇವೇಗೌಡರನ್ನು ಅಧಿಕಾರದಿಂದ ಇಳಿಸಿದ್ದು ಕಾಂಗ್ರೆಸ್: ಪ್ರಬಲ ಜಾತಿಗಳ ವಿರುದ್ಧ ʼಕೈʼ ನಿಲುವು ಎಂದ ಸಚಿವ ಸುಧಾಕರ್