ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ (Backward Classes Commission) ಅಧ್ಯಕ್ಷ ಮತ್ತು ಸದಸ್ಯರ ಅವಧಿ ಎರಡು ತಿಂಗಳು ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ನವೆಂಬರ್ 24ರಂದು ಮಹತ್ವದ ಆದೇಶ ಹೊರಡಿಸಿದೆ. ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹಾಗೂ ಐವರು ಸದಸ್ಯರ ಅಧಿಕಾರವನ್ನು 2024ರ ಜನವರಿ 31ರವರೆಗೆ ಮರು ನೇಮಕ ಮಾಡಲಾಗಿದೆ. ಇವರೆಲ್ಲರ ಅವಧಿಯ ನವೆಂಬರ್ 26ಕ್ಕೆ ಮುಕ್ತಾಯಗೊಳ್ಳುತ್ತಿತ್ತು. ಅವರೆಲ್ಲರ ಅವಧಿ ವಿಸ್ತರಣೆಗೆ ಅವಕಾಶ ಇಲ್ಲದ ಕಾರಣ ಮರು ನೇಮಕ ಆದೇಶ ಹೊರಡಿಸಲಾಗಿದೆ. ಈ ಮೂಲಕ ಡಿಸೆಂಬರ್ ಒಳಗೆ ಜಾತಿ ಗಣತಿ ವರದಿಯನ್ನು (Caste Census Report) ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಯೋಜನೆ ರೂಪಿಸಿದ್ದಾರೆ.
ಕಾಂತರಾಜ ಆಯೋಗ ವರದಿ ಅಂತಿಮ ವರದಿ ತಯಾರಿಸಲು ತಮ್ಮನ್ನು ಮುಂದುವರಿಸುವಂತೆ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಮನವಿ ಮಾಡಿದ್ದರು. ಸಿದ್ದರಾಮಯ್ಯ ಅವರು ಅದಕ್ಕೆ ಮೌಖಿಕ ಒಪ್ಪಿಗೆ ಕೊಟ್ಟಿದ್ದರು ಎಂದು ಸುದ್ದಿಯಾಗಿತ್ತು. ಇದೀಗ ಆದೇಶ ಹೊರಡಿಸುವ ಮೂಲಕ ಜಾತಿ ಗಣತಿ ವರದಿಯನ್ನು ಅಂತಿಮಗೊಳಿಸಲು ಸರ್ಕಾರ ಸಿದ್ಧವಾಗಿದೆ ಎನ್ನಲಾಗಿದೆ. ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ಸದಸ್ಯರಾದ ಕಲ್ಯಾಣ್ ಕುಮಾ್ ಎಚ್. ಎಸ್, ರಾಜಶೇಖರ್ ಬಿ. ಎಸ್, ಅರುಣ್ ಕುಮಾರ್, ಕೆ. ಟಿ ಸುವರ್ಣ, ಶಾರದಾ ನಾಯ್ಕ ಅವರನ್ನೂ ಮರು ನೇಮಕ ಮಾಡಲಾಗಿದೆ.
ಸಿಎಂಗೆ ಪತ್ರ ಬರೆದಿದ್ದ ಅಧ್ಯಕ್ಷರು
ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ (Backward Classes Commission Chairman Jayaprakash Hegde) ಅವರು ನವೆಂಬರ್ 22ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅಧಿಕಾರವಧಿ ಹೆಚ್ಚಿಸಲು ಮನವಿ ಮಾಡಿದ್ದರು. ಆಯೋಗವು 2015ರ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ತಯಾರಿಸುವ ಪ್ರಕ್ರಿಯೆಯಲ್ಲಿದೆ. ಈ ವರದಿಯನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ಸಲ್ಲಿಸಲು ಕಾಲಾವಕಾಶ ಬೇಕಿದ್ದು, ಪ್ರಸ್ತುತ ಆಯೋಗವನ್ನು ಮುಂದುವರಿಸಬೇಕು ಎಂದು ಕೋರಿದ್ದರು. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಕಾಲಾವಕಾಶವನ್ನು ವಿಸ್ತರಣೆ ಮಾಡಲಾಗುತ್ತಿದ್ದು, ವರದಿ ನೀಡುವವರೆಗೆ ಮುಂದುವರಿಯುವಂತೆ ಸೂಚನೆ ನೀಡಿದ್ದೇನೆ ಎಂದು ಎರಡು ದಿನದ ಹಿಂದಷ್ಟೇ ಮಾಧ್ಯಮಗಳಿಗೆ ಹೇಳಿದ್ದರು.
ಸಮಯಾವಕಾಶ ನೀಡಿರುವ ಸಿಎಂ
ಈ ಡಿಸೆಂಬರ್ ಒಳಗೆ ವರದಿಯನ್ನು ಸಲ್ಲಿಕೆ ಮಾಡುತ್ತೇವೆ. ವರದಿ ಮಿಸ್ ಆಗಿಲ್ಲ. ನನ್ನ ಅವಧಿ ಈ ತಿಂಗಳು ಮುಕ್ತಾಯ ಆಗುತ್ತಿತ್ತು. ಆದರೆ, ಸರ್ಕಾರದವರು ನನಗೆ ಈಗ ಅವಧಿಯನ್ನು ಮುಂದುವರಿಸಿದ್ದಾರೆ. ನಮಗೆ ಸಮಯ ಕೊಟ್ಟಿರುವುದರಿಂದ ಪುನಃ ಮರುಪರಿಶೀಲನೆ ಮಾಡಿ ಆರಂಭದಲ್ಲಿ ಮಾಡಲು ಆಗುತ್ತದೆ. ಆದಷ್ಟು ಬೇಗ ವರದಿ ಕೊಡುತ್ತೇವೆ. ಸಿಎಂ ಸಿದ್ದರಾಮಯ್ಯ ಅವರೇ ಸಮಯ ಕೊಟ್ಟ ಮೇಲೆ ನಮಗೆ ಸುಲಭ ಆಯಿತು ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದ್ದರು.
ಇದನ್ನೂ ಓದಿ : Safe Bangalore : ಬೆಂಗಳೂರಿಗರೇ ಆಪತ್ತು ಬಂತಾ? ಈ ನಂಬರ್‌ಗೆ ಕರೆ ಮಾಡಿ; 7 ನಿಮಿಷಕ್ಕೆ ಪೊಲೀಸರು ಹಾಜರ್!
ಏನಿದು ಕಾಂತರಾಜು ವರದಿ?
2013ರಿಂದ 2018ರವರೆಗೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 2014 -15ರಲ್ಲಿ ನಮ್ಮ ಸರ್ಕಾರ ಜಾತಿ ಸಮೀಕ್ಷೆ ಮತ್ತು ಸಾಮಾಜಿಕ ಆರ್ಥಿಕ ಸಮೀಕ್ಷೆ ಮಾಡಲು ಕಾಂತರಾಜು ನೇತೃತ್ವದ ಆಯೋಗವನ್ನು ರಚನೆ ಮಾಡಿತ್ತು. ಆದರೆ, ಆ ಸರ್ಕಾರದ ಅವಧಿ ಮುಗಿಯುವ ವೇಳೆಗೆ ವರದಿ ಸಿದ್ಧವಾಗಿರಲಿಲ್ಲ. ಬಳಿಕ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. 2018ರ ಕೊನೇ ಭಾಗದಲ್ಲಿ ಕಾಂತರಾಜು ನೇತೃತ್ವದ ಸಮಿತಿಯು ಜಾತಿ ಗಣತಿ ವರದಿಯನ್ನು ಸಿದ್ಧಪಡಿಸಿತ್ತು. 2019ರಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ (Congress JDS alliance) ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಈ ವರದಿಯನ್ನು ಅಂಗೀಕರಿಸಲು ಒಪ್ಪಿರಲಿಲ್ಲ. ಅಂದು ಹಿಂದುಳಿದ ವರ್ಗಗಳ ಸಚಿವರಾಗಿದ್ದ ಪುಟ್ಟರಂಗಶೆಟ್ಟಿ ಅವರಿಗೆ ಕರೆ ಮಾಡಿದ್ದ ಕುಮಾರಸ್ವಾಮಿ, ಆ ವಿಷಯವನ್ನು ಕ್ಯಾಬಿನೆಟ್‌ಗೆ ಚರ್ಚೆಗೆ ತರದಂತೆ ಸೂಚಿಸಿದ್ದರು. ಹಾಗಾಗಿ ಆ ವರದಿ ಹಾಗೆಯೇ ಉಳಿಯಿತು. ನಂತರ ಬಂದ ಮುಖ್ಯಮಂತ್ರಿಗಳ್ಯಾರೂ ಸಹ ಈ ಜಾತಿಗಣತಿ ವರದಿಯನ್ನು ಪಡೆಯಲು ಮುಂದೆ ಬರಲಿಲ್ಲ.